ತಿರುವನಂತಪುರಂ[ಆ.26]: ದೇಶದಾದ್ಯಂತ ಕೃಷ್ಣ ಜನ್ಮಾಷ್ಟಮಿ ಅದ್ಧೂರಿಯಾಗಿ ನಡೆದಿದೆ. ಹೀಗಿರುವಾಗ ಕೃಷ್ಣಧಾರಿ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಇನ್ನಿಲ್ಲದಂತೆ ಕಾಡುತ್ತಿದ್ದಾಳೆ. ಮುದ್ದು ಮುಖದ 'ಕೃಷ್ಣ'ವೇಣಿ ವಾಟ್ಸಾಪ್ ಸ್ಟೇಟಸ್ ಗಳಲ್ಲೂ ರಾರಾಜಿಸುತ್ತಿದ್ದಾಳೆ. ಆದರೀಗ ದಿನ ಬೆಳಗಾಗುತ್ತಿದ್ದಂತೆ ಎಲ್ಲರ ನಿದ್ದೆಗೆಡಿಸಿರುವ ಆ ಯುವತಿ ಯಾರು? ಆಕೆಯ ಹೆಸರೇನು? ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಇಲ್ಲಿದೆ ನೋಡಿ ವಿಡಿಯೋ ಹಿಂದಿನ ಅಸಲಿಯತ್ತು.

ವಿಡಿಯೋದಲ್ಲಿ ಕೃಷ್ಣ ವೇಷಧಾರಿಯಾಗಿ ಎಲ್ಲರ ಫೇವರಿಟ್ ಆದ ಯುವತಿ ಕೇರಳ ಮೂಲಕ ವೈಷ್ಣವ ಕೆ. ಸುನೀಲ್. ಇನ್ನು ವೈರಲ್ ಆದ ವಿಡಿಯೋ 2018ರ ಕೃಷ್ಣ ಜನ್ಮಾಷ್ಟಮಿಯದ್ದು. ಅಂದು ವೈಷ್ಣವ ಕೃಷ್ಣನ ಉಡುಪು ಧರಿಸಿ ನೃತ್ಯ ಮಾಡುತ್ತಾ ಮಡಿಕೆ ಒಡೆಯಲು ಯತ್ನಿಸುತ್ತಿದ್ದಳು. ಈ ವೇಳೆ ಅಲ್ಲಿದ್ದ ಸ್ಥಳೀಯರು ಈ ದೃಶ್ಯವನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿದಿದ್ದರು. ಸದ್ಯ ಅಂದಿನ ಆ ವಿಡಿಯೋ ವೈರಲ್ ಆಗುತ್ತಿದೆ.

ಇನ್ನು ಈ ವಿಡಿಯೋ ಸಂಬಂಧ ಖುದ್ದು  ವೈಷ್ಣವ ಕೆ. ಸುನೀಲ್ ಪ್ರತಿಕ್ರಿಯಿಸಿದ್ದು, '2018ರಲ್ಲಿ ಗುರುವಾಯೂರು ದೇವಸ್ಥಾನದಲ್ಲಿ ಆಯೋಜಿಸಿದ್ದ ಕೃಷ್ಣ ಜನ್ಮಾಷ್ಟಮಿಯ ವಿಡಿಯೋ ಇದು. ಆದರೆ ಇದು ಈ ಬಾರಿ ವೈರಲ್ ಆಗುತ್ತದೆ ಎಂದು ಭಾವಿಸಿರಲಿಲ್ಲ. ಕೃಷ್ಣನ ಭಕ್ತೆಯಾಗಿರುವ ನಾನು ಕಳೆದ ಮೂರು ವರ್ಷಗಳಿಂದ ಕೃಷ್ಣನ ವೇಷ ಧರಿಸಿ ನೃತ್ಯ ಮಾಡುತ್ತೇನೆ' ಎಂದಿದ್ದಾರೆ.

ಸಾಮಾನ್ಯವಾಗಿ ಕೃಷ್ಣ ಜನ್ಮಾಷ್ಟಮಿ ವೇಳೆ ಪುಟ್ಟ ಪುಟ್ಟ ಮಕ್ಕಳು, ಕೃಷ್ಣನಂತೆ ವೇಷ ಧರಿಸುವುದು ಸಾಮಾನ್ಯ. ಆದರೆ ಕೃಷ್ಣ ಭಕ್ತೆ ವೈಷ್ಣವ ಕೂಡಾ ಕೃಷ್ಣನ ವೇಷ ಧರಿಸಿದ್ದಾರೆ.

ಎಲ್ಲಕ್ಕಿಂತ ಹೆಚ್ಚಾಗಿ ಈಕೆಯ ಮುಖಭಾವ ಬಹುತೇಕರಿಗೆ ಇಷ್ಟವಾಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಯುವತಿ ಯಾರು? ಹಾಗೂ ಈಕೆ ಸೋಶಿಯಲ್ ಮೀಡಿಯಾ ಅಕೌಂಟ್ ಬಳಸುತ್ತಾರೆಯೇ ಎಂಬ ಹುಡುಕಾಟವೂ ಭರದಿಂದ ಸಾಗಿದೆ.