ಬೆಂಗಳೂರು[ಅ. 09]  ಅಂತಿಮವಾಗಿ ಕರ್ನಾಟಕ ವಿಧಾನಸಭೆ ವಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ಆದರೆ ಈ ವಿಪಕ್ಷ ನಾಯಕನ ಹಾದಿಯ ದಾರಿ ಸುಗಮವಾಗಿರಲಿಲ್ಲ.  ರಾಜ್ಯ ಕಾಂಗ್ರೆಸ್ ನಲ್ಲಿ ಸಹಿ ಸಂಗ್ರಹ ಕೆಲಸವೂ ನಡೆದಿತ್ತು.

ವಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಆಯ್ಕೆಯಾಗಲು ಅಥವಾ ಕಾಂಗ್ರೆಸ್ ಮತ್ತೆ ಸಿದ್ದರಾಮಯ್ಯ ಅವರನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣ ಏನು? ರೇಸ್ ನಲ್ಲಿ ಇದ್ದ ಡಾ. ಜಿ.ಪರಮೇಶ್ವರ, ಎಚ್‌.ಕೆ ಪಾಟೀಲ್ ರನ್ನು ಹಿಂದೆ ಹಾಕಿ ಸಿದ್ದು ದಾರಿ ಸುಗಮ ಮಾಡಿಕೊಂಡಿದ್ದು ಹೇಗೆ? ಎಲ್ಲದಕ್ಕೂ  ಉತ್ತರ ಇಲ್ಲಿದೆ.

1.  ಸಿದ್ದರಾಮಯ್ಯ ಮಾಸ್ ಲೀಡರ್: ಕಾಂಗ್ರೆಸ್ ಅವಧಿಯಲ್ಲಿ ಪೂರ್ಣಾವಧಿ ಸಿಎಂ ಆಗಿ ಸಿದ್ದರಾಮಯ್ಯ ಕೆಲಸ ಮಾಡಿದ್ದರು. ಭಾಗ್ಯಗಳ ಸರದಾರ ಎನ್ನಿಸಕೊಂಡಿದ್ದರು.  ಇಡೀ ರಾಜ್ಯಕ್ಕೆ ಸಿದ್ದು ಪರಿಚಯವಿದ್ದು ಕರ್ನಾಟಕದ ಮಾಸ್ ಲೀಡರ್ ಗಳಲ್ಲಿ ಸಿದ್ದರಾಮಯ್ಯ ಸಹ ಒಬ್ಬರು

2. ಉತ್ತರ ಕರ್ನಾಟಕ: ಚಾಮುಂಡೇಶ್ವರಿಯಿಂದ ಸ್ಪರ್ಧಿಸಿ ಸೋತು ಬಾಗಲಕೋಟೆಯ ಬಾದಾಮಿ ಕ್ಷೇತ್ರದಿಂದ ಸಿದ್ದರಾಮಯ್ಯ ಈ ಸಾರಿ ವಿಧಾನಸಭೆ ಪ್ರವೇಶ ಮಾಡಿದ್ದರು. ಸಹಜವಾಗಿಯೇ ಅವರ ಓಡಾಟ ಕಾಂಗ್ರೆಸ್ ದುರ್ಬಲವಾಗಿರುವ ಉತ್ತರ ಕರ್ನಾಟಕದ ಕಡೆಯೇ ಇತ್ತು. ಕಾಂಗ್ರೆಸ್ ಗೆ ಪುನಶ್ಚೇತನ ಕೊಡಲು ಅಲ್ಲಿಂದ ಆಯ್ಕೆಯಾದ ನಾಯಕನಿಗೆ ಸ್ಥಾನ ಕೊಟ್ಟಂತೆ ಆಗುತ್ತದೆ ಎಂಬ ಲೆಕ್ಕಾಚಾರವೂ ಇರಬಹುದು.

ವಿಧಾನಪರಿಷತ್ ಗೆ ಕಾಂಗ್ರೆಸ್‌ ನಿಂದ ಅಚ್ಚರಿ ಆಯ್ಕೆ

3. ನಾಯಕರ ಮೇಲೆ ಹಿಡಿತ: ಕರ್ನಾಟಕದ ಕಾಂಗ್ರೆಸ್ ಮಟ್ಟಿಗೆ ಸಿದ್ದರಾಮಯ್ಯ ಅತಿ ಪ್ರಭಾವಶಾಲಿ ನಾಯಕ ಎಂಬ ವಿಚಾರ ಹಲವು ಸಲ ಪ್ರೂವ್ ಆಗಿದೆ. ದೋಸ್ತಿ ಸರ್ಕಾರ ಬೀಳಲು ರಾಜೀನಾಮೆ ಕೊಟ್ಟವರಲ್ಲಿ ಹೆಚ್ಚಿನವರು ಸಿದ್ದರಾಮಯ್ಯು ಬೆಂಬಲಿಗರು ಎಂಬ ಮಾತಿದ್ದರೂ ಈಗಲೂ ಕರ್ನಾಟಕದ ಕಾಂಗ್ರೆಸ್ ಗೆ ಸಿದ್ದರಾಮಯ್ಯರೇ ಅಚ್ಚುಮೆಚ್ಚು.

4. ನಡೆಯದ ಲಾಬಿ: ಸಿದ್ದರಾಮಯ್ಯ ವಿರುದ್ಧವಾಗಿ ಕರ್ನಾಟಕದ ಹಲವು ಕಾಂಗ್ರೆಸ್ ನಾಯಕರು ಲಾಬಿ ಮಾಡಿದ್ದರೂ ಕೆಲಸ ಮಾಡಿಲ್ಲ. ಕೆ.ಎಚ್.ಮುನಿಯಪ್ಪನಂತವರು ಸಿದ್ದರಾಮಯ್ಯರನ್ನು ಬಹಿರಂಗವಾಗಿಯೇ  ಟೀಕಿಸಿದ್ದರು. ಆದರೆ ಇದೆಲ್ಲವನ್ನು ಬದಿಗಿಟ್ಟು ಕಾಂಗ್ರೆಸ್ ಸಿದ್ದರಾಮಯ್ಯ ಅವರಿಗೆ ಸ್ಥಾನ ನೀಡಿದೆ.

5. ಮೋದಿ ಟಾರ್ಗೆಟ್ ಮಾಡಬಲ್ಲ ಇಮೇಜ್: ಕ್ಲೀನ್ ಇಮೇಜ್ ಉಳಿಸಿಕೊಂಡಿರುವ ಸಿದ್ದರಾಮಯ್ಯ ಮೋದಿಯನ್ನು ಟಾರ್ಗೆಟ್ ಮಾಡಬಲ್ಲ ವಿಚಾರಗಳನ್ನು ಹಲವು ಸಾರಿ ಹರಿಬಿಟ್ಟಿದ್ದಾರೆ. ದೇಶದೆಲ್ಲೆಡೆ ಪ್ರಬಲವಾಗಿರುವ ಬಿಜೆಪಿಗೆ ಸರಿಯಾದ ಟಾಂಗ್ ಕೊಡಲು ಪ್ರಭಾವಿ ಸಮುದಾಯದ, ಜನಪರಿಚಿತ ವ್ಯಕ್ತಿಯ ಅಗತ್ಯವೇ ಇತ್ತು.