ಚೀನಾ ನಡೆಸಿದ ರಾಕೆಟ್ ದಾಳಿಯಲ್ಲಿ ಭಾರತದ 158 ಯೋಧರು ಸಾವನ್ನಪ್ಪಿದ್ದಾರೆ ಎಂಬ ವರದಿಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆ ವಕ್ತಾರ ಗೋಪಾಲ್ ಬಾಗ್ಲೆ, ಈ ರೀತಿಯ ವರದಿಗಳು ಆಧಾರ ರಹಿತ, ದುರುದ್ದೇಶ ಪೂರಿತ. ಈ ವರದಿಯನ್ನು ನಂಬಬಾರದು ಎಂದು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನವದೆಹಲಿ: ಸಿಕ್ಕಿಂ ಗಡಿಯಲ್ಲಿರುವ ಡೋಕ್ಲಾಮ್ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಉಭಯ ದೇಶಗಳು ಗಡಿಯಲ್ಲಿ ಸೇನೆಯನ್ನು ನಿಯೋಜಿಸಿವೆ. ಈ ಮಧ್ಯೆ ಚೀನಾದ ಪೀಪಲ್ಸ್ ಲಿಬರೇಷನ್ಸ್ ಆರ್ಮಿ (ಪಿಎಲ್‌ಎ) ಭಾರತೀಯ ಸೇನೆಯ ಮೇಲೆ ದಾಳಿ ನಡೆಸಿ 158 ಯೋಧರನ್ನು ಹತ್ಯೆ ಮಾಡಿದೆ ಎಂದು ಪಾಕಿಸ್ತಾನದ ‘ದುನ್ಯಾ ನ್ಯೂಸ್’ ಉರ್ದು ಸುದ್ದಿ ವಾಹಿನಿ ವರದಿ ಮಾಡಿದೆ. ಚೀನಾ ಸೇನೆ ಭಾರತೀಯ ಯೋಧರ ಮೇಲೆ ಮಷಿನ್‌'ಗನ್, ರಾಕೆಟ್ ಲಾಂಚರ್, ಮೊರ್ಟಾರ್ ಶೆಲ್‌'ಗಳಿಂದ ದಾಳಿ ನಡೆಸಿರುವುದಕ್ಕೆ ಪುರಾವೆಯಾಗಿ ಚೀನಾ ಸೆಂಟ್ರಲ್ ಟೆಲಿವಿಶನ್‌'ನ 2 ನಿಮಿಷದ ವಿಡಿಯೋವೊಂದನ್ನು ಬಿತ್ತರಿಸಿದೆ. ಆದರೆ, ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದರೂ ಗುಂಡಿನ ಕಾಳಗ ಏರ್ಪಟ್ಟಿಲ್ಲ. ಪಾಕಿಸ್ತಾನದ ಮಾಧ್ಯಮದಲ್ಲಿ ಬಂದ ವರದಿ ಸಂಪೂರ್ಣ ನಿರಾಧಾರ ಎಂದು ಭಾರತ ಸ್ಪಷ್ಟನೆ ನೀಡಿದೆ.

ಚೀನಾ ನಡೆಸಿದ ರಾಕೆಟ್ ದಾಳಿಯಲ್ಲಿ ಭಾರತದ 158 ಯೋಧರು ಸಾವನ್ನಪ್ಪಿದ್ದಾರೆ ಎಂಬ ವರದಿಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆ ವಕ್ತಾರ ಗೋಪಾಲ್ ಬಾಗ್ಲೆ, ಈ ರೀತಿಯ ವರದಿಗಳು ಆಧಾರ ರಹಿತ, ದುರುದ್ದೇಶ ಪೂರಿತ. ಈ ವರದಿಯನ್ನು ನಂಬಬಾರದು ಎಂದು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ, ಈ ಸುಳ್ಳು ವರದಿಯನ್ನು ಚೀನಾ ಕೂಡ ಖಂಡಿಸಿದೆ. ಈ ಕುರಿತಂತೆ ಚೀನಾದ ಅಧಿಕೃತ ಮಾಧ್ಯಮ ಪೀಪಲ್ಸ್ ಡೈಲಿ ತನಿಖಾ ವರದಿಯೊಂದನ್ನು ಪ್ರಕಟಿಸಿದೆ. ಪಾಕ್ ಮಾಧ್ಯಮ ವರದಿ ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿಯ ಗಮನಕ್ಕೂ ಬಂದಿದೆ. ಸಾಮಾಜಿಕ ಜಾಲತಾಣಗಳು ಮತ್ತು ಅಂತರ್ಜಾಲದ ಅನಧಿಕೃತ ಮಾಹಿತಿಯನ್ನು ಆಧರಿಸಿ ಪಾಕಿಸ್ತಾನ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿವೆ ಎಂದು ಪೀಪಲ್ಸ್ ಡೈಲಿ ಸ್ಪಷ್ಟನೆ ನೀಡಿದೆ.

epaperkannadaprabha.com