Asianet Suvarna News Asianet Suvarna News

ರೈತರ ಆತ್ಮಹತ್ಯೆ ತಡೆಯಲು ಇಲ್ಲಿದೆ ಪರಿಹಾರ

ಉದ್ಯಮಿಯೋ, ರಾಜಕಾರಣಿಯೋ ಆತ್ಮಹತ್ಯೆ ಮಾಡಿಕೊಂಡರೆ ಅದರ ಬಗ್ಗೆ ತನಿಖೆ ನಡೆಯುತ್ತದೆ. ಆದರೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡರೆ ಅದು ಸಾಲ ತೀರಿಸಲಾಗದೆ ಮಾಡಿಕೊಂಡ ಆತ್ಮಹತ್ಯೆ
ಎಂದು ಘೋಷಿಸಿ ಸುಮ್ಮನಾಗುತ್ತಾರೆ.

Reasons for farmer suicide
Author
Bengaluru, First Published Sep 20, 2018, 11:25 AM IST

ಬೆಂಗಳೂರು (ಸೆ. 20): ದೇಶದಾದ್ಯಂತ ದಿನನಿತ್ಯ ಕೇಳಿಬರುತ್ತಿರುವ ಸುದ್ದಿಗಳಲ್ಲಿ ರೈತರ ಸಾವಿನ ಸುದ್ದಿ ಕೂಡ ಒಂದು. ದೇಶದ ಬೆನ್ನೆಲುಬು, ಆಧಾರಸ್ತಂಭ ಎಂದೆಲ್ಲಾ ಕರೆಯಲ್ಪಡುವ ರೈತನ ಸಾವು ವಿಷಾದನೀಯ. ರಾಷ್ಟ್ರದ ಪ್ರತಿ ಹಳ್ಳಿಗಳಲ್ಲೂ ರೈತನ ‘ಕಗ್ಗೊಲೆ’ ನಡೆಯುತ್ತಲೇ ಇದೆ.

ಹೊಸ ಸರ್ಕಾರದ ಪ್ರಣಾಳಿಕೆಯಲ್ಲಿ ರೈತರ ಪರವಾದ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಳ್ಳುವ ಭರವಸೆ ಇತ್ತಾದರೂ ರೈತರ ಆತ್ಮಹತ್ಯೆ ತಗ್ಗಿಸಲು ಸರ್ಕಾರಕ್ಕೆ ಸಾಧ್ಯವಾಗದೇ ಇರುವುದು ವಿಪರ್ಯಾಸ. ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿದ್ದಂತೆ ಸಾಲವೇನೋ ಮನ್ನಾ ಮಾಡಿದೆ. ಆದರೆ ಎಷ್ಟು ಸಾಲ ಮನ್ನ ಆಗಿದೆ, ಯಾರ ಸಾಲ ಮನ್ನ ಆಗುತ್ತದೆ ಎಂಬ ಬಗ್ಗೆ ರೈತರಿಗಿನ್ನೂ ಸ್ಪಷ್ಟತೆ ಇಲ್ಲ.

ಚುನಾವಣಾ ಸಮಯದಲ್ಲಿ ರೈತರ ಪರವಾಗಿ ಹೋರಾಟಕ್ಕಿಳಿಯುವ ಜನನಾಯಕರು ಚುನಾವಣೆಯ ನಂತರ ರೈತರ ಸಾವಿಗೂ ನಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುವುದು ಶೋಚನೀಯ.

ರೈತನ ಸಾವಿನ ತನಿಖೆ ಏಕಿಲ್ಲ?

ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿದ್ದಾನೆ ಎಂದರೆ ಅದು ಸಾಲಬಾಧೆ ತಾಳಲಾರದೆ ಮಾಡಿಕೊಂಡ ಆತ್ಮಹತ್ಯೆ ಎಂದೇ ಬಿಂಬಿಸಲಾಗುತ್ತದೆ. ಆದರೆ ಹಲವು ರೈತರ ಸಾವಿಗೆ ಕಾರಣ ಬೇರೆಯೇ ಆಗಿರಬಹುದು. ಯಾವುದೋ ಕಂಪನಿಯ ಉದ್ಯೋಗಿಯೋ, ರಾಜಕಾರಣಿಯೋ, ಕಲಾವಿದರೋ ಅಷ್ಟೇ ಏಕೆ ಸಾಮಾನ್ಯ ಪ್ರಜೆಯೋ ಆತ್ಮಹತ್ಯೆಗೆ ಒಳಗಾದರೆ ಆ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತದೆ. ಆದರೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡರೆ ಅದು ಸಾಲ ತೀರಿಸಲಾಗದೆ ಮಾಡಿಕೊಂಡ ಆತ್ಮಹತ್ಯೆ ಎಂದು ಘೋಷಿಸಿ ರೈತರ ಜೀವಕ್ಕೆ ಹಣದ ಬೆಲೆ ಕಟ್ಟಿ ಸುಮ್ಮನಾಗುತ್ತಾರೆ.

ರೈತರ ಸಾವಿಗೂ ನ್ಯಾಯ ದೊರಕಬೇಕಿದೆ. ಯಾವುದೋ ಕಂಪನಿಯ ಮೋಸ, ಬ್ಯಾಂಕುಗಳ ಸುಲಿಗೆ, ಅತಿಯಾದ ಸುಂಕ, ತಾನು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದ ಕಾರಣ ಆತನ ಸಾವಿನ ಹಿಂದಿರಬಹುದು.

ಸಾವಿಗೆ ಮುಂಚೆಯೇ ಗಮನಹರಿಸಿ

ದಿನದಿಂದ ದಿನಕ್ಕೆ ರೈತ ಸಮಸ್ಯೆಯ ಸುಳಿಯೊಳಗೆ ಜಾರುತ್ತಿದ್ದು, ಅವರ ಆತ್ಮಸ್ಥೈರ್ಯ ಬಲಪಡಿಸುವ ಕಾರ್ಯವಾಗಬೇಕಿದೆ. ಈ ಕಾರಣಕ್ಕೆ ಜನಪ್ರತಿನಿಧಿಗಳು, ನಾಯಕರು ರೈತರ ಪರವಾಗಿ ಅವರ ಬೆನ್ನಿಗೆ ನಿಂತು ಪ್ರತಿ ಹಂತದಲ್ಲಿಯೂ ಜೊತೆಗಿರುವ, ಅವರಿಗೆ ಸ್ಫೂರ್ತಿ ತುಂಬುವ ಕಾರ್ಯಕ್ಕೆ ಮುಂದಾಗಬೇಕಿದೆ.

ರೈತರನ್ನು ಸ್ವಾವಲಂಬನೆಯ ಕಡೆಗೆ ಕರೆದೊಯ್ಯುವ ನಾಯಕರ ಅಗತ್ಯವಿದೆ. ಅತ್ಯಂತ ಹೆಚ್ಚು ಸಮಸ್ಯೆಗಳನ್ನು ಹೊಂದಿರುವ ರೈತರನ್ನು ಗುರುತಿಸಿ ಅವರಿಗೆ ಬೇಕಾದ ಜೀವನಾಧಾರ ಸೌಕರ್ಯಗಳನ್ನು ಸರಿಯಾದ ಸಮಯಕ್ಕೆ ಒದಗಿಸುವ ಕಾರ್ಯವಾಗಬೇಕಿದೆ.

ಹಳೆ ಯೋಜನೆಗಳನ್ನೇ ಜಾರಿಗೊಳಿಸಿ

ರೈತರ ಮನ ಗೆಲ್ಲುವ ದೃಷ್ಟಿಯಿಂದ ಸರ್ಕಾರಗಳು ಹೊಸ ಹೊಸ ಯೋಜನೆಗಳನ್ನು ಘೋಷಿಸುತ್ತವೆ. ಇವು ಕೇವಲ ಸರ್ಕಾರದ ತೋರ್ಪಡಿಕೆಯ ಯೋಜನೆಗಳಾಗಿದ್ದು, ಅನುಷ್ಠಾನಕ್ಕೆ ಬರುವ ವೇಳೆಗೆ ಇನ್ನೂ ಸಾವಿರಾರು ರೈತರ ಸಾವು ದಾಖಲಾಗುತ್ತದೆ.

ಇದನ್ನು ತಡೆಯಬೇಕಾದರೆ ರೈತರಿಗಾಗಿ ಹಿಂದೆಯೇ ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ಸ್ಥಳೀಯ ಆಡಳಿತದ ಜೊತೆಗೂಡಿ ಸೂಕ್ತ ಫಲಾನುಭವಿಗಳಿಗೆ ಅವು ತಲುಪುವಂತೆ ಮಾಡಬೇಕು. ಒಂದು ವೇಳೆ ಹೊಸ ಯೋಜನೆಗಳನ್ನು ಜಾರಿಗೆ ತಂದರೂ ಕೂಡ ದೇಶದ ಕಟ್ಟಕಡೆಯ ರೈತನೂ ಆ ಯೋಜನೆಯ ಫಲವನ್ನು ಅನುಭವಿಸುವಂತೆ ಕಾರ್ಯರೂಪಕ್ಕೆ ತರಬೇಕು. ರೈತರು ಇಂದಿಗೂ ಕೂಡ ಸಾಂಪ್ರದಾಯಿಕ ಕೃಷಿ ನೀತಿಯೊಳಗೆ ಸಿಲುಕಿಕೊಂಡಿದ್ದಾರೆ. ಆಧುನಿಕ ಜಗತ್ತಿನಲ್ಲಿ ಶರವೇಗದ ಯಂತ್ರೋಪಕರಣಗಳು ಲಭ್ಯವಾದರೂ, ಬಹುತೇಕ ರೈತರಿಗೆ ಇದು ಕನಸಾಗಿಯೇ ಉಳಿದಿದೆ.

ಸ್ಥಳೀಯ ಮಟ್ಟದಲ್ಲಿನ ಭ್ರಷ್ಟಾಚಾರ ಅಥವಾ ಕೃಷಿ ಕೇಂದ್ರಗಳ ನಿರ್ಲಕ್ಷ್ಯದ ಫಲವಾಗಿ ರೈತ ಈ ಯಂತ್ರಗಳ ಜಗತ್ತಿನಿಂದ ದೂರವೇ ಉಳಿದಿದ್ದಾನೆ. ಇನ್ನು ಸರ್ಕಾರ ಕೃಷಿ ಉಪಕರಣಗಳನ್ನು ಕೊಳ್ಳಲು ಹಲವಾರು ರೀತಿಯಲ್ಲಿ ಸಬ್ಸಿಡಿಗಳ ಮೂಲಕ ಯಂತ್ರಗಳನ್ನು ನೀಡುತ್ತಿದೆ. ಆದರೆ ಈ ಯೋಜನೆಗಳಲ್ಲಿ ಭ್ರಷ್ಟಾಚಾರದ ವಾಸನೆ ಕೇಳಿಬರುತ್ತಿದೆ. ಇನ್ನು ಕೃಷಿ ಮಾರುಕಟ್ಟೆಗಳ ಕಡೆ ಬಂದರೆ ಅವು ರೈತರ ಪಾಲಿಗೆ ದೂರದ ಆಗಸವಾಗಿವೆ. ಹೆಸರಿಗೆ ಮಾತ್ರ ಮಾರುಕಟ್ಟೆಗಳಷ್ಟೆ. 

ವಾಸ್ತವವಾಗಿ ದೇಶದ ಬಹುತೇಕ ಕೃಷಿ ಮಾರುಕಟ್ಟೆಗಳು ದಲ್ಲಾಳಿಗಳ ಹೊಟ್ಟೆ ತುಂಬಿಸುವ ವ್ಯಾಪಾರ ಕೇಂದ್ರಗಳಾಗಿ ಮಾರ್ಪಟ್ಟಿವೆ. ಇಲ್ಲಿ ರೈತ ಬೆಳೆದಿರುವ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ದಲ್ಲಾಳಿಗಳು ಹೆಚ್ಚು ಲಾಭ ಮಾಡಿಕೊಳ್ಳುತ್ತಿದ್ದಾರೆ.

ನಕಲಿ ಬಿತ್ತನೆ ಬೀಜ, ರಸಗೊಬ್ಬರ

ಸದ್ಯ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಕೃಷಿ ಚಟುವಟಿಕೆ ವೇಗ ಪಡೆದಿದೆ. ಇದೇ ವೇಳೆ ಅನೇಕ ನಕಲಿ ಕಂಪನಿಗಳು ನಕಲಿ ಬಿತ್ತನೆ ಬೀಜಗಳನ್ನು ಮಾರುಕಟ್ಟೆಗೆ ಹರಿಬಿಡುತ್ತಿವೆ. ಇದರ ಬಗ್ಗೆ ಮಾಹಿತಿ ಇಲ್ಲದ ರೈತರು ಹೆಚ್ಚು ಇಳುವರಿ ಬಯಸಿ ಅಂತಹ ನಕಲಿ ಬೀಜಗಳನ್ನು ಕೊಂಡು ಮುಂದೆ ಫಸಲು ಬಾರದೆ ಆತ್ಮಹತ್ಯೆಯ ಕಡೆ ಮುಖ ಮಾಡುತ್ತಾರೆ. ಇನ್ನು, ರೈತ ವ್ಯವಸಾಯ ಕೈಗೊಂಡು ತಿಂಗಳುಗಳೇ ಕಳೆದರೂ ಸರಿಯಾಗಿ ರಸಗೊಬ್ಬರದ ಪೂರೈಕೆಯಾಗದೆ ರೈತ ಅಂಗಡಿಗಳಿಗೆ ಅಲೆದು ಹೈರಾಣಾಗುತ್ತಾನೆ.

ಇದರ ಮಧ್ಯೆ ಇಳುವರಿ ಬಾರದೆ ಫಸಲು ಕ್ಷೀಣಿಸುತ್ತಾ ಸಾಗುತ್ತದೆ. ಹೆಚ್ಚು ಸಾವಯುವ ಕೃಷಿಗೆ ಆದ್ಯತೆ ನೀಡುವಂತೆ ಕರೆ ನೀಡಿದರೂ ರೈತರು ರಸಗೊಬ್ಬರದ ಮೇಲೆಯೇ ಅವಲಂಬಿತರಾಗಿದ್ದಾರೆ. ಕೀಟನಾಶಕ, ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ಸರಿಯಾದ ಸಮಯಕ್ಕೆ ರೈತರಿಗೆ ತಲುಪುವಂತೆ ಮಾಡಿದರೆ ಅದೆಷ್ಟೋ ಸಾವನ್ನು ತಡೆಯಬಹುದು.

ಅಪ್ರಯೋಜಕ ಬೆಂಬಲ ಬೆಲೆ

ಬೆಲೆ ಕುಸಿದರೆ ಸರ್ಕಾರ ಬೆಂಬಲ ಬೆಲೆಯನ್ನೇನೋ ನೀಡುತ್ತದೆ. ಆದರೆ ಆ ಬೆಂಬಲ ಬೆಲೆಯಿಂದ ರೈತನ ಖರ್ಚು ಹುಟ್ಟುತ್ತದೆಯೇ? ಖರ್ಚು ಕಳೆದು ಆತ ವರ್ಷಪೂರ್ತಿ ಆ ಹಣದಲ್ಲಿ ಊಟ ಮಾಡಬಹುದೇ? ಇಲ್ಲ. ಬೆಂಬಲ ಬೆಲೆ ಯೋಜನೆಯಡಿ ಉತ್ಕೃಷ್ಟ ಗುಣಮಟ್ಟದ ಬೆಳೆಯನ್ನು ಮಾತ್ರ ಖರೀದಿಸಿ, ಇನ್ನುಳಿದಿದ್ದನ್ನು ತಿರಸ್ಕರಿಸುವುದೂ ಇದೆ. ಈ ವ್ಯವಸ್ಥೆಯನ್ನು ಸರಿಪಡಿಸಬೇಕಿದೆ.

ಸಾಲ ಮನ್ನಾ ಎಲ್ಲದಕ್ಕೂ ಪರಿಹಾರವಲ್ಲ. ರೈತರು ಸಾಲ ಮಾಡದಂತೆ ಅವರನ್ನು ಸ್ವಾವಲಂಬಿಯಾಗಿಸುವತ್ತ ಸರ್ಕಾರದ ಯೋಜನೆಗಳಿರಬೇಕು. ಈ ಸಲುವಾಗಿ ಸರ್ಕಾರಗಳು ಚಿಂತಿಸುವ ಅಗತ್ಯವಿದೆ. 

-ಮೋಹನ ವೈ. ಕೆ, ತೀರ್ಥಹಳ್ಳಿ 

Follow Us:
Download App:
  • android
  • ios