ಆರ್‌ಟಿಐ ಕಾಯ್ದೆಯ ತಿದ್ದುಪಡಿ ಮಸೂದೆ ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆ ಸಂಸತ್ತಿನಲ್ಲಿ ಅನುಮೋದನೆ ಪಡೆದುಕೊಂಡಿದೆ. ಈ ತಿದ್ದುಪಡಿಯು ಮಾಹಿತಿ ಹಕ್ಕು ಕಾಯ್ದೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಆದರೆ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸಮರ್ಥನೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆರ್‌ಟಿಐ ಎಂದರೆ ಏನು? ಹೊಸ ವಿಧೇಯಕದಲ್ಲಿ ತಿದ್ದುಪಡಿ ಮಾಡಲಾದ ಅಂಶಗಳು ಯಾವುವು? ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ವಾದ ಏನು? ಈ ಕುರಿತ ಮಾಹಿತಿ ಇಲ್ಲಿದೆ.

ಆರ್‌ಟಿಐ ಕಾಯ್ದೆಯ ತಿದ್ದುಪಡಿ ಮಸೂದೆ ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆ ಸಂಸತ್ತಿನಲ್ಲಿ ಅನುಮೋದನೆ ಪಡೆದುಕೊಂಡಿದೆ. ಈ ತಿದ್ದುಪಡಿಯು ಮಾಹಿತಿ ಹಕ್ಕು ಕಾಯ್ದೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ.

ಆದರೆ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸಮರ್ಥನೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆರ್‌ಟಿಐ ಎಂದರೆ ಏನು? ಹೊಸ ವಿಧೇಯಕದಲ್ಲಿ ತಿದ್ದುಪಡಿ ಮಾಡಲಾದ ಅಂಶಗಳು ಯಾವುವು? ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ವಾದ ಏನು? ಈ ಕುರಿತ ಮಾಹಿತಿ ಇಲ್ಲಿದೆ.

ಮಾಹಿತಿ ಹಕ್ಕು ಕಾಯ್ದೆ ಎಂದರೇನು?

ಮಾಹಿತಿ ಹಕ್ಕು ಕಾಯ್ದೆ (ರೈಟ್‌ ಟು ಇನ್‌ಫಾರ್ಮೇಶನ್‌ ಆ್ಯಕ್ಟ್) ಯನ್ನು ಅಕ್ಟೋಬರ್‌ 12, 2005ರಂದು ಜಾರಿಗೆ ತರಲಾಗಿದೆ. ದೇಶದ ಗೌಪ್ಯತೆಗೆ ಧಕ್ಕೆಯುಂಟುಮಾಡುವ ವಿಷಯಗಳನ್ನು ಹೊರತುಪಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟಯಾವುದೇ ಮಾಹಿತಿಯನ್ನು ಸಾರ್ವಜನಿಕರು ಈ ಕಾಯ್ದೆಯಡಿ ಪಡೆಯಬಹುದಾಗಿದೆ.

ಸರ್ಕಾರಿ ಕಾರ್ಯಗಳಲ್ಲಿ ಪಾರದರ್ಶಕತೆ ತರುವುದು ಈ ಕಾಯ್ದೆಯ ಮೂಲ ಉದ್ದೇಶ. ಜಮ್ಮು-ಕಾಶ್ಮೀರವನ್ನು ಹೊರತುಪಡಿಸಿ ದೇಶದ ಎಲ್ಲಾ ರಾಜ್ಯಗಳಲ್ಲಿ ಆರ್‌ಟಿಐ ಅನ್ವಯವಾಗುತ್ತದೆ. ಸರ್ಕಾರದ ಕಾಮಗಾರಿಗಳಿಗೆ ಸಂಬಂಧಿಸಿದ ಮಾಹಿತಿ, ಸರ್ಕಾರಿ ದಾಖಲೆ, ಕಡತ ಪರಿಶೀಲನೆ ಹೀಗೆ ಪ್ರತಿಯೊಂದು ಮಾಹಿತಿಯನ್ನೂ ಜನಸಾಮಾನ್ಯರು ಇದರಡಿ ಪಡೆದುಕೊಳ್ಳಬಹುದು. ಪ್ರತಿಯೊಂದು ಸರ್ಕಾರಿ ಇಲಾಖೆಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ನೇಮಿಸಲಾಗಿರುತ್ತದೆ. ಅರ್ಜಿದಾರರು ಕೇಳಿದ ಮಾಹಿತಿ ಒದಗಿಸಲು ಅವರು ಜವಾಬ್ದಾರರಾಗಿರುತ್ತಾರೆ.

ಹೊಸ ತಿದ್ದುಪಡಿ ಮಸೂದೆಯಲ್ಲಿ ಏನಿದೆ?

ಮಾಹಿತಿ ಹಕ್ಕು ಕಾಯ್ದೆ-2005ರ ಸೆಕ್ಷನ್‌ 13 ಮತ್ತು 16ರಲ್ಲಿ ಬದಲಾವಣೆಯನ್ನು ಈಗ ಕೇಂದ್ರ ಸರ್ಕಾರ ಮಾಡಿದೆ. ಅದರಲ್ಲಿ ಮಾಹಿತಿ ಆಯುಕ್ತರ ಸೇವಾವಧಿ, ವೇತನ, ಪಿಂಚಣಿಯನ್ನು ನಿರ್ಧರಿಸುವ ಅಧಿಕಾರವನ್ನು ಕೇಂದ್ರ ಸರ್ಕಾರ ತನ್ನ ಕೈಗೆ ತೆಗೆದುಕೊಂಡಿದೆ. ವಿವಾದದ ಮೂಲ ಇದೇ ಆಗಿದೆ.

ಅವಧಿ: ಮೂಲ ಕಾಯ್ದೆಯಲ್ಲಿ ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರ ಅಧಿಕಾರಾವಧಿ 5 ವರ್ಷ. ಅವರು 65 ವರ್ಷಗಳವರೆಗೆ ಮರುನೇಮಕವಾಗಬಹುದು ಎಂದಿದೆ. ಕೇಂದ್ರ ಸರ್ಕಾರದ ತಿದ್ದುಪಡಿ ವಿಧೇಯಕವು ಇವರ ಅಧಿಕಾರಾವಧಿಯನ್ನು ನಿರ್ಧರಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೇ ಪಡೆದುಕೊಂಡಿದೆ.

ವೇತನ: ಸದ್ಯ ಮುಖ್ಯ ಮಾಹಿತಿ ಆಯುಕ್ತರ ವೇತನವು ಕೇಂದ್ರ ಚುನಾವಣಾ ಆಯುಕ್ತರ ವೇತನಕ್ಕೆ ಸರಿಸಮನಾಗಿದೆ. ಅದೇ ರೀತಿ ರಾಜ್ಯ ಮಾಹಿತಿ ಆಯುಕ್ತರ ವೇತನವು ರಾಜ್ಯ ಮುಖ್ಯ ಚುನಾವಣಾ ಆಯುಕ್ತರ ವೇತನಕ್ಕೆ ಸರಿಸಮನಾಗಿದೆ. ನೂತನ ವಿಧೇಯಕದಲ್ಲಿ ಕೇಂದ್ರ ಮಾಹಿತಿ ಆಯುಕ್ತರು ಮತ್ತು ಎಲ್ಲಾ ಮಾಹಿತಿ ಆಯಕ್ತರ ವೇತನ ನಿರ್ಧರಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕೆಂದಿದೆ. ಅದು ಎಷ್ಟುಎಂಬ ಬಗ್ಗೆ ಕೇಂದ್ರ ಸರ್ಕಾರ ಇನ್ನೂ ನಿರ್ಧರಿಸಿಲ್ಲ.

ಪಿಂಚಣಿ: ಮೂಲ ಕಾಯ್ದೆಯಲ್ಲಿ ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರಾಗಿ ಆಯ್ಕೆಯಾದವರು ಈ ಹಿಂದೆ ಸರ್ಕಾರಿ ಸೇವೆಯಲ್ಲಿದ್ದು, ನಿವೃತ್ತರಾಗಿ ಪಿಂಚಣಿ ಪಡೆಯುತ್ತಿದ್ದರೆ, ಪಿಂಚಣಿ ಮೊತ್ತವನ್ನು ಕಳೆದು ವೇತನ ನೀಡಬೇಕೆಂದಿದೆ. ಇದನ್ನು ಹೊಸ ವಿಧೇಯಕದ ಮೂಲಕ ರದ್ದುಪಡಿಸಲಾಗಿದೆ. ಅಂದರೆ ಮಾಹಿತಿ ಆಯಕ್ತರಿಗೆ ಹಾಲಿ ವೇತನ ಮತ್ತು ಹಳೆಯ ಪಿಂಚಣಿ ಎರಡನ್ನೂ ನೀಡಲಾಗುತ್ತದೆಯೇ ಅಥವಾ ಇವೆರಡನ್ನೂ ತೆಗೆದು ಹೊಸದೊಂದು ವೇತನ ಪದ್ಧತಿಯನುಸಾರ ವೇತನ ನಿಗದಿಪಡಿಸಲಾಗುತ್ತದೆಯೇ ಎಂಬುದು ಸ್ಪಷ್ಟವಿಲ್ಲ.

ವಿಪಕ್ಷಗಳ ವಿರೋಧಕ್ಕೆ ಕಾರಣ ಏನು?

ಮಾಹಿತಿ ಹಕ್ಕು ಕಾಯ್ದೆ ತಿದ್ದುಪಡಿಗೆ ಕಾಂಗ್ರೆಸ್‌ ಸೇರಿದಂತೆ ಬಹುತೇಕ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಸೇರಿದಂತೆ ಪ್ರತಿಯೊಂದು ಇಲಾಖೆಯ ಭ್ರಷ್ಟಾಚಾರವನ್ನು ಹೊರಗೆಳೆಯುವ ಸಾಮರ್ಥ್ಯವಿರುವ ಕಾನೂನಿಗೆ ತಿದ್ದುಪಡಿ ಮಾಡಿ ಆರ್‌ಟಿಐ ಕಾಯ್ದೆಯನ್ನು ದುರ್ಬಲ ಮಾಡಲು ಮೋದಿ ಸರ್ಕಾರ ಹೊರಟಿದೆ ಎಂಬುದು ಅವುಗಳ ಆರೋಪ. ಮಾಹಿತಿ ಆಯುಕ್ತರ ಅಧಿಕಾರಾವಧಿ ಹಾಗೂ ಸಂಬಳಕ್ಕೆ ಸಂಬಂಧಪಟ್ಟನಿರ್ಧಾರಗಳನ್ನು ಕೇಂದ್ರ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡು ಮಾಹಿತಿ ಆಯುಕ್ತರನ್ನು ನಿಯಂತ್ರಿಸಲು ಹೊರಟಿದೆ.

ಅವರ ಕರ್ತವ್ಯದಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡಬಹುದು ಎಂಬುದು ವಿಪಕ್ಷಗಳ ವಾದ. ಕೇಂದ್ರ ಸರ್ಕಾರ ಮಾಹಿತಿ ಹಕ್ಕು ಆಯೋಗದ ಆಸ್ತಿತ್ವ ಮತ್ತು ಸ್ವಾತಂತ್ರ್ಯವನ್ನು ಹರಣ ಮಾಡುವ ಯತ್ನಕ್ಕೆ ಕೈಹಾಕಿದೆ. ಕೇಂದ್ರದ ಈ ನಿಲುವು ದೇಶದ ಪ್ರತಿಯೊಬ್ಬ ಪ್ರಜೆಯನ್ನೂ ಅಸಮರ್ಥನನ್ನಾಗಿ ಮಾಡುತ್ತದೆ ಎಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಕಿಡಿಕಾರಿದ್ದಾರೆ. ಹಿರಿಯ ಕಾಂಗ್ರೆಸ್ಸಿಗ ಶಶಿ ತರೂರ್‌ ಅವರೂ ಇದನ್ನು ‘ಆರ್‌ಟಿಐ ನಿವಾರಣಾ ಮಸೂದೆ’ (ಆರ್‌ಟಿಐ ಎಲಿಮಿನೇಶನ್‌ ಬಿಲ್‌) ಎಂದು ವ್ಯಂಗ್ಯವಾಗಿ ಬಣ್ಣಿಸಿದ್ದಾರೆ.

ಕೇಂದ್ರ ಸರ್ಕಾರದ ಸಮರ್ಥನೆ ಏನು?

ತಿದ್ದುಪಡಿ ಮಸೂದೆಯು ಆರ್‌ಟಿಐ ಕಾಯ್ದೆಯ ನಿಯಮಗಳನ್ನು ವ್ಯವಸ್ಥಿತಗೊಳಿಸಿ, ರೂಪರೇಷೆಗಳನ್ನು ಸದೃಢಗೊಳಿಸಲಿದೆ. ತಿದ್ದುಪಡಿಯಿಂದ ಆರ್‌ಟಿಐ ಕಾಯ್ದೆ ದುರ್ಬಲವಾಗುವುದಿಲ್ಲ. ಅಲ್ಲದೆ ಕೇಂದ್ರ ಮತ್ತು ರಾಜ್ಯ ಮಾಹಿತಿ ಹಕ್ಕು ಆಯುಕ್ತರ ವೇತನ, ವಯೋಮಿತಿಗೆ ಸಂಬಂಧಪಟ್ಟವಿಷಯಗಳಲ್ಲಿ ತಿದ್ದುಪಡಿ ಮಾಡಲಾಗುತ್ತಿದೆಯೇ ವಿನಃ, ಮಸೂದೆಯ ಸ್ವಾಯತ್ತೆಯ ಭಾಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಮಸೂದೆಯ ಅನುಸಾರ, ಕೇಂದ್ರ ಚುನಾವಣಾ ಆಯೋಗ ಹಾಗೂ ಕೇಂದ್ರ, ರಾಜ್ಯ ಮಾಹಿತಿ ಆಯೋಗಗಳ ಕಾರ್ಯವೈಖರಿ ಸಂಪೂರ್ಣ ಭಿನ್ನವಾಗಿದೆ. ಕಾಯಿದೆಯಲ್ಲಿ ಬಿಟ್ಟು ಹೋಗಿರುವ ಅಂಶಗಳನ್ನು ಸೇರಿಸಲಾಗಿದೆ.

2005 ರ ಕಾಯ್ದೆಯನ್ವಯ ಕೇಂದ್ರ ಮಾಹಿತಿ ಹಕ್ಕು ಆಯುಕ್ತರಿಗೆ ಸುಪ್ರೀಂಕೋರ್ಟ್‌ ನ್ಯಾಯಾಧೀಶರ ಸ್ಥಾನಮಾನ ನೀಡಲಾಗಿದೆ. ಆದರೆ ಅವರ ಕುರಿತ ತೀರ್ಪನ್ನು ಹೈಕೋರ್ಟ್‌ಗಳಲ್ಲಿ ಪ್ರಶ್ನಿಸಬಹುದು ಎಂದು ಹೇಳಲಾಗಿದೆ. ಇದು ಹೇಗೆ ಸಾಧ್ಯ? ಹಾಗಾಗಿ ತಿದ್ದುಪಡಿ ಮಾಡಲಾಗುತ್ತಿದೆ ಎಂಬುದು ಕೇಂದ್ರ ಸರ್ಕಾರದ ವಾದ.

ತಿದ್ದುಪಡಿಗೆ 2 ಅರ್ಜಿಗಳು ಕಾರಣವೇ?

ಇತ್ತೀಚೆಗೆ ಆರ್‌ಟಿಐ ಅಡಿ ಕೇಳಲಾಗಿದ್ದ ಎರಡು ಮಾಹಿತಿಗಳು ಕೇಂದ್ರ ಸರ್ಕಾರಕ್ಕೆ ಇರಿಸುಮುರುಸು ಉಂಟುಮಾಡಿದ್ದವು ಎಂದು ಹೇಳಲಾಗುತ್ತಿದೆ. 2017ರ ಜನವರಿಯಲ್ಲಿ ಆರ್‌ಟಿಐ ಕಾರ‍್ಯಕರ್ತರೊಬ್ಬರು ದೆಹಲಿ ವಿಶ್ವವಿದ್ಯಾಲಯದಲ್ಲಿ 1978ರ ಅವಧಿಯಲ್ಲಿ ಬಿ.ಎ. ಓದಿರುವ ವಿದ್ಯಾರ್ಥಿಗಳ ಮಾಹಿತಿ ಬೇಕೆಂದು ಅರ್ಜಿ ಸಲ್ಲಿದ್ದರು.

ಅದೇ ವರ್ಷ ಪ್ರಧಾನಿ ನರೇಂದ್ರ ಮೋದಿ ಪದವಿ ಪಡೆದಿರುವ ಮಾಹಿತಿ ಹಿನ್ನೆಲೆಯಲ್ಲಿ ಈ ಪ್ರಶ್ನೆ ಕೇಳಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಆರ್‌ಟಿಐ ಅಡಿಯಲ್ಲಿ ಸಾರ್ವಜನಿಕ ವಲಯದ ಎಲ್ಲಾ ಬ್ಯಾಂಕುಗಳಲ್ಲಿರುವ ವಸೂಲಾಗದ ಸಾಲದ ಮೊತ್ತ ಎಷ್ಟೆಂದು ಅರ್ಜಿ ಸಲ್ಲಿಸಲಾಗಿತ್ತು. ಆದರೆ ಆರ್‌ಬಿಐ ಈ ಮಾಹಿತಿ ನೀಡಲು ನಿರಾಕರಿಸಿತ್ತು.

ದೇಶದ ಅತ್ಯಂತ ಯಶಸ್ವಿ ಕಾಯ್ದೆ ಆರ್‌ಟಿಐ

ಆರ್‌ಟಿಐ ಕಾಯ್ದೆಯನ್ನು ಸ್ವತಂತ್ರ ಭಾರತದ ಅತ್ಯಂತ ಯಶಸ್ವಿ ಕಾನೂನು ಎಂದು ಪರಿಗಣಿಸಲಾಗಿದೆ. ಇದು ಸಾಮಾನ್ಯ ನಾಗರಿಕರಿಗೆ ಸರ್ಕಾರಿ ಅಧಿಕಾರಿಗಳನ್ನು ಪ್ರಶ್ನಿಸುವ ವಿಶ್ವಾಸ ಮತ್ತು ಹಕ್ಕನ್ನು ನೀಡಿದೆ. ಅಂದಾಜಿನ ಪ್ರಕಾರ, ಪ್ರತಿವರ್ಷ ಸುಮಾರು 60 ಲಕ್ಷ ಅರ್ಜಿಗಳು ದಾಖಲಾಗುತ್ತಿವೆ. ಇದನ್ನು ನಾಗರಿಕರು ಮತ್ತು ಮಾಧ್ಯಮಗಳು ಬಳಸುತ್ತವೆ. ಅನಿಯಂತ್ರಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದರ ವಿರುದ್ಧ ಸರ್ಕಾರಿ ನೌಕರರಿಗೆ ತಡೆಯೊಡ್ಡುವ ರೀತಿಯಲ್ಲಿ ಕಾನೂನು ಕಾರ್ಯನಿರ್ವಹಿಸುತ್ತಿದೆ.

ಆರ್‌ಟಿಐನಿಂದ ಬಯಲಾದ ಪ್ರಮುಖ ಹಗರಣಗಳು

ಆದಶ್‌ರ್‍ ಸೊಸೈಟಿ ಹಗರಣ

ದಕ್ಷಿಣ ಮುಂಬೈನ ಕೊಲಾಬಾ ಪ್ರದೇಶದಲ್ಲಿರುವ 31 ಮಹಡಿಯ ಆದಶ್‌ರ್‍ ಸೊಸೈಟಿ ಫ್ಲ್ಯಾಟ್‌ಗಳನ್ನು ಕಾರ್ಗಿಲ್ ಸಮರದ ಹೀರೋಗಳು ಹಾಗೂ ಮೃತ ಯೋಧರ ಪತ್ನಿಯರಿಗೆ ನೀಡುವ ಸಲುವಾಗಿ ನಿರ್ಮಿಸಲಾಗಿತ್ತು.

ಆರ್‌ಟಿಐ ಕಾಯ್ದೆ ಜಾರಿಯಾದ ಕೆಲವೇ ವರ್ಷಗಳಲ್ಲಿ (2010) ಆರ್‌ಟಿಐ ಕಾರ‍್ಯಕರ್ತ ಸಂಪ್ರೀತ್‌ ಪಾತ್ರಾ ಮತ್ತು ಯೋಗಾಚಾರ‍್ಯ ಆನಂದ್‌ಜಿ ಈ ಬಗ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಈ ಮನೆಗಳನ್ನು ರಾಜಕಾರಣಿಗಳು ಹಾಗೂ ಅವರ ಸಂಬಂಧಿಗಳು, ನಿವೃತ್ತ ಸೇನಾಧಿಕಾರಿಗಳು ಬಳಸುತ್ತಿದ್ದರು ಎಂಬ ಅಂಶ ಹೊರಬಂತು. ಅಲ್ಲದೆ, ಅಪಾರ್ಟ್‌ಮೆಂಟ್‌ನಲ್ಲಿ ಸಾರ್ವಜನಿಕರಿಗೆ ಶೇ.40ರಷ್ಟುಫ್ಲ್ಯಾಟ್‌ ಹಂಚಿಕೆ ಮಾಡಿರುವ ಆರೋಪವೂ ಕೇಳಿಬಂದಿತು. ಇದೇ ಪ್ರಕರಣದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಅಶೋಕ್‌ ಚೌಹಾಣ್‌ ರಾಜೀನಾಮೆ ನೀಡಬೇಕಾಯಿತು.

ಯುಪಿಎಯ 2ಜಿ ಹಗರಣ

2ಜಿ (ಸೆಕೆಂಡ್‌ ಜನರೇಶನ್‌ ದೂರಸಂಪರ್ಕ ಸೇವೆ) ಮೊಬೈಲ್ ಸೇವೆಗೆ 2008ರಲ್ಲಿ ಆಗಿನ ಕಾಂಗ್ರೆಸ್‌ ನೇತೃತ್ವದ ಯುಪಿಎ ಮೈತ್ರಿ ಸರ್ಕಾರ 9 ದೂರಸಂಪರ್ಕ ಕಂಪನಿಗಳಿಗೆ ಬೇಕಾಬಿಟ್ಟಿಲೈಸೆನ್ಸ್‌ ನೀಡಿದ ಪ್ರಕರಣ ಇದು. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ 1,76,000 ಕೋಟಿ ರು. ನಷ್ಟಉಂಟಾಗಿತ್ತು ಎಂಬ ಸಂಗತಿ ಆರ್‌ಟಿಐ ಅಡಿ ಸಲ್ಲಿಸಿದ್ದ ಅರ್ಜಿಯಿಂದಾಗಿಯೇ ಹೊರಬಂತು. ಅದರಿಂದಾಗಿ ಕೆಲ ಸಚಿವರು ರಾಜೀನಾಮೆ ನೀಡಬೇಕಾಯಿತು. ದೊಡ್ಡ ದೊಡ್ಡ ಉದ್ಯಮಿಗಳು ಜೈಲಿಗೆ ಹೋದರು.

ಕಾಮನ್‌ವೆಲ್ತ್‌ ಗೇಮ್ಸ್‌ ಹಗರಣ

2010ರಲ್ಲಿ ಭಾರತಕ್ಕೆ ಅವಮಾನವೆಸಗಿದ ಮತ್ತೊಂದು ಹಗರಣವಿದು. ಭಾರತೀಯ ಒಲಿಂಪಿಕ್‌ ಅಸೋಸಿಯೇಶನ್‌ ಹಾಗೂ ಕಾಮನ್‌ವೆಲ್ತ್‌ ಗೇಮ್ಸ್‌ನ ಅಧ್ಯಕ್ಷರಾಗಿದ್ದ ಕಾಂಗ್ರೆಸ್‌ ಸಂಸದ ಸುರೇಶ್‌ ಕಲ್ಮಾಡಿ ಹಗರಣದ ಪ್ರಮುಖ ಆರೋಪಿ.

ಕಾಮನ್ವೆಲ್ತ್‌ ಗೇಮ್ಸ್‌ನ ಸಿದ್ಧತೆಗಾಗಿ ಅಸ್ತಿತ್ವದಲ್ಲೇ ಇರದ ಕಂಪನಿಗಳಿಗೆ ಹಣ ನೀಡಿದ, ಗುತ್ತಿಗೆ ನೀಡುವಲ್ಲಿ ಬೇಕೆಂದೇ ವಿಳಂಬ ಮಾಡಿ ಕೃತಕವಾಗಿ ಬೆಲೆ ಏರುವಂತೆ ಮಾಡಿದ, ಕೊಟ್ಟಅನುದಾನದಲ್ಲಿ ಅರ್ಧವನ್ನು ಮಾತ್ರ ಆಟಕ್ಕಾಗಿ ಬಳಸಿದ, ಸ್ವಿಸ್‌ ಟೈಮಿಂಗ್ಸ್‌ ಕಂಪನಿಗೆ ಟೈಮಿಂಗ್‌ ಪರಿಕರಕ್ಕಾಗಿ 141 ಕೋಟಿ ರು. ಮೌಲ್ಯದ ಒಪ್ಪಂದವನ್ನು ಆಹ್ವಾನಿಸುವ ಮೂಲಕ ಪರಿಕರಗಳಿಗೆ ಅನಗತ್ಯವಾಗಿ 95 ಕೋಟಿಯಷ್ಟುಮೌಲ್ಯ ಹೆಚ್ಚಿಸಿದ ಆರೋಪ ಕಲ್ಮಾಡಿ ಮೇಲಿತ್ತು. ಇದೂ ಕೂಡ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಯಿಂದ ಬೆಳಕಿಗೆ ಬಂದಿತ್ತು.

ಇತರೆ ಹಗರಣಗಳು

ಇಂಡಿಯನ್‌ ರೆಡ್‌ಕ್ರಾಸ್‌ ಸೊಸೈಟಿ ಹಗರಣ

ಅನಿಲ್‌ ಅಗರ್ವಾಲ್‌ ಯೂನಿವರ್ಸಿಟಿ ಹಗರಣ

ಅಸ್ಸಾಂನ ಪಡಿತರ ಹಗರಣ