ಬೆಂಗಳೂರು [ಜು.3] :  ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದ ರಾಜಕೀಯ ನಿರ್ಧಾರಗಳಲ್ಲಿ ಮೂಲೆಗುಂಪು ಮಾಡಿದ್ದು, ತಮ್ಮ ಮೇಲೆ ಹಲ್ಲೆ ನಡೆಸಿದ ಕಂಪ್ಲಿ ಗಣೇಶ್‌ ಅವರ ಅಮಾನತನ್ನು ಕಾಂಗ್ರೆಸ್‌ ನಾಯಕತ್ವ ಹಿಂಪಡೆದಿದ್ದು ಹಾಗೂ ಕಾಂಗ್ರೆಸ್‌ನಲ್ಲಿ ತಮ್ಮ ರಾಜಕೀಯ ಭವಿಷ್ಯ ಉಜ್ವಲವಾಗಿಲ್ಲ ಎಂಬ ಭಾವನೆ ಮೂಡಿದ್ದು ವಿಜಯನಗರ ಶಾಸಕ ಆನಂದಸಿಂಗ್‌ ಅವರ ರಾಜೀನಾಮೆಗೆ ನಿಜ ಕಾರಣ ಎನ್ನಲಾಗುತ್ತಿದೆ.

ವಿಜಯನಗರವನ್ನು ಜಿಲ್ಲೆ ಮಾಡಬೇಕು ಹಾಗೂ ಜಿಂದಾಲ್‌ ಕಂಪನಿಗೆ ಭೂಮಿ ನೀಡುವ ನಿರ್ಧಾರ ಹಿಂಪಡೆಯಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಸೋಮವಾರ ರಾಜೀನಾಮೆಯನ್ನು ಆನಂದ್‌ಸಿಂಗ್‌ ಪ್ರಕಟಿಸಿದ್ದಾರೆ. ಆದರೆ, ಈ ಕಾರಣಗಳಿಗಿಂತ ವೈಯಕ್ತಿಕ ಕಾರಣಗಳೇ ಅವರನ್ನು ರಾಜೀನಾಮೆ ನೀಡಲು ಪ್ರೇರೇಪಿಸಿವೆ ಎಂದು ಹೇಳಲಾಗುತ್ತಿದೆ.

ಸಂಡೂರು ಶಾಸಕ ತುಕಾರಾಂ ಅವರು ಸಚಿವರಾದ ನಂತರ ಬಳ್ಳಾರಿ ಜಿಲ್ಲೆಯ ನಿರ್ಧಾರ ಕೈಗೊಳ್ಳುವಾಗ ಕಾಂಗ್ರೆಸ್‌ ನಾಯಕತ್ವ ಆನಂದಸಿಂಗ್‌ ಅವರನ್ನು ನಿರ್ಲಕ್ಷಿಸಿದ್ದು ಅವರಿಗೆ ತೀವ್ರ ಬೇಸರ ತಂದಿತ್ತು ಎನ್ನಲಾಗಿದೆ. ಜಿಂದಾಲ್‌ಗೆ ಭೂಮಿ ಹಂಚಿಕೆ ವಿಚಾರದಲ್ಲಿ ತುಕಾರಾಂ ಮಾತು ಮಾತ್ರ ನಡೆದಿತ್ತು. ಆನಂದಸಿಂಗ್‌ ಅವರಿಗೆ ಈ ವಿಚಾರದಲ್ಲಿ ಯಾವ ಪಾತ್ರವೂ ಇರದಂತೆ ನೋಡಿಕೊಳ್ಳಲಾಗಿತ್ತು. ಇದಲ್ಲದೆ, ತಮ್ಮ ಮೇಲಿನ ದೈಹಿಕ ಹಲ್ಲೆ ಹಾಗೂ ಅದು ಮಾಧ್ಯಮಗಳಲ್ಲಿ ಬಿಂಬಿತವಾದ ರೀತಿಯಿಂದಲೂ ಆನಂದಸಿಂಗ್‌ ತೀವ್ರ ಘಾಸಿಗೊಳ್ಳಗಾಗಿದ್ದರು ಎನ್ನಲಾಗಿದೆ.

ಇನ್ನು ತಮ್ಮ ಮೇಲೆ ಹಲ್ಲೆ ನಡೆಸಿದ ಕಂಪ್ಲಿ ಗಣೇಶ್‌ ಅವರ ವಿರುದ್ಧ ಆರಂಭದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‌ ನಾಯಕತ್ವ ನಡೆದುಕೊಂಡರೂ, ಅನಂತರ ಅವರ ಅಮಾನತು ಆದೇಶ ಹಿಂಪಡೆದಿದ್ದು ಆನಂದಸಿಂಗ್‌ಗೆ ಬೇಸರ ತರಿಸಿತ್ತು ಎನ್ನಲಾಗಿದೆ.

ಇದರೊಟ್ಟಿಗೆ ಲೋಕಸಭೆ ಚುನಾವಣೆ ನಂತರ ದೇಶದ ರಾಜಕೀಯ ಚಿತ್ರಣದಲ್ಲಿ ಆದ ಬದಲಾವಣೆಯಿಂದ ಅವರಿಗೆ ಕಾಂಗ್ರೆಸ್‌ಗೆ ಶಕ್ತಿ ಕುಂದುತ್ತಿರುವುದು ಮತ್ತು ಕಾಂಗ್ರೆಸ್‌ನಲ್ಲಿ ತಮ್ಮ ಪ್ರಭಾವ ಕ್ಷಯಿಸಿರುವುದರಿಂದ ಅವಕಾಶವಿರುವಾಗಲೇ ಬಿಜೆಪಿ ಸೇರುವುದು ಉತ್ತಮ ಎಂಬ ಭಾವನೆ ಮೂಡಿತು ಎನ್ನಲಾಗುತ್ತಿದೆ.

ಭವಿಷ್ಯದಲ್ಲಿ ತಾವು ರಾಜಕೀಯದಲ್ಲಿ ಮುಂದುವರೆಯದಿದ್ದರೂ ತಮ್ಮ ಪುತ್ರ ಸಿದ್ದಾರ್ಥನಿಗೆ ರಾಜಕೀಯ ಜೀವನ ಕಟ್ಟಿಕೊಡಲು ಬಿಜೆಪಿ ಸೇರುವುದು ಉತ್ತಮ ಎಂಬ ನಿರ್ಧಾರ ಕೈಗೊಂಡ ಆನಂದಸಿಂಗ್‌ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಬಿಜೆಪಿಯತ್ತ ದಾಪುಗಾಲು ಹಾಕಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳುತ್ತವೆ.

1. ಬಳ್ಳಾರಿಯಲ್ಲಿ ಮೂಲೆಗುಂಪು

2. ಹಲ್ಲೆ ನಡೆಸಿದ್ದ ಕಂಪ್ಲಿ ಗಣೇಶ್‌ ಅಮಾನತು ತೆರವು

3. ಕಾಂಗ್ರೆಸ್ಸಲ್ಲಿ ಭವಿಷ್ಯವಿಲ್ಲ ಎಂಬ ಭಾವನೆ

ಜಿಲ್ಲೆಗೆ ಅನ್ಯಾಯ ಆಗಿದೆ

ನನ್ನ ಜಿಲ್ಲೆಗೆ ಅನ್ಯಾಯ ಆಗುತ್ತಿರುವುದನ್ನು ಖಂಡಿಸಿ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಜಿಂದಾಲ್‌ಗೆ ರೈತರ ಭೂಮಿ ಮಾರಾಟ ಮಾಡಬೇಡಿ, ವಿಜಯನಗರವನ್ನು ಜಿಲ್ಲೆಯಾಗಿ ಘೋಷಿಸಿ ಎಂಬುದು ಸೇರಿದಂತೆ ಹಲವು ಬೇಡಿಕೆ ಇಟ್ಟಿದ್ದೆ. ಸರ್ಕಾರ ಸೂಕ್ತವಾಗಿ ಸ್ಪಂದಿಸದ ಕಾರಣ ರಾಜೀನಾಮೆ ನೀಡಿದ್ದೇನೆ.

- ಆನಂದ್‌ ಸಿಂಗ್‌, ವಿಜಯನಗರ (ಹೊಸಪೇಟೆ) ಶಾಸಕ