ಈ ವರ್ಷ 2 ವಾರ ತಡವಾಗಿ ದೇಶದ ಹಲವು ಭಾಗಗಳಲ್ಲಿ ಮಾನ್ಸೂನ್‌ ಆರಂಭವಾಗಿದೆ. ಆದರೆ ಜೂನ್‌ ತಿಂಗಳಲ್ಲಿ ಸಾಮಾನ್ಯಕ್ಕಿಂತ 36%ರಷ್ಟುಕಡಿಮೆ ಮಳೆಯಾಗಿದೆ. ಇದಕ್ಕೆ ಕಾರಣ ಏನು? ಮುಂದಿನ ದಿನಗಳಲ್ಲಿ ಮಳೆ ಹೇಗಿರುತ್ತದೆ ಎಂಬ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಎಲ್ಲಿಲ್ಲಿ ಮಳೆಯಾಗುತ್ತಿದೆ?

ಉತ್ತರ ಭಾರತದ ಭಾಗಗಳಲ್ಲಿ ಈಗ ಮಳೆ ಸುರಿಯಲು ಆರಂಭಿಸಿದೆ. ದಕ್ಷಿಣ, ಕೇಂದ್ರ ಮತ್ತು ಪೂರ್ವ ಭಾರತದ ಬಹುತೇಕ ಕಡೆಯೂ ವರುಣನ ಸಿಂಚನವಾಗಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸ್‌ಗಢ, ಒಡಿಶಾ ಮತ್ತು ಮಧ್ಯಪ್ರದೇಶದಲ್ಲಿ ತಕ್ಕ ಮಟ್ಟಿಗೆ ಮಳೆಯಾಗುತ್ತಿದೆ. ಆದರೆ ದೇಶದ ಎಲ್ಲಾ ಭಾಗಗಳಲ್ಲಿ ಮಳೆ ಆರಂಭವಾಗಿದ್ದರೂ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿದೆ. ಅಂಡಮಾನ್‌ ಮತ್ತು ಸಿಕ್ಕಿಂನಲ್ಲಿ ಮಾತ್ರವೇ ಸಾಮಾನ್ಯಕ್ಕಿಂತ ತುಸು ಹೆಚ್ಚು ಮಳೆಯಾಗಿದೆ.

ಇಲ್ಲಿಯವರೆಗೆ 36% ಕಡಿಮೆ ಮಳೆ

ಮಾನ್ಸೂನ್‌ ಆರಂಭವಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗುತ್ತಿಲ್ಲ. ಸಾಮಾನ್ಯವಾಗಿ ಈ ವೇಳೆಗಾಗಲೇ ಭಾರತದಾದ್ಯಂತ 135.6 ಮಿಲಿಮೀಟರ್‌ ಮಳೆಯಾಗಬೇಕಿತ್ತು. ಆದರೆ ಕೇವಲ 86.3 ಮಿಲಿಮೀಟರ್‌ ಮಳೆಯಾಗಿದೆ. ಅಂದರೆ ಸಾಮಾನ್ಯಕ್ಕಿಂತ 36% ಕಡಿಮೆ ಮಳೆಯಾಗಿದೆ.

ಈ ಕೊರತೆಯು ಮುಂದಿನ ದಿನಗಳಲ್ಲಿ ಗಣನೀಯ ದುಷ್ಪರಿಣಾಮ ಬೀರಬಹುದು ಎಂಬ ಆತಂಕ ಹೆಚ್ಚಾಗುತ್ತಿದೆ. ಆದರೆ ಆತಂಕ ಪಡುವ ಅಗತ್ಯವಿಲ್ಲ, ಜುಲೈ ಮತ್ತು ಆಗಸ್ಟ್‌ನಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಕೇರಳಕ್ಕೆ ತಡವಾಗಿ ಬಂದಿದ್ದೇಕೆ?

ಮಳೆ ಆರಂಭವಾಗಬೇಕಿದ್ದ ವೇಳೆಯಲ್ಲಿ ಭಾರತದ ಮುಖ್ಯ ಭಾಗಗಳಲ್ಲಿ ಮತ್ತು ಮಧ್ಯ ಅಕ್ಷಾಂಶ ರೇಖೆ ಭಾಗದಲ್ಲಿ ಮಾನ್ಸೂನ್‌ ಮಾರುತಗಳು ಪ್ರಬಲವಾಗಿ ಇರಲಿಲ್ಲ. ಜೊತೆಗೆ 2018ರ ಚಳಿಗಾಲದಿಂದಲೂ ದಕ್ಷಿಣದ ಭಾಗಗಳಲ್ಲಿ ಸಾಗುವ ಮಾರುತಗಳಿಗೆ ಅಡ್ಡಿಯುಂಟಾಗುತ್ತಿತ್ತು. ಹಾಗಾಗಿ ಕೇರಳಕ್ಕೆ ಮಾನ್ಸೂನ್‌ ಕಾಲಿಡುವುದು ತಡವಾಯಿತು. ಪರಿಣಾಮ ಸಾಮಾನ್ಯವಾಗಿ ಜೂನ್‌ 1ರಂದು ಕೇರಳಕ್ಕೆ ಅಪ್ಪಳಿಸಬೇಕಿದ್ದ ಮಾನ್ಸೂನ್‌ ಜೂನ್‌ 8ರಂದು ಕೇರಳಕ್ಕೆ ಬಂತು.

ಮಾನ್ಸೂನ್‌ ಮಾರುತಕ್ಕೆ ಮತ್ತೆ ಅಡ್ಡಿ

ಕೇರಳದಲ್ಲಿ ಮಾನ್ಸೂನ್‌ ಆರಂಭವಾಗುತ್ತಿದ್ದಂತೆಯೇ ಅರೇಬಿಯನ್‌ ಸಮುದ್ರದಲ್ಲಿ ವಾಯು ಚಂಡಮಾರುತ ರೂಪುಗೊಂಡಿತು. ಇದು ಉತ್ತರದ ಕಡೆಗೆ ಸಾಗುತ್ತಿದ್ದಂತೆ ಕೇರಳವನ್ನು ಕೇಂದ್ರೀಕರಿಸಿದ್ದ ಮಾನ್ಸೂನ್‌ ಮುನ್ನಡೆಗೆ ಅಡ್ಡಿಯಾಯಿತು. ಇದು ದಕ್ಷಿಣ ಪರ್ಯಾಯ ದ್ವೀಪ ಪ್ರದೇಶಗಳಿಂದ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಿಂದ ಗಮನಾರ್ಹ ಪ್ರಮಾಣದ ತೇವಾಂಶವನ್ನು ಆಕರ್ಷಿಸಿತು.

ಇದರಿಂದಾಗಿ ಮಾನ್ಸೂನ್‌ ಆರಂಭಿಕ ಪ್ರಗತಿಗೆ ಹಿನ್ನಡೆಯಾಯಿತು. ಅಲ್ಲದೆ ಕಳೆದ ಚಳಿಗಾಲದಲ್ಲಿ, ಆಕ್ರ್ಟಿಕ್‌ ಭಾಗದಲ್ಲಿ ಉಂಟಾದ ತಾಪಮಾನ ವೈಪರೀತ್ಯದಿಂದ ಜಗತ್ತಿನಾದ್ಯಂತ ತಾಪಮಾನ ಇಳಿಮುಖವಾಗಿತ್ತು. ಇದು ಜೂನ್‌ನಲ್ಲಿ ಭಾರತದ ನೈಋುತ್ಯ ಮಾನ್ಸೂನ್‌ ಮಾರುತಗಳ ಮೇಲೆ ಕೂಡ ಪ್ರಭಾವ ಬೀರಿತು.

ಅಲ್ಲದೆ ಅರೇಬಿಯನ್‌ ಸಮುದ್ರದಿಂದ ಬೀಸುತ್ತಿದ್ದ ಮಾನ್ಸೂನ್‌ ಮಾರುತ ಸುಗಮವಾಗಿ ಮುಂದುವರಿಯಲು ತಡೆಯೊಡ್ಡಿತು. ಭಾರತದಲ್ಲಿ ಪ್ರಾಥಮಿಕ ಹಂತದಲ್ಲಿ ಮಾನ್ಸೂನ್‌ ಪ್ರಾರಂಭವಾದಾಗಲೂ ಇದರ ಪ್ರಭಾವ ಉಂಟಾಗಿದ್ದನ್ನು ಹವಾಮಾನ ತಜ್ಞರು ಅವಲೋಕಿಸಿದ್ದಾರೆ.

ತೀವ್ರ ಚಳಿ ಮಾನ್ಸೂನ್‌ಗೆ ಹಿನ್ನಡೆ

ಸಾಮಾನ್ಯ ಹವಾಮಾನ ಪರಿಸ್ಥಿತಿಯಲ್ಲಿ ವಾಯವ್ಯ ಭಾಗದಲ್ಲಿ ತಾಪಮಾನ ಸ್ವಲ್ಪ ಮಟ್ಟಿಗೆ ಬೆಚ್ಚಗಿರುತ್ತದೆ. ಆಗ ಅರೇಬಿಯನ್‌ ಸಮುದ್ರದ ಮೂಲಕ ಮಾನ್ಸೂನ್‌ ಮಾರುತಗಳು ಬರುತ್ತವೆ. ಆದರೆ ಈ ವರ್ಷ ವಾಯವ್ಯ ಮತ್ತು ಅದರ ಅಕ್ಕಪಕ್ಕದ ಪ್ರವೇಶದಲ್ಲಿ ಚಳಿ ತೀವ್ರವಾಗಿತ್ತು. ಇದು ಮಾನ್ಸೂನ್‌ ಮಾರುತಗಳಿಗೆ ತಡೆಯೊಡ್ಡಿತು.

ಜುಲೈ, ಆಗಸ್ಟ್‌ನಲ್ಲಿ ಉತ್ತಮ ಮಳೆ

ಜೂನ್‌ ತಿಂಗಳಿನಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಆದರೆ ಪೂರ್ವ ಭಾಗದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದರೆ ಪೂರ್ವ ಮತ್ತು ಈಶಾನ್ಯದಲ್ಲಿ ಉತ್ತಮ ಮಳೆಯಾಗಲಿದೆ. ಜೂನ್‌ 26ರಂದು ವೇರಾವಲ್‌, ಸೂರತ್‌, ಮಂಡ್ಲಾ, ಪೆಂದ್ರಾ, ಸುಲ್ತಾನ್‌ಪುರ ಮಾರ್ಗವಾಗಿ ಮಾನ್ಸೂನ್‌ ಮಾರುತ ಮುಂದೆ ಸಾಗಿ ಎಲ್ಲೆಡೆ ಆವರಿಸಿಕೊಂಡಿದೆ.

ರಾಜ್ಯ ಮಳೆ ಪ್ರಮಾಣ

ತಮಿಳುನಾಡು -71%

ಮಣಿಪುರ -61%

ಜಾರ್ಖಂಡ್‌ -60%

ಮಹಾರಾಷ್ಟ್ರ -57%

ಪಶ್ಚಿಮ ಬಂಗಾಳ -47%

ಬಿಹಾರ -44%

ಮೇಘಾಲಯ -43%

ಮಿಜೋರಂ -39

ಅರುಣಾಚಲ ಪ್ರದೇಶ -38%

ತೆಲಂಗಾಣ -38%

ಕೇರಳ -35%

ಅಸ್ಸಾಂ -34%

ಛತ್ತೀಸ್‌ಗಢ -31%

ಒಡಿಶಾ -28%

ಆಂಧ್ರಪ್ರದೇಶ -28%

ನಾಗಾಲ್ಯಾಂಡ್‌ -27%

ಕರ್ನಾಟಕ -25%

ಲಕ್ಷದ್ವೀಪ -17%

ಸಿಕ್ಕಿಂ 15%

ಅಂಡಮಾನ್‌ 66%