ನವದೆಹಲಿ (ಏ. 30): ಹೈಕಮಾಂಡ್‌ ಒಪ್ಪಿದರೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಾಣಸಿಯಲ್ಲಿ ಸ್ಪರ್ಧಿಸುವುದಾಗಿ ಸುಳಿವು ನೀಡಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಕೊನೆ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಪಕ್ಷದ ನಿರ್ಣಾಯಕ ವ್ಯಕ್ತಿಯಾದ ತನ್ನ ಅಣ್ಣ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ವಿಟೋ ಅಧಿಕಾರ ಹೊಂದಿರುವ ತಾಯಿ ಸೋನಿಯಾ ಗಾಂಧಿಯೊಂದಿಗೆ ಸುದೀರ್ಘ ಮಾತುಕತೆ ನಡೆಸಿ ಅವರು ಈ ನಿರ್ಣಯಕ್ಕೆ ಬಂದಿರಬಹುದು. ಆದರೆ, ಈ ನಿರ್ಣಯದ ಹಿಂದಿನ ಸ್ವಾರಸ್ಯ ಏನು ಎಂಬುದನ್ನು ನಾವೆಲ್ಲ ಊಹಿಸಬಹುದಷ್ಟೆ.

ಉಮಾ ಎದುರು ಸಾಧ್ವಿ ಪ್ರಜ್ಞಾ ಕಣ್ಣೀರಧಾರೆ

‘ರಹಸ್ಯ ಒಳ್ಳೆಯದು’ ಎಂದಿದ್ದ ರಾಹುಲ್‌ ಗಾಂಧಿ ಅವರು ಅಜಯ್‌ ರೈಯನ್ನೇ ಮತ್ತೊಮ್ಮೆ ಮೋದಿ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿಯಾಗಿ ವಾರಾಣಸಿಯಿಂದ ಕಣಕ್ಕಿಳಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ರೈ ಮೂರನೇ ಸ್ಥಾನ ಪಡೆದಿದ್ದರು. ರೈ ಕಣಕ್ಕಿಳಿಸುವ ಮೂಲಕ ಪ್ರಿಯಾಂಕಾ ಅವರ ಚಂಡಮಾರುತ ತಣ್ಣಗಾಗಿ ಮೋದಿ ಗೆಲುವಿಗೆ ಕಾಂಗ್ರೆಸ್‌ ಸುಲಭ ದಾರಿ ಮಾಡಿಕೊಟ್ಟಂತಾಗಿದೆ.

ಮೊನ್ನೆ ವಾರಾಣಸಿಯಲ್ಲಿ ನರೇಂದ್ರ ಮೋದಿ ಅವರ ಅದ್ಧೂರಿ ರೋಡ್‌ ಶೋ ನಂತರ 2 ಗಂಟೆಯಲ್ಲಿ ಅಜಯ್‌ ರೈ ನಾಮಪತ್ರ ಸಲ್ಲಿಸಿದ್ದರು. ಮೋದಿ ರೋಡ್‌ ಶೋ ಥೇಟ್‌ ವಿಜಯದ ಮೆರವಣಿಗೆಯಂತಿತ್ತು. ಈ ವಿಜಯೋತ್ಸವದ ನಂತರ ಕಾಂಗ್ರೆಸ್‌ ನಾಯಕರು ಪ್ರಿಯಾಂಕಾ ಗಾಂಧಿಯನ್ನು ಪಕ್ಷವು ವಾರಾಣಸಿ ಸ್ಪರ್ಧೆಯಿಂದ ಕೈಬಿಟ್ಟಿದ್ದೇಕೆ ಎಂಬ ಪ್ರಶ್ನೆ ಕೇಳಿದರೆ ಉತ್ತರಿಸದೆ ಜಾರಿಕೊಳ್ಳತೊಡಗಿದ್ದಾರೆ.

'ಮೈತ್ರಿ ಭಿನ್ನಮತದ ಚಿತ್ರ ಶೀಘ್ರ ತೆರೆಗೆ, ನೋಡಿ ಆನಂದಿಸಿ'

ಬ್ರಹ್ಮಾಸ್ತ್ರ ಪ್ರಯೋಗವೇ ಆಗಿಲ್ಲ!

ಕಾಂಗ್ರೆಸ್‌ನ ಮೊದಲಿನ ಆಯ್ಕೆ ಸ್ಪಷ್ಟವಾಗಿತ್ತು. ದೇಶದ ಅತ್ಯಂತ ಪವರ್‌ಫುಲ್‌ ನಾಯಕನೆದುರಿಗೆ ಸ್ಪರ್ಧಿಸಿ ಪ್ರಿಯಾಂಕಾ ಗಾಂಧಿ ರಾಜಕೀಯ ಜೀವನ ಆರಂಭಿಸಿದ್ದರೆ ಅವರ ಅಧಿಕೃತ ರಾಜಕೀಯ ಯಾತ್ರೆಗೆ ಅದ್ಧೂರಿ ಶುರುವಾತು ಸಿಗುತ್ತಿತ್ತು. ಒಂದೊಮ್ಮೆ ಸೋತಿದ್ದರೂ ಅದರಿಂದ ಸಾಕಷ್ಟುಪಾಠ ಕಲಿತಂತಾಗುತ್ತಿತ್ತು. ಅದು ಹೋಗಲಿ, ಮೋದಿಯವರ ಗೆಲುವಿನ ಅಂತರವನ್ನು ಅಲ್ಪ ಮಟ್ಟಿಗೆ ತಗ್ಗಿಸಿದ್ದರೂ ಕಾಂಗ್ರೆಸ್‌ ಆಕೆಗಿಟ್ಟಿರುವ ‘ಬ್ರಹ್ಮಾಸ್ತ್ರ’ ಎಂಬ ಹೆಸರಿಗೆ ಅರ್ಥ ಬರುತ್ತಿತ್ತು. ಆದರೆ ಆಯುಧ ಯುದ್ಧಭೂಮಿಗೆ ಹೋಗಲೇ ಇಲ್ಲ.

ಕಾಂಗ್ರೆಸ್‌ನ ಲೆಕ್ಕಾಚಾರ ಏನು?

ಈ ಬಗ್ಗೆ ಕಾಂಗ್ರೆಸ್‌ನ ಒಳಗೇ ಎರಡೆರಡು ಅಭಿಪ್ರಾಯವಿದೆ. ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರ ಪ್ರಕಾರ, ಪ್ರಿಯಾಂಕಾ ಗಾಂಧಿಗೆ ವಾರಾಣಸಿ ಸ್ಪರ್ಧೆ ಬಗ್ಗೆ ಗಂಭೀರತೆಯೇ ಇರಲಿಲ್ಲ. ಪಕ್ಷದ ಉನ್ನತ ಮಟ್ಟದಲ್ಲಿ ಮೋದಿ ವಿರುದ್ಧ ಪ್ರಿಯಾಂಕಾ ಎಂಬ ಚರ್ಚೆಯೇ ನಡೆದಿರಲಿಲ್ಲ. ಇದು ಆರಂಭವಾಗಿದ್ದು ಕಾಂಗ್ರೆಸ್‌ ಕಾರ‍್ಯಕರ್ತರ ಬೇಡಿಕೆ ಮತ್ತು ವದಂತಿಯಿಂದಾಗಿ. ಸಹೋದ್ಯೋಗಿಗಳಿಂದ ಈ ಕುರಿತ ಹೇಳಿಕೆಗಳು ಬಂದಿದ್ದೇ ಕಾಂಗ್ರೆಸ್‌ನ ಹವಾ ಇರುವಂತೆ ಮಾಡಲು ಮತ್ತು ಬಿಜೆಪಿಯನ್ನು ಗೊಂದಲಗೊಳಿಸಲು. ಆದರೆ ಮೋದಿ ವಿರುದ್ಧ ಪ್ರಿಯಾಂಕಾ ಸ್ಪರ್ಧಿಸುವ ಸಾಧ್ಯತೆಗಳಿವೆ ಎಂಬ ಅನುಮಾನ ಪ್ರಾರಂಭವಾಗಿದ್ದು ಸ್ವತಃ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ಆರಂಭಿಸಿದಾಗ. ಅದು ಸ್ವಲ್ಪಮಟ್ಟಿಗೆ ಸದ್ದು ಮಾಡಿತ್ತು.

ಮತ್ತೊಬ್ಬ ಕಾಂಗ್ರೆಸ್‌ ನಾಯಕರ ಪ್ರಕಾರ, ಪ್ರಿಯಂಕಾ ಗಾಂಧಿ ಅವರು ಮೋದಿ ವಿರುದ್ಧ ಸ್ಪರ್ಧೆಗೆ ಮನಸ್ಸು ಮಾಡಿದ್ದರು. ಆದರೆ ಆಕೆಯ ರಾಜಕೀಯ ಜೀವನ ಸೋಲಿನಿಂದ ಆರಂಭವಾಗುವುದು ಅಣ್ಣ ರಾಹುಲ್‌ ಮತ್ತು ತಾಯಿ ಸೋನಿಯಾ ಗಾಂಧಿಗೆ ಇಷ್ಟವಿರಲಿಲ್ಲ. ಕಾಂಗ್ರೆಸ್‌ನ ಸಮೀಕ್ಷೆಗಳ ಪ್ರಕಾರ ವಾರಾಣಸಿಯಲ್ಲಿ ಮೋದಿ ಅಜೇಯರು. ಹೀಗಾಗಿ ಪ್ರಿಯಾಂಕಾ ಗಾಂಧಿ ತಮ್ಮ ಕುಟುಂಬದ ನಿರ್ಣಯಕ್ಕೆ ಬದ್ಧರಾದರು. ಅಲ್ಲದೆ ಇನ್ನೊಂದು ಲೆಕ್ಕಾಚಾರವೂ ಇದೆ. ರಾಹುಲ್‌ ಗಾಂಧಿ ಅಮೇಠಿ ಮತ್ತು ವಯನಾಡ್‌ ಎರಡೂ ಕ್ಷೇತ್ರಗಳಲ್ಲೂ ಗೆದ್ದರೆ ಪ್ರಿಯಾಂಕಾ ಗಾಂಧಿ ಅಮೇಠಿ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರಂತೆ.

ಮತ್ತೆ ಪ್ರಚಾರದಲ್ಲಿ ಪ್ರಿಯಾಂಕಾ ಗಾಂಧಿ

ಉತ್ತರ ಪ್ರದೇಶದ ಮಹಾಗಠಬಂಧನದಲ್ಲಿ ಒಪ್ಪಂದದ ಪ್ರಕಾರ ವಾರಾಣಸಿ ಸಮಾಜವಾದಿ ಪಕ್ಷದ ಕ್ಷೇತ್ರ. ಪ್ರಿಯಾಂಕಾ ಸ್ಪರ್ಧೆಗೆ ಅಖಿಲೇಶ್‌ ಸಂತೋಷದಿಂದ ಬೆಂಬಲ ನೀಡಿ, ತಮ್ಮ ಅಭ್ಯರ್ಥಿಯನ್ನು ಹಿಂಪಡೆಯುತ್ತಿದ್ದರು. ಆದರೆ, ಕುಟುಂಬದ ವಿಟೋ ಅಧಿಕಾರ ವಾರಣಾಸಿಯಿಂದ ಪ್ರಿಯಾಂಕಾ ಅವರನ್ನು ಹಿಂದೆ ಸರಿಯುವಂತೆ ಮಾಡಿದೆ.

ಮುಂದೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಪ್ರಬಲ ಸ್ಪರ್ಧೆಯಿರುವ 18 ಕಡೆಗಳಲ್ಲಿ ಪ್ರಿಯಾಂಕಾ ಪ್ರಚಾರ ನಡೆಸಲಿದ್ದಾರೆ ಎನ್ನುತ್ತಾರೆ ಕಾಂಗ್ರೆಸ್‌ ನಾಯಕರು. ಮೋದಿ ಬಿಜೆಪಿಯ ಪ್ರಮುಖ ಪ್ರಚಾರಕ. ಅವರನ್ನು ಕಟ್ಟಿಹಾಕಲು ಪ್ರಿಯಾಂಕಾಗೆ ಸಾಧ್ಯವಿದೆ ಎಂದು ಬಿಂಬಿಸಿದ್ದೇ ಪ್ರಿಯಾಂಕಾ ಅವರ ಸದ್ಯದ ಗೆಲುವು.

ಮಹಾಗಠಬಂಧನಕ್ಕೆ ಸಹಾಯ

ಪ್ರಿಯಾಂಕಾ ಸ್ಪರ್ಧಿಸುವುದಿಲ್ಲ ಎನ್ನುವ ಮೂಲಕ ಕಾಂಗ್ರೆಸ್‌ ಉತ್ತರ ಪ್ರದೇಶದಲ್ಲಿ ಮಹಾಗಠಬಂಧನ್‌ಗೆ ಸಹಾಯ ಮಾಡಿರುವುದು ಈ ನಿರ್ಣಯದ ಹಿಂದಿನ ಮತ್ತೊಂದು ಮಗ್ಗುಲು. ಗಠಬಂಧನಕ್ಕೆ ಸಹಾಯ ಮಾಡುವ ಅತ್ಯುತ್ತಮ ವಿಧಾನವೆಂದರೆ ಗಾಂಧಿ ಕ್ಷೇತ್ರಗಳಾದ ಅಮೇಠಿ, ರಾಯ್‌ಬರೇಲಿ ಬಿಟ್ಟು ಉಳಿದೆಲ್ಲಾ ಕ್ಷೇತ್ರಗಳನ್ನು ಬಿಟ್ಟುಕೊಡುವುದು.

ಆ ಮೂಲಕ ಅಲ್ಲಿ ಬಿಜೆಪಿ ವರ್ಸಸ್‌ ಯುನೈಟೆಡ್‌ ಅಪೋಸಿಶನ್‌ ಮಾತ್ರವೇ ಸ್ಪರ್ಧೆಸಿ, ಮಹಾಗಠಬಂಧನದ ವೋಟುಗಳಿಗೆ ಅಡ್ಡಗಾಲು ಹಾಕಲು ಹೋಗದಿರುವುದು. ಏಕೆಂದರೆ, ಈ ಹಿಂದಿನ ಅಂಕಿಅಂಶಗಳ ಪ್ರಕಾರ ಬಿಜೆಪಿ ಯಾವಾಗಲೂ ತ್ರಿಕೋಣ ಸ್ಪರ್ಧೆಯಲ್ಲಿ ಲಾಭ ಪಡೆಯುತ್ತದೆ.

‘ಸ್ಪರ್ಧೆಯಿಂದ ಹೊರಬಿದ್ದ ಪ್ರಿಯಾಂಕಾ ವಾದ್ರಾ’ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಬ್ಲಾಗ್‌ ಬರೆದು ಹಿಗ್ಗಿದ್ದಾರೆ. ಉಳಿದ ನಾಲ್ಕು ಸುತ್ತುಗಳಲ್ಲಿ ಕಾಂಗ್ರೆಸ್‌ ಗುರಿ, ಅದರಲ್ಲೂ ಉತ್ತರ ಪ್ರದೇಶದ ಸುತ್ತುಗಳನ್ನು ಗಮನಿಸಿ 2019ರಲ್ಲಿ ಜಯಭೇರಿ ಬಾರಿಸುವವವರು ಯಾರು ಎಂದು ಹೇಳಬಹುದು. ಎಂತಹ ಕೆಟ್ಟಸೋಲು ಎದುರಾದರೂ ಅದರೊಂದಿಗೆ ರಾಜಿ ಮಾಡಿಕೊಳ್ಳುವುದಕ್ಕೆ ಕಾಂಗ್ರೆಸ್‌ ಪಕ್ಷವೀಗ ಹಿಂದೆಮುಂದೆ ನೋಡುತ್ತಿಲ್ಲ. ಅದಕ್ಕೆ ಇತ್ತೀಚಿನ ಉದಾಹರಣೆ: ‘ವಿಧೇಯ ಮಗಳು ಕುಟುಂಬದ ನಿರ್ಧಾರಕ್ಕೆ ಬಾಗಿರುವುದು.’

- ಸ್ವಾತಿ ಚತುರ್ವೇದಿ, ಹಿರಿಯ ಪತ್ರಕರ್ತೆ