ರಾಜೀವ್‌ ಗಾಂಧಿ, ದೇವೇಗೌಡರ ನಿರ್ಧಾರಗಳು ಕಾಂಗ್ರೆಸ್ ಸೋಲಿಗೆ ಕಾರಣವಾಯ್ತಾ?


ದಕ್ಷಿಣದಲ್ಲಿ ಎಡಪಕ್ಷಕ್ಕೆ ಸ್ಥಾನವಿರುವ ಏಕೈಕ ರಾಜ್ಯ ಕೇರಳ ಆಗಿರುವುದರಿಂದ ಅಲ್ಲಿನ ಪರಿಸ್ಥಿತಿ ಇನ್ನೂ ವಿಶಿಷ್ಟ. ಸಿಪಿಎಂ ನೇತೃತ್ವದ ಎಡರಂಗ ಹಾಗೂ ಕಾಂಗ್ರೆಸ್‌ ನೇತೃತ್ವದ ಸಂಯುಕ್ತ ರಂಗ ಒಮ್ಮೆ ಮೇಲೆ ಒಮ್ಮೆ ಕೆಳಗೆ ಆಡುತ್ತಿರುತ್ತವೆ. ಆದರೂ ಆಂಧ್ರ, ತೆಲಂಗಾಣ ಮತ್ತು ತಮಿಳುನಾಡಿನಂತೆ ಕೇರಳವೂ ಕೂಡ ತನ್ನಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬರಲು ಅವಕಾಶ ನೀಡಿಲ್ಲ.

Reasons behind Congress defeat in Loksabha Elections 2019

ಇಲ್ಲೊಂದು ವಿಶಿಷ್ಟಸನ್ನಿವೇಶವಿದೆ. ಇದಕ್ಕೆ ಸಿಗಬೇಕಾದಷ್ಟುಗಮನ ಸಿಗಲಿಲ್ಲ. ಕಳೆದ ತಿಂಗಳ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಭಾರತವು ಇನ್ನುಳಿದ ಭಾರತದಿಂದ ತಾನು ಬೇರೆಯೆಂದು ತೋರಿಸಿತು. ಹಾಗೆಯೇ ಕರ್ನಾಟಕವು ದಕ್ಷಿಣ ಭಾರತದ ಇನ್ನಿತರ ರಾಜ್ಯಗಳಿಂದ ತಾನು ಬೇರೆಯೆಂದು ತೋರಿಸಿತು.

ತೆಲಂಗಾಣ, ಆಂಧ್ರ, ತಮಿಳುನಾಡು ಮತ್ತು ಕೇರಳಕ್ಕಿಂತ ಭಿನ್ನ ದಾರಿಯಲ್ಲಿ ಹೋಗುವಂತೆ ಕರ್ನಾಟಕವನ್ನು ಪ್ರಚೋದಿಸಿದ ಶಕ್ತಿ ಯಾವುದು? ದಕ್ಷಿಣದ ಎಲ್ಲ ರಾಜ್ಯಗಳೂ ದ್ರಾವಿಡ ಮೂಲದವೇ ಆಗಿವೆ. ಆದರೂ ಒಂದು ರಾಜ್ಯ ಮಾತ್ರ ಭಿನ್ನವಾಗಿ ನಿಂತಿದೆ. ಈ ಭಿನ್ನತೆಯನ್ನು ಹೇಗೆ ವಿವರಿಸುವುದು?

ದಕ್ಷಿಣದ ಎಲ್ಲ ರಾಜ್ಯಗಳೂ ಒಂದೇ ರೀತಿಯ ಜೀವನ ಶೈಲಿ ಹೊಂದಿವೆ ಎಂದೇನಿಲ್ಲ. ಇಲ್ಲಿನ ರಾಜ್ಯಗಳ ಆಹಾರಾಭ್ಯಾಸದಲ್ಲಿ ಎಷ್ಟುಭಿನ್ನತೆಯಿದೆಯೋ ರಾಜಕೀಯದಲ್ಲೂ ಅಷ್ಟೇ ಭಿನ್ನತೆಯಿದೆ. ದ್ರಾವಿಡ ಭಾವನೆ ನಿರ್ಣಾಯಕವಾಗಿದ್ದು ತಮಿಳುನಾಡಿನಲ್ಲಿ ಮಾತ್ರ.

ಅಲ್ಲಿ ಕೆ ಕಾಮರಾಜ್‌ ಹಾಗೂ ಸಿ ರಾಜಗೋಪಾಲಾಚಾರಿಯಂತಹ ದಿಗ್ಗಜರನ್ನು ಸಿ ಎನ್‌ ಅಣ್ಣಾದುರೈ ಹಾಗೂ ಎಂ ಕರುಣಾನಿಧಿ ಅಪ್ರಸ್ತುತಗೊಳಿಸಿದರು. ಇವತ್ತಿಗೂ ಅದೇ ಭಾವನೆ ಗಾಢವಾಗಿರುವುದನ್ನು ತಮಿಳುನಾಡಿನಲ್ಲಿ ಕಾಣಬಹುದು. ಆಡಳಿತಾರೂಢ ಎಐಎಡಿಎಂಕೆ ಪಕ್ಷ ಬಿಜೆಪಿ ಜೊತೆ ಸೇರಿಕೊಂಡ ನಂತರ ಅದರ ಜನಪ್ರಿಯತೆ ಕುಗ್ಗಿದೆ.

ಆಂಧ್ರದಲ್ಲಿ ‘ತೆಲುಗು ಆತ್ಮಗೌರವಂ’ ಎರಡು ಬಾರಿ ಆ ರಾಜ್ಯದ ಇತಿಹಾಸವನ್ನೇ ರೂಪಿಸಿತು; ಭಾಷಾವಾರು ರಾಜ್ಯ ರಚನೆಗಾಗಿ ಪೊಟ್ಟಿಶ್ರೀರಾಮುಲು ಆತ್ಮಾಹುತಿ ಮಾಡಿಕೊಂಡಾಗ ಮೊದಲ ಬಾರಿ, ಮಾಜಿ ಮುಖ್ಯಮಂತ್ರಿ ಟಿ ಅಂಜಯ್ಯ ಅವರನ್ನು ರಾಜೀವ್‌ ಗಾಂಧಿ ಸಾರ್ವಜನಿಕವಾಗಿ ಅವಮಾನಗೊಳಿಸಿದಾಗ ಎರಡನೇ ಬಾರಿ.

ಎರಡನೇ ಘಟನೆಯಿಂದ ಎನ್‌ ಟಿ ರಾಮರಾವ್‌ ಪ್ರವರ್ಧಮಾನಕ್ಕೆ ಬಂದು ಕಾಂಗ್ರೆಸ್‌ ನಿರ್ನಾಮವಾಯಿತು. ನಂತರ ಕೆ ಚಂದ್ರಶೇಖರರಾವ್‌ ಅವರ ವೈಯಕ್ತಿಕ ಹಿತಾಸಕ್ತಿಯಿಂದಾಗಿ ತೆಲುಗು ರಾಜ್ಯ ಇಬ್ಭಾಗವಾಯಿತು. ಈ ಎಲ್ಲ ಸಂದರ್ಭದಲ್ಲೂ ಸ್ಥಳೀಯ ಭಾವನೆಗಳೇ ಮುಖ್ಯವಾಗಿದ್ದವು. ಹಾಗಾಗಿ ಕಾಂಗ್ರೆಸ್‌ ಮೂಲೆಗುಂಪಾಯಿತು.

ದಕ್ಷಿಣದಲ್ಲಿ ಎಡಪಕ್ಷಕ್ಕೆ ಸ್ಥಾನವಿರುವ ಏಕೈಕ ರಾಜ್ಯ ಕೇರಳ ಆಗಿರುವುದರಿಂದ ಅಲ್ಲಿನ ಪರಿಸ್ಥಿತಿ ಇನ್ನೂ ವಿಶಿಷ್ಟ. ಸಿಪಿಎಂ ನೇತೃತ್ವದ ಎಡರಂಗ ಹಾಗೂ ಕಾಂಗ್ರೆಸ್‌ ನೇತೃತ್ವದ ಸಂಯುಕ್ತ ರಂಗ ಒಮ್ಮೆ ಮೇಲೆ ಒಮ್ಮೆ ಕೆಳಗೆ ಸೀ-ಸಾ ಆಡುತ್ತಿರುತ್ತವೆ. ಆದರೂ ಆಂಧ್ರ, ತೆಲಂಗಾಣ ಮತ್ತು ತಮಿಳುನಾಡಿನಂತೆ ಕೇರಳವೂ ಕೂಡ ತನ್ನಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬರಲು ಅವಕಾಶ ನೀಡಿಲ್ಲ.

ಬಿಜೆಪಿಯ ಬೆಳವಣಿಗೆಗೆ ಅವಕಾಶ ನೀಡಿದ ದಕ್ಷಿಣದ ಏಕೈಕ ರಾಜ್ಯ ಕರ್ನಾಟಕ. ಕರ್ನಾಟಕದ ಜನರು ಮತೀಯವಾದಿಗಳು, ಹಾಗಾಗಿ ಇಲ್ಲಿ ಬಿಜೆಪಿ ಬೆಳೆಯಿತು ಎಂದು ವಾದಿಸುವುದು ಮೂರ್ಖತನ. ಎಲ್ಲಾ ರೀತಿಯ ಸಂಕುಚಿತ ಮನೋಭಾವವನ್ನು ಬಿಟ್ಟು ಉದಾತ್ತ ಚಿಂತನೆಯನ್ನು ಪ್ರೋತ್ಸಾಹಿಸಿದ ದೊಡ್ಡ ದೊಡ್ಡ ಚಿಂತಕರು, ಲೇಖಕರು ಹಾಗೂ ಕಲಾವಿದರು ಇಲ್ಲಿನ ಸಂಸ್ಕೃತಿಯನ್ನು ಪೋಷಿಸಿದ್ದಾರೆ.

ಅಂತಹ ಸುಧಾರಿತ ಸಂಸ್ಕೃತಿಯನ್ನು ಕನ್ನಡವು ಪ್ರತಿನಿಧಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಇಲ್ಲಿ ಬಿಜೆಪಿಗೆ ಸ್ಥಳಾವಕಾಶ ಸೃಷ್ಟಿಸಿದ್ದು ರಾಜೀವ್‌ ಗಾಂಧಿ ಮತ್ತು ಎಚ್‌ ಡಿ ದೇವೇಗೌಡ ಎಂಬುದನ್ನು ಸಾಕಷ್ಟುಸಾಕ್ಷ್ಯಗಳು ಸಾಬೀತುಪಡಿಸುತ್ತವೆ.

1982ರಲ್ಲಿ ತೆಲುಗು ಭಾಷಿಕರನ್ನು ಸಾರಾಸಗಟಾಗಿ ಎದುರುಹಾಕಿಕೊಂಡ ಘಟನೆಯಿಂದ ಏನನ್ನೂ ಕಲಿಯದ ರಾಜೀವ್‌ ಗಾಂಧಿ 1990ರಲ್ಲಿ ಕರ್ನಾಟಕದ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್‌ ಅವರನ್ನು ಏಕಾಏಕಿ ವಜಾಗೊಳಿಸಿದರು.

ಆಗ ರಾಜ್ಯದ ಜನಸಂಖ್ಯೆಯಲ್ಲಿ ಶೇ.20 ರಷ್ಟಿದ್ದ ಇಡೀ ಲಿಂಗಾಯತ ಸಮುದಾಯ ತನಗೆ ಅವಮಾನವಾಯಿತು ಎಂಬ ನಿರ್ಧಾರಕ್ಕೆ ಬಂದು ಕಾಂಗ್ರೆಸ್‌ ವಿರುದ್ಧ ತಿರುಗಿಬಿತ್ತು. ನಾಲ್ಕು ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ 179ರಿಂದ 36 ಸೀಟುಗಳಿಗೆ ಕುಸಿಯಿತು.

ತಕ್ಷಣಕ್ಕೆ ಅದರ ಲಾಭ ದೊರೆತಿದ್ದು ಜನತಾದಳಕ್ಕೇ ಆದರೂ ಬಿಜೆಪಿಗೆ ಹೆಚ್ಚಿನ ಲಾಭವಾಯಿತು. ಏಕೆಂದರೆ ಅದರ ಮತಗಳಿಕೆ ಪ್ರಮಾಣ ಶೇ.4ರಿಂದ ಶೇ.17ಕ್ಕೆ ಏರಿತ್ತು. ಅಂದಿನಿಂದ ಇಂದಿನವರೆಗೂ ಲಿಂಗಾಯತರು ಬಿಜೆಪಿಯ ಗಟ್ಟಿವೋಟ್‌ಬ್ಯಾಂಕ್‌ ಆಗುಳಿದಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಬೆಳೆಯುವುದಕ್ಕೆ ದೇವೇಗೌಡರು ನೀಡಿದ ಕೊಡುಗೆ ಅಪಾರ. ಅವರ ಕುಟುಂಬ ರಾಜಕಾರಣದಿಂದಾಗಿ ಬಿಜೆಪಿಗೆ ಇಲ್ಲಿ ನೀರು-ಗೊಬ್ಬರ ದೊರೆಯಿತು. ಇಂದಿರಾ ಗಾಂಧಿ ಕುಟುಂಬ ರಾಜಕಾರಣಿಯಾಗಿ ಬದಲಾಗಿದ್ದು ತಮಗಿದ್ದ ಅಭದ್ರತೆಯಿಂದಾಗಿ.

ತಮ್ಮ ಮಕ್ಕಳು ಹಾಗೂ ಆಪ್ತ ಕಾರ್ಯದರ್ಶಿಗಳು ಮಾತ್ರ ವಿಶ್ವಾಸಕ್ಕೆ ಅರ್ಹರು ಎಂದು ಅವರು ಭಾವಿಸಿದ್ದರು. ಆದರೆ ದೇವೇಗೌಡರು ಕುಟುಂಬ ರಾಜಕಾರಣಿಯಾಗಿದ್ದು ತಮ್ಮ ಕುಟುಂಬದ ಬಗ್ಗೆ ಅವರಿಗಿರುವ ಅಪಾರ ಪ್ರೀತಿಯಿಂದ ಹಾಗೂ ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ಕರ್ನಾಟಕವನ್ನು ವೈಭವದತ್ತ ಕೊಂಡೊಯ್ಯುವುದಕ್ಕೆಂದೇ ಜನಿಸಿದವರು ಎಂದು ಭಾವಿಸಿದ್ದರಿಂದ.

ರಾಜ್ಯ ಹಾಗೂ ದೇಶದ ಅಭಿವೃದ್ಧಿಯನ್ನು ಅವರು ತಮ್ಮ ಹಾಗೂ ಎಚ್‌ ಡಿ ಕುಮಾರಸ್ವಾಮಿ, ಎಚ್‌ ಡಿ ರೇವಣ್ಣ ಮತ್ತು ಮೊಮ್ಮಕ್ಕಳಾದ ಪ್ರಜ್ವಲ್‌ ಹಾಗೂ ನಿಖಿಲ್‌ರ ಅಭಿವೃದ್ಧಿಯೊಂದಿಗೆ ನೋಡುತ್ತಾರೆ. ಇತ್ತೀಚೆಗೆ ಕುಟುಂಬ ರಾಜಕಾರಣಿ ಎಂದು ತಮ್ಮನ್ನು ಕರೆದಿದ್ದರಿಂದ ತೀವ್ರ ನೋವಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿಕೊಂಡರು. ನಂತರ ರೇವಣ್ಣ ಹಾಗೂ ಪ್ರಜ್ವಲ್‌ ಜೊತೆಗೆ ಕ್ಯಾಮೆರಾ ಎದುರಿಗೆ ಹೋಗಿ ಕಣ್ಣೀರು ಹಾಕಿದರು.

ಕುಮಾರಸ್ವಾಮಿ ಅವರನ್ನು ತಕ್ಕಮಟ್ಟಿಗೆ ಕರ್ನಾಟಕದ ಜನ ಸ್ವೀಕರಿಸುತ್ತಾರೆ, ಏಕೆಂದರೆ ಅವರು ಎಲ್ಲ ರೀತಿಯ ನಾಯಕರೊಂದಿಗೆ ಬೆರೆಯುವ ವಿವೇಕ ಹೊಂದಿದ್ದಾರೆ. ರೇವಣ್ಣ ಅವರ ರೀತಿಯೇ ಬೇರೆ.

ಮಂತ್ರಿಯಾಗಿ ಅವರು ಹೊಳೆನರಸೀಪುರದಲ್ಲಿರುವ ತಮ್ಮ ಮನೆಯಿಂದ ಪ್ರತಿದಿನ ಬೆಳಿಗ್ಗೆ 170 ಕಿ.ಮೀ. ಕ್ರಮಿಸಿ ಬೆಂಗಳೂರಿನ ಕಚೇರಿಗೆ ಬಂದು ಸಂಜೆ ವಾಪಸ್‌ ಹೋಗುತ್ತಿದ್ದರು. ಇದಕ್ಕಾಗಿ ಆರು ತಾಸು ಕಾರಿನಲ್ಲಿ ಕುಳಿತುಕೊಳ್ಳುತ್ತಿದ್ದರು. ಕಾರಣ, ಬೆಂಗಳೂರಿನಲ್ಲಿ ರಾತ್ರಿ ಉಳಿದುಕೊಂಡರೆ ಸರ್ಕಾರ ಬಿದ್ದುಹೋಗುತ್ತದೆ ಎಂದು ಜ್ಯೋತಿಷಿಯೊಬ್ಬರು ಅವರಿಗೆ ಹೇಳಿದ್ದರಂತೆ.

ತಮ್ಮ ಕುಟುಂಬದಾಚೆ ನೋಡಲು ಸಾಧ್ಯವಿಲ್ಲದ ದೇವೇಗೌಡರು ಹಾಗೂ ವಿಶ್ವಾಸಾರ್ಹತೆ ಕಳೆದುಕೊಂಡ ಕಾಂಗ್ರೆಸ್‌ನಿಂದಾಗಿ ಕರ್ನಾಟಕದ ರಾಜಕೀಯದಲ್ಲಿ ನಿರ್ವಾತವೊಂದು ಸೃಷ್ಟಿಯಾಗಿತ್ತು. ಆದರೂ ಬಿಜೆಪಿ ಸುಲಭವಾಗಿ ಇಲ್ಲಿಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.

ಅಷ್ಟಾಗಿಯೂ, ಇದೊಂದು ಸುವರ್ಣಾವಕಾಶವಾದ್ದರಿಂದ ಇದರ ಲಾಭ ಪಡೆಯಲು ಏನು ಬೇಕಾದರೂ ಮಾಡಲು ಬಿಜೆಪಿ ಸಿದ್ಧವಾಗಿ ನಿಂತಿತ್ತು. ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಧಣಿಗಳನ್ನು ಹುಡುಕಿ ತಂದಿತು. ಭ್ರಷ್ಟಾಚಾರದ ಆರೋಪದ ಮೇಲೆ ತನ್ನ ಮುಖ್ಯಮಂತ್ರಿ ಜೈಲಿಗೆ ಹೋಗಿದ್ದನ್ನು ಬೇಕಂತಲೇ ಕಡೆಗಣಿಸಿತು.

ಅಧಿಕಾರವೊಂದೇ ಅದರ ಎಲ್ಲ ತಂತ್ರಗಾರಿಕೆಗೂ ಸಮರ್ಥನೆಯಾಗಿತ್ತು. ಬೇರೆ ರಾಜ್ಯಗಳಲ್ಲಿ ತಪ್ಪು ಮಾಡಿದವರನ್ನು ಬದಲಿಸಲು ಜನರ ಮುಂದೆ ಆಯ್ಕೆಗಳಿದ್ದವು. ಆದರೆ, ಕರ್ನಾಟಕದಲ್ಲಿ ಆಯ್ಕೆಗಳೇ ತಪ್ಪು ಮಾಡಿಕೊಂಡು ಕುಳಿತಿದ್ದವು. ಯಾವಾಗಲೂ ಅದೃಷ್ಟಖುಲಾಯಿಸುವುದು ಅದೃಷ್ಟವಂತರಿಗೇ ಅಲ್ಲವೇ.

- ಟಿ ಜೆ ಆರ್ ಜಾರ್ಜ್ 
 

Latest Videos
Follow Us:
Download App:
  • android
  • ios