ಚುನಾವಣೆ ಸಮೀಪಿಸುತ್ತಾ ಬಂದಿದ್ದರೂ, ಉತ್ತರ ಪ್ರದೇಶದಲ್ಲಿ ಅಪ್ಪ-ಮಗನ ಕಾದಾಟ ಮಾತ್ರ ಅಂತ್ಯಗೊಳ್ಳುವ ಲಕ್ಷಣಗಳು ಗೋಚರಿಸುತ್ತಿಲ್ಲ. ಅಷ್ಟಕ್ಕೂ ಅಪ್ಪ- ಮಗನ ಜಗಳಕ್ಕೆ ಕಾರಣ ಯಾರು? ಮುಂಬರುವ ಚುನಾವಣೆಯಲ್ಲಿ ಪಕ್ಷದ ಸೈಕಲ್ ಏರುವವರು ಯಾರು? ಇಲ್ಲಿದೆ ಸಂಪೂರ್ಣ ವಿವರ
ಉತ್ತರ ಪ್ರದೇಶ(ಜ.10): ಚುನಾವಣೆ ಸಮೀಪಿಸುತ್ತಾ ಬಂದಿದ್ದರೂ, ಉತ್ತರ ಪ್ರದೇಶದಲ್ಲಿ ಅಪ್ಪ-ಮಗನ ಕಾದಾಟ ಮಾತ್ರ ಅಂತ್ಯಗೊಳ್ಳುವ ಲಕ್ಷಣಗಳು ಗೋಚರಿಸುತ್ತಿಲ್ಲ. ಅಷ್ಟಕ್ಕೂ ಅಪ್ಪ- ಮಗನ ಜಗಳಕ್ಕೆ ಕಾರಣ ಯಾರು? ಮುಂಬರುವ ಚುನಾವಣೆಯಲ್ಲಿ ಪಕ್ಷದ ಸೈಕಲ್ ಏರುವವರು ಯಾರು? ಇಲ್ಲಿದೆ ಸಂಪೂರ್ಣ ವಿವರ
ಅಪ್ಪ - ಮಗನ ಕಾದಾಟಕ್ಕೆ ಕಾರಣ ಯಾರು?
ಸದ್ಯ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದಲ್ಲಿ ಅಪ್ಪ- ಮಗನ ನಡುವೆ ನಡೆಯುತ್ತಿರುವ ರಾಜಕೀಯ ಜಂಗೀ ಕುಸ್ತಿಯನ್ನು ನೋಡುತ್ತಿರುವವರಿಗೆ ಈ ಪ್ರಶ್ನೆ ಉದ್ಭವಿಸದೇ ಇರದು. ವಿಧಾನಸಭೆ ಚುನಾವಣೆಗೆ ದಿನಾಂಕ ಸಮೀಪಿಸುತ್ತಾ ಬಂದಿದ್ದರೂ ಅಪ್ಪ ಮುಲಾಯಂ ಸಿಂಗ್ ಯಾದವ್ ಹಾಗೂ ಪುತ್ರ ಅಖಿಲೇಶ್ ಯಾದವ್ ನಡುವಿನ ಅಂತರಿಕ ಕಲಹ ಮಾತ್ರ ತಣ್ಣಗಾಗಿಲ್ಲ. ಸೈಫೈ ಹಳ್ಳಿಯ ಕುಸ್ತಿ ಪಟು ಆಗಿದ್ದ ಮುಲಾಯಂ ಸಿಂಗ್ ಯಾದವ್, ನಂತರ ಶಿಕ್ಷಕರಾಗಿ ತಾನು ಓಡಿಸುತ್ತಿದ್ದ ಸೈಕಲ್'ನ್ನೇ ಪಕ್ಷದ ಚುನಾವಣೆಯಾಗಿ ಪಡೆದು ಬರೋಬ್ಬರಿ 25 ವರ್ಷ ಕಳೆದಿದೆ. ಇದೀಗ ಪಕ್ಷದ ಚಿಹ್ನೆಗಾಗಿ ಮಗನ ಜೊತೆ ಕಾದಾಟ ನಡೆಸುವ ಅನಿವಾರ್ಯತೆ ಎದುರಾಗಿದೆ.
೪೦ ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಸಾಕಷ್ಟು ದೊಡ್ಡ ದೊಡ್ಡ ಎದುರಾಳಿಗಳನ್ನು ಕೆಡವಿ ಮೇಲೆ ಬಂದಿರುವ ಮುಲಾಯಂ ಸಿಂಗ್ ಯಾದವ್ ಇವತ್ತು ತನ್ನ ಮಗನಿಂದಲೇ ಕುಸ್ತಿಯಲ್ಲಿ ಚಿತ್ ಆಗುವ ಹಂತಕ್ಕೆ ಬಂದಿದ್ದಾರೆ .
ಅಪ್ಪ-ಮಗನ ಜಂಗೀಕುಸ್ತಿಗೆ ಸಾಧನಾ ಗುಪ್ತಾ ಕಾರಣ: ಪ್ರತೀಕ್'ಗೆ ಪಟ್ಟ ಕಟ್ಟಲು ನಡೀತಿದೆ ಒಳಸಂಚು
ಮುಲಾಯಂ ಮತ್ತು ಪುತ್ರ ಅಖಿಲೇಶ್ ನಡುವಿನ ಜಗಳಕ್ಕೆ ಮುಖ್ಯ ಕಾರಣ ಮುಲಾಯಂ ಎರಡನೇ ಹೆಂಡತಿ ಸಾಧನಾ ಗುಪ್ತಾ. ತನ್ನ ಪುತ್ರ ಪ್ರತೀಕ್ ಯಾದವ್'ಗೆ ಪಟ್ಟ ಕಟ್ಟಲು ಅಖಿಲೇಶ್ ಯಾದವ್ ಅವರನ್ನು ಬಲಿ ಕೊಡಿ ಎಂಬ ಸಾಧನಾ ಗುಪ್ತಾ ಒತ್ತಾಯಕ್ಕೆ ಅಂಕಲ್ ಅಮರ್ ಸಿಂಗ್ ಮತ್ತು ಚಿಕ್ಕಪ್ಪ ಶಿವಪಾಲ್ ಯಾದವ್ ಒತ್ತಾಸೆಯಾಗಿ ನಿಂತಿದ್ದಾರೆ. ಇವರ ಒಳಸಂಚಿನ ಮರ್ಮ ಅರಿತಿರುವ ಅಖಿಲೇಶ್ ಯಾದವ್, ಜಿಲ್ಲಾ ಅಧ್ಯಕ್ಷರು ಮತ್ತು ಬಹುತೇಕ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಭವಿಷ್ಯದ ನಾಯಕ ನಾನೇ ಎಂದು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅಖಿಲೇಶ್‌ಗೆ ಬೆಂಬಲವಾಗಿ ಮತ್ತೊಬ್ಬ ಚಿಕ್ಕಪ್ಪ ರಾಮಗೋಪಾಲ್ ಯಾದವ್ ನಿಂತಿದ್ದಾರೆ.
ಯಾವಾಗ ಮುಲಾಯಂ ಇನ್ನು ಕೂಡ ಪಕ್ಷ ನನ್ನದೇ ಎಂಬ ಭ್ರಮೆಯಲ್ಲಿ ಪುತ್ರನನ್ನು ಪಕ್ಷದಿಂದ ಹೊರ ಹಾಕಿದರೋ, ಅಖಿಲೇಶ್ ಯಾದವ್ ವನವಾಸಕ್ಕೆ ಹೋಗಲು ನಾನು ರಾಮನು ಅಲ್ಲ ನೀವು ದಶರಥ ಮಹಾರಾಜನು ಅಲ್ಲ ಎಂದು ತೋರಿಸಿಕೊಟ್ಟಿದ್ದಾರೆ . ಹೀಗಾಗಿ ತಾನು ಕಟ್ಟಿದ ಪಕ್ಷದ ಚಿಹ್ನೆ ಉಳಿಸಿಕೊಳ್ಳಲು ಮುಲಾಯಂ ಚುನಾವಣಾ ಆಯೋಗದ ಕಚೇರಿಗೆ ಎಡ ತಾಕುತ್ತಿದ್ದಾರೆ . ಒಟ್ಟಾರೆ ವಿಧಾನಸಭೆ ಚುನಾವಣೆಯಲ್ಲಿ ಅಪ್ಪ - ಮಗ ಪ್ರತ್ಯೇಕ ಪಕ್ಷಗಳಾಗಿ ಸ್ಪರ್ಧಿಸುವ ಲಕ್ಷಣಗಳು ಗೋಚರಿಸುತ್ತಿದೆ.
