ಲಕ್ನೋ (ಜ. 15):  ರಾಷ್ಟ್ರೀಯ ಪಕ್ಷ ಮತ್ತು ಪ್ರಾದೇಶಿಕ ಪಕ್ಷವೊಂದು ಚುನಾವಣಾ ಮೈತ್ರಿ ಮಾಡಿಕೊಳ್ಳಲು ಸೈದ್ಧಾಂತಿಕ ಹೊಂದಾಣಿಕ ತುಂಬಾ ಮುಖ್ಯ. ಸೈದ್ಧಾಂತಿಕ ನಿಲುವುಗಳ ಸಾಮ್ಯತೆಗಿಂತ ಈಗ ಪ್ರಾದೇಶಿಕ ಪಕ್ಷಗಳಿಗೆ ಕಾಂಗ್ರೆಸ್‌, ಬಿಜೆಯಂತಹ ರಾಷ್ಟ್ರೀಯ ಪಕ್ಷಗಳ ಮೇಲೆ ಒತ್ತಡ ಹಾಕುವ ಮತ್ತು ಎರಡು ರಾಷ್ಟ್ರೀಯ ಪಕ್ಷಗಳ ಆಕ್ರಮಣಕ್ಕೆ ತಡೆಯೊಡ್ಡುವ ಉತ್ಸಾಹವೇ ಹೆಚ್ಚಾದಂತಿದೆ.

ಇದು ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ) ಮತ್ತು ಸಮಾಜವಾದಿ ಪಕ್ಷಗಳ (ಎಸ್‌ಪಿ) ಮೈತ್ರಿಯ ಧ್ಯೇಯ. ಉತ್ತರ ಪ್ರದೇಶದಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಮುಂದಿನ ಲೋಕಸಭೆ ಚುನಾವಣೆಗಾಗಿ ಮೊನ್ನೆಯಷ್ಟೇ ಅಧಿಕೃತವಾಗಿ ಮೈತ್ರಿ ಮಾಡಿಕೊಂಡಿವೆ. ಈ ಎರಡು ಪಕ್ಷಗಳು ಮತ್ತು ಕಾಂಗ್ರೆಸ್‌ನ ಪ್ರಾಥಮಿಕ ಗುರಿ ಬಿಜೆಪಿಯನ್ನು ಸೋಲಿಸುವುದು. ಆದಾಗ್ಯೂ ಎಸ್‌ಪಿ ಮತ್ತು ಬಿಎಸ್‌ಪಿ ಕಾಂಗ್ರೆಸ್ಸನ್ನು ಹೊರಗಿಟ್ಟು ಮೈತ್ರಿ ಮಾಡಿಕೊಂಡಿವೆ. ಅದಕ್ಕೂ ಮೇಲಾಗಿ ಎರಡೂ ಪಕ್ಷಗಳ ನಾಯಕರಾದ ಮಾಯಾವತಿ ಮತ್ತು ಅಖಿಲೇಶ್‌ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡನ್ನೂ ದೂರುತ್ತಿದ್ದಾರೆ.

ಇದೇ ರೀತಿ ಮಹಾರಾಷ್ಟ್ರದಲ್ಲಿಯೂ ಶಿವಸೇನೆಯ ಉದ್ಧವ್‌ ಠಾಕ್ರೆ ಬಿಜೆಪಿಯಿಂದ ದೂರವಾಗಿದ್ದಾರೆ. ಬಿಜೆಪಿ ಮತ್ತು ಶಿವಸೇನೆಯಷ್ಟುತೀಕ್ಷ$್ಣವಾಗಿ ಹಿಂದೂ ಪರ ನೀತಿ ಹೊಂದಿರುವ ಮತ್ತೊಂದು ಪಕ್ಷ ಭಾರತದಲ್ಲಿ ಇಲ್ಲ. ಆದಾಗ್ಯೂ 2019ರಲ್ಲಿ ಶಿವಸೇನೆ ಏಕಾಂಗಿಯಾಗಿ ಸ್ಪರ್ಧಿಸಲು ಸಿದ್ಧವಾಗಿದೆ. ಬಿಜೆಪಿಗಿಂತ ಹೆಚ್ಚಿನ ಸೀಟು ಪಡೆದುಕೊಳ್ಳುವ ತಂತ್ರವೇ ಇದು? ನಿರ್ಧರಿಸುವುದು ಕಷ್ಟ.

ಪ್ರಾದೇಶಿಕ ಪಕ್ಷಗಳು ಹೀಗೆ ರಾಷ್ಟ್ರೀಯ ಪಕ್ಷಗಳನ್ನು ಬಿಟ್ಟು ಮೈತ್ರಿ ಮಾಡಿಕೊಳ್ಳಲು ಕಾರಣ ಏನು?

ಕಾಂಗ್ರೆಸ್‌ನ ಮರುಹುಟ್ಟಿನ ಪರೀಕ್ಷೆ

ಇತ್ತೀಚೆಗೆ ನಡೆದ ಪಂಚ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿನ ಯಶಸ್ಸು ಕಾಂಗ್ರೆಸ್‌ ಪಕ್ಷವನ್ನು ಬಲಪಡಿಸಿದೆ. ಆದರೆ ಉತ್ತರ ಪ್ರದೇಶದಲ್ಲಿ ಈ ಮರುಹುಟ್ಟು ಸಾಧ್ಯವಿಲ್ಲ ಎಂದು ಬಹುಜನ ಸಮಾಜವಾದಿ ಪಕ್ಷ ಮತ್ತು ಸಮಾಜವಾದಿ ಪಕ್ಷಗಳು ಖಚಿತಪಡಿಸಿಕೊಳ್ಳಲು ಈ ನಿರ್ಧಾರಕ್ಕೆ ಬಂದಂತಿದೆ. ಕಾಂಗ್ರೆಸ್‌ ಮರುಹುಟ್ಟು ಕೇವಲ ಬಿಜೆಪಿಗೆ ಮಾತ್ರ ತಲೆನೋವುಂಟು ಮಾಡಿಲ್ಲ.

ಬದಲಾಗಿ ಪ್ರಾದೇಶಿಕ ಪಕ್ಷಗಳಿಗೂ ತಲೆನೋವು ತಂದಿದೆ. ಇತ್ತೀಚಿನ ಚುನಾವಣೆಗಳಲ್ಲಿನ ಕಾಂಗ್ರೆಸ್‌ನ ಗೆಲುವು ಪ್ರಾದೇಶಿಕ ಪಕ್ಷಗಳೊಂದಿಗಿನ ಹೊಂದಾಣಿಕೆಯ ಅಂಶದ ಪ್ರಾಮುಖ್ಯತೆಯನ್ನು ಕಡಿಮೆ ಮಾಡಿತು. ಎಸ್‌ಪಿ ಮತ್ತು ಬಿಎಸ್‌ಪಿ ಒಂದಾಗಿರುವುದು ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಏಟು ನೀಡುವುದು ಖಚಿತ. ಕಾಂಗ್ರೆಸ್ಸನ್ನೂ ಜೊತೆಗೆ ಸೇರಿಸಿಕೊಂಡಿದ್ದರೆ ಇನ್ನಷ್ಟುಲಾಭ ಪಡೆಯಬಹುದಿತ್ತು.

ಚುನಾವಣಾ ತಜ್ಞ ಸಂಜಯ್‌ ಕುಮಾರ್‌ ಅವರ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್‌, ಎಸ್‌ಪಿ, ಬಿಎಸ್‌ಪಿ ಮೈತ್ರಿಯಿಂದ ಉತ್ತರ ಪ್ರದೇಶದ 80 ಲೋಕಸಭಾ ಸೀಟುಗಳ ಪೈಕಿ 57 ಸೀಟುಗಳನ್ನು ಗೆಲ್ಲಬಹುದು. ಅದೇ ಎಸ್‌ಪಿ ಮತ್ತು ಬಿಎಸ್‌ಪಿ ಮಾತ್ರ ಮೈತ್ರಿಯಾದರೆ 41 ಸೀಟುಗಳನ್ನು ಗೆಲ್ಲಬಹುದು. ಒಂದು ವೇಳೆ ಕಾಂಗ್ರೆಸ್‌ ಜೊತೆ ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿಯಾಗಿದ್ದರೆ ಕೆಲ ಸೀಟುಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಬೇಕಾಗುತ್ತಿತ್ತು. ಮೊದಲಿನಿಂದಲೂ ಕಾಂಗ್ರೆಸ್‌ 10-12 ಸೀಟುಗಳನ್ನು ಬಯಸಿತ್ತು. ಇದು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಪುನರುಜ್ಜೀವನಕ್ಕೆ ಏಣಿಯಾಗಲಿದೆ. ಇದು ಭವಿಷ್ಯದಲ್ಲಿ ಪ್ರಾದೇಶಿಕ ಪಕ್ಷಗಳ ಭವಿಷ್ಯಕ್ಕೆ ತೊಂದರೆಯಾಗಲಿದೆ ಎಂದು ಮುಂದಾಲೋಚಿಸಿ ಎಸ್‌ಪಿ ಮತ್ತು ಬಿಎಸ್‌ಪಿ ಈ ನಿರ್ಧಾರಕ್ಕೆ ಬಂದಿವೆ.

ಬಿಜೆಪಿಯ ತಾಕತ್ತಿನ ಪರೀಕ್ಷೆ

ಶಿವಸೇನೆ ಭವಿಷ್ಯದ ಮೇಲೆ ಕಣ್ಣಿಟ್ಟೇ ಉದ್ದೇಶಪೂರ್ವಕವಾಗಿ ಬಿಜೆಪಿಯೊಂದಿಗಿನ ಹಳೆ ಮೈತ್ರಿಯನ್ನು ಕಳಚಿಕೊಳ್ಳುತ್ತಿದೆ. ಮಹಾರಾಷ್ಟ್ರದಲ್ಲಿ ಮತ್ತೆ ತನ್ನ ಅಧಿಪತ್ಯವನ್ನು ಸಾಧಿಸಬೇಕೆಂಬುದು ಶಿವಸೇನೆಯ ಮುಂದಿರುವ ಗುರಿ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ನಂತರ ಮರು ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಪಾಲು ಕೇಳಿತ್ತು. ಒಪ್ಪಂದಕ್ಕೆ ಬರಲು ವಿಫಲವಾಗಿ ಏಕಾಂಗಿಯಾಗಿ ಎರಡೂ ಪಕ್ಷಗಳು ಸ್ಪರ್ಧಿಸಿದ್ದವು. ಆದರೆ ನಂತರ ಮೈತ್ರಿ ಸರ್ಕಾರ ರಚಿಸಿದ್ದವು. ಬಿಜೆಪಿಗೆ ಶಿವಸೇನೆಗಿಂತ ಎರಡು ಪಟ್ಟು ಸೀಟುಗಳು ಲಭಿಸಿದ್ದರಿಂದ ಬಿಜೆಪಿಗೇ ಮುಖ್ಯಮಂತ್ರಿ ಭಾಗ್ಯ ಒಲಿದುಬಂದಿತ್ತು. ಇದರಿಂದ ಮಹಾರಾಷ್ಟ್ರದಲ್ಲಿ ಹಿಂದುತ್ವ ರಕ್ಷಕ ಸಿದ್ಧಾಂತದಲ್ಲಿ ಶಿವಸೇನೆ 2ನೇ ಸ್ಥಾನಕ್ಕಿಳಿಯಿತು.

ಈ ದೃಷ್ಟಿಕೋನ ಇತ್ತೀಚಿನ ಚುನಾವಣೆಯಲ್ಲಿ ಬಿಜೆಪಿಯ ಮೇಲೆ ವಿರುದ್ಧ ಪರಿಣಾಮ ಬೀರಿತು. ಈ ಫಲಿತಾಂಶಗಳು ಬಿಜೆಪಿ ದುರ್ಬಲವಾಗುತ್ತಿರುವುದಕ್ಕೆ ಸಾಕ್ಷಿ. ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಬಿಜೆಪಿ ಮೇಲೆ ಆಕ್ರಮಣ ಪ್ರಾರಂಭಿಸಲು ಕಾರಣ 2019ರ ಚುನಾವಣೆಯಲ್ಲಿ ಕೇಸರಿ ಪಕ್ಷಕ್ಕೆ ಏಕಾಂಗಿಯಾಗಿ ಸ್ಪರ್ಧಿಸಲು ಇಷ್ಟವಿಲ್ಲ ಎಂಬುದು ಅವರಿಗೆ ಗೊತ್ತಿದೆ. ಹಾಗಾಗಿ ಕೊನೆಯ ಗಳಿಗೆಯಲ್ಲಾದರೂ ಮಹಾರಾಷ್ಟ್ರದಲ್ಲಿ ಶಿವಸೇನೆಯ ಪ್ರಭುತ್ವವನ್ನು ಅದು ಒಪ್ಪಿಕೊಳ್ಳುತ್ತದೆ ಎಂಬುದು ಠಾಕ್ರೆ ಲೆಕ್ಕಾಚಾರ.

ಒಂದು ವೇಳೆ ಶಿವಸೇನೆ ಏಕಾಂಗಿಯಾಗಿ ಸ್ಪರ್ಧಿಸಿದರೆ ಎರಡೂ ಪಕ್ಷಕ್ಕೂ ಇದರಿಂದ ಹಾನಿಯಾಗುತ್ತದೆ. ಆದರೆ ಠಾಕ್ರೆ ಹಿಂದುತ್ವ ಸಿದ್ಧಾಂತವನ್ನು ಬಿಜೆಪಿಯಿಂದ ಸಂಪೂರ್ಣವಾಗಿ ಒತ್ತುವರಿ ಮಾಡಿ ಹಿಂದುತ್ವದ ರಕ್ಷಣೆ ಪಡೆಯಲು ಯತ್ನಿಸುತ್ತಿದ್ದಾರೆ. ಸಮಾಜವಾದಿ, ಬಹುಜನ ಸಮಾಜವಾದಿಯಂತೆ ಶಿವಸೇನೆಯೂ ಉತ್ತಮ ಭವಿಷ್ಯಕ್ಕಾಗಿ ಈಗ ಕಳೆದುಕೊಳ್ಳಲು ಸಿದ್ಧವಾಗಿದೆ.

ಈ ತಂತ್ರವು ಯಾವುದೇ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳ ಉಳಿವಿಗೆ ಕಾರಣವಾಗುತ್ತವೆ. ಮೋದಿ ಅವರ ರಾಜಕೀಯ ಶೈಲಿ ಈಗಾಗಲೇ ಪ್ರಾದೇಶಿಕ ಪಕ್ಷಗಳಿಗೆ ಪಾಠ ಕಲಿಸಿದೆ; ಪ್ರಾದೇಶಿಕ ಪಕ್ಷದ ವಿಸ್ತರಣೆಗೆ ಅವಕಾಶ ನೀಡುವುದಾಗಿ ಹೇಳಿ ಮತ್ತು ಹೆಚ್ಚು ಸ್ಥಾನ ನೀಡುವ ಭರವಸೆ ನೀಡಿ ಮೈತ್ರಿ ಸಾಧಿಸಿ, ಸಮ್ಮಿಶ್ರ ಸರ್ಕಾರ ರಚಿಸಿ, ನಂತರ ಹೆಚ್ಚೆಚ್ಚು ಸ್ಥಾನಗಳನ್ನು ಗಳಿಸುವುದು ರಾಷ್ಟ್ರೀಯ ಪಕ್ಷಗಳ ನೈಸರ್ಗಿಕ ಗುಣ.

ಪರ್ಯಾಯದೆಡೆಗೆ ಮುಖ

ಸ್ಥಳೀಯವಾಗಿ ತಾವು ಕಳೆದುಕೊಂಡದ್ದನ್ನು ಮತ್ತೆ ಪಡೆಯಲು ಕಾಂಗ್ರೆಸ್ಸನ್ನು ಹೊರಗಿಡಲೇಬೇಕಾದ ಅವಶ್ಯಕತೆ ಪ್ರಾದೇಶಿಕ ಪಕ್ಷಗಳಿಗಿತ್ತು. ಇದೇ ಕಾರಣಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಫೆಡರಲ್‌ ಪ್ರಂಟ್‌ ಪ್ರಸ್ತಾಪ ಮುಂದಿಟ್ಟಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ರಾವ್‌ ಅವರು ಫೆಡರಲ್‌ ಫ್ರಂಟ್‌ನ ಅಗತ್ಯದ ಬಗ್ಗೆ ಹೇಳಲು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಭೇಟಿ ಮಾಡಿದ್ದರು. ನಂತರ ಮಾಯಾವತಿ ಮತ್ತು ಯಾದವ್‌ ಅವರೊಂದಿಗಿನ ಮಾತುಕತೆಯಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಆದರೆ ರಾವ್‌ ಅವರ ಪ್ರಸ್ತಾಪವನ್ನು ಯಾದವ್‌ ಸ್ವಾಗತಿಸಿದ್ದರು.

ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಾದೇಶಿಕ ಪಕ್ಷಗಳ ಮಹತ್ವವನ್ನು ಹೆಚ್ಚಿಸುತ್ತದೆ. ಇದು ಇತರ ಹಿಂದುಳಿದ ವರ್ಗಗಳು ಮತ್ತು ದಲಿತರ ಕೂಗನ್ನೂ ಕೂಡ ಗಟ್ಟಿಗೊಳಿಸುತ್ತದೆ. ಏಕೆಂದರೆ ಅವರಿಂದಲೇ ಪ್ರಾದೇಶಿಕ ಪಕ್ಷಗಳು ಭಾರತದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿವೆ.

-ಅಜಾಜ್ ಅಶ್ರಫ್ 

ಕೃಪೆ: ಸ್ಕ್ರಾಲ್‌.ಇನ