Asianet Suvarna News Asianet Suvarna News

ರಾಜಕೀಯ ಪ್ರವೇಶಕ್ಕೆ ಉಪೇಂದ್ರ ಗಂಭೀರ ಚಿಂತನೆ: ಕಮಲ್ ಹಾಸನ್, ರಜನಿಕಾಂತ್ ಹಾದಿಯಲ್ಲಿ ಉಪ್ಪಿ

ಅತ್ತ ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಸಂವೇದನಾಶೀಲ ನಾಯಕ ಕಮಲ್ ಹಾಸನ್ ಈ ವರ್ಷ ರಾಜಕೀಯ ಪ್ರವೇಶಕ್ಕೆ ಗಂಭೀರ ಚಿಂತನೆ ನಡೆಸಿದ್ದರೆ, ಇತ್ತ ಕರ್ನಾಟಕದಲ್ಲಿ ಈ ವರ್ಷವೇ ರಾಜಕೀಯ ಪ್ರವೇಶ ಮಾಡುವ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಕೂಡ ಗಂಭೀರವಾಗಿ ಚಿಂತಿಸುತ್ತಿದ್ದಾರೆ.

Real Star Upendra Is Thinking To Enter The Political Field

ಬೆಂಗಳೂರು(ಆ.11): ಅತ್ತ ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಸಂವೇದನಾಶೀಲ ನಾಯಕ ಕಮಲ್ ಹಾಸನ್ ಈ ವರ್ಷ ರಾಜಕೀಯ ಪ್ರವೇಶಕ್ಕೆ ಗಂಭೀರ ಚಿಂತನೆ ನಡೆಸಿದ್ದರೆ, ಇತ್ತ ಕರ್ನಾಟಕದಲ್ಲಿ ಈ ವರ್ಷವೇ ರಾಜಕೀಯ ಪ್ರವೇಶ ಮಾಡುವ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಕೂಡ ಗಂಭೀರವಾಗಿ ಚಿಂತಿಸುತ್ತಿದ್ದಾರೆ.

ಈ ಕುರಿತು ಉಪೇಂದ್ರ ತಮ್ಮ ಹಲವು ಆತ್ಮೀಯರ ಜೊತೆ ಚರ್ಚೆ ನಡೆಸಿದ್ದು, ರಾಜಕೀಯ ಪ್ರವೇಶಿಸುವುದರ ಅಂತಿಮ ರೂಪುರೇಷೆಯನ್ನೂ ಸಿದ್ಧಪಡಿಸುತ್ತಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ. ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಲು ಉಪೇಂದ್ರ ನಿರಾಕರಿಸಿದ್ದಾರೆ. ಅದನ್ನು ಸಮಯವೇ ನಿರ್ಧರಿಸಲಿದೆ ಎಂದಷ್ಟೇ ಹೇಳಿದ್ದಾರೆ.

ಕೆಲ ವರ್ಷಗಳಿಂದ ಉಪೇಂದ್ರ ರಾಜಕೀಯಕ್ಕೆ ಬರಬಹುದು ಎಂಬ ನಿರೀಕ್ಷೆ, ವದಂತಿಗಳಿದ್ದವು. ಕೆಲವು ಪಕ್ಷ ಹಾಗೂ ಅಭಿಮಾನಿಗಳಿಂದ ಒತ್ತಾಯವೂ ಇತ್ತು. ಆದರೆ, ಆಗೆಲ್ಲ ರಾಜಕೀಯ ಪ್ರವೇಶವನ್ನು ಉಪೇಂದ್ರ ಸ್ಪಷ್ಟವಾಗಿ ನಿರಾಕರಿಸಿದ್ದರು. ಆದರೆ, ಈಗ ತಮ್ಮ ಸಹ ಚಿಂತಕರ ಜೊತೆ ಮಾತನಾಡಿದ ನಂತರ ರಾಜಕೀಯ ರಂಗಪ್ರವೇಶದ ಬಗ್ಗೆ ಒಲವು ತೋರಿದ್ದಾರೆ ಎನ್ನುತ್ತವೆ ಮೂಲಗಳು.

ಉಪೇಂದ್ರ ಯಾವ ಪಕ್ಷದ ಜೊತೆ ಗುರುತಿಸಿಕೊಳ್ಳಲಿದ್ದಾರೆ ಎಂದು ಖಚಿತವಾಗಿಲ್ಲ. ಆದರೆ, ಭ್ರಷ್ಟಾಚಾರರಹಿತ ರಾಷ್ಟ್ರ ನಿರ್ಮಾಣದ ರಾಜಕೀಯ ಆಂದೋಲನ ದಲ್ಲಿ ತೊಡಗಿಕೊಳ್ಳಲು ಮುಂದಾಗಿದ್ದಾರೆ ಎಂದಷ್ಟೇ ಮೂಲಗಳು ಹೇಳಿವೆ. ರಜನಿಕಾಂತ್ ಮತ್ತು ಕಮಲ್ ಹಾಸನ್ ಬಗ್ಗೆ ಕೂಡ ಇದೇ ರೀತಿಯ ಗೊಂದಲಗಳಿವೆ. ಅವರು ಬಿಜೆಪಿ, ಡಿಎಂಕೆ,ಎಐಡಿಎಂಕೆಯಂಥ ಯಾವು ದಾದರೂ ಒಂದು ಪಕ್ಷದ ಜೊತೆ ಗುರುತಿಸಿಕೊಳ್ಳಲಿ ದ್ದಾರೋ? ತಮ್ಮದೇ ಹೊಸ ಪಕ್ಷ ಕಟ್ಟಿ ಬಿಜೆಪಿಯಂಥ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಿದ್ದಾರೋ? ಅಥವಾ ಎಲ್ಲ ಪಕ್ಷಗಳ ಜೊತೆ ಸಮಾನ ಸಂಪರ್ಕದಲ್ಲಿದ್ದು, ಸಾಮಾಜಿಕ,ರಾಜಕೀಯ ಆಂದೋಲನಗಳಲ್ಲಿ ಸಕ್ರಿಯ ವಾಗಲಿದ್ದಾರೋ ಎನ್ನುವ ಗೊಂದಲಗಳಿವೆ. ಉಪೇಂದ್ರ ಕೂಡ ಇದೇ ರೀತಿಯ ಬಹುಮಾರ್ಗ ಚಿಂತನೆಯಲ್ಲಿ ಇದ್ದಾರೆ ಎನ್ನುತ್ತಾರೆ ನಿಕಟವರ್ತಿಗಳು.

ಶಂಕರ್ ನಾಗ್ ಅಭಿಮಾನಿಗಳ ರೀತಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಳ್ಳಲು ಉತ್ಸಾಹದಿಂದಿರುವ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಉಪೇಂದ್ರ ಈ ಹಿಂದೆ ಆಮ್ ಆದ್ಮಿ ಪಕ್ಷದ ಮೂಲಕವೇ ರಾಜಕೀಯ ಆರಂಭಿಸುವ ಸಾಧ್ಯತೆಯಿತ್ತು. ಆದರೆ, ಕರ್ನಾಟಕದ ಆಮ್ ಆದ್ಮಿ ಬಳಗ ಅಂತಹ ಅವಕಾಶವನ್ನು ಕಳೆದುಕೊಂಡಿತ್ತು.

ಈ ಹಿಂದೆ ಲೋಕಪಾಲ್ ಮಸೂದೆಗೆ ಒತ್ತಾಯಿಸಿ ದೇಶಾದ್ಯಂತ ಬಿರುಸು ಗೊಂಡಿದ್ದ ಅಣ್ಣಾ ಹಜಾರೆ ಆಂದೋಲನದಲ್ಲಿ ಉಪೇಂದ್ರ ಆಸಕ್ತಿಯಿಂದಲೇ ಭಾಗವಹಿಸಿದ್ದರು. ಕರ್ನಾಟಕದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಹಾಗೂ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆದ ಹೋರಾಟದಲ್ಲಿ ಉಪೇಂದ್ರ ಸ್ವಯಂಪ್ರೇರಿತವಾಗಿ ಪಾಲ್ಗೊಂ ಡಿದ್ದರು. ಅಲ್ಲಿಂದಲೇ ಅವರಿಗೆ ಸಮಾಜದಲ್ಲಿ ಏನಾದರೂ ಪರಿವರ್ತನೆ ತರಲು ತಾವೂ ಸಾರ್ವಜನಿಕ ರಂಗ ಪ್ರವೇಶ ಮಾಡಬೇಕು ಎಂಬ ಬಯಕೆಯಿತ್ತು. ಆದರೆ, ಅದಕ್ಕೆ ರಾಜಕೀಯವೋ ಅಥವಾ ಸಮಾಜಕೇಂದ್ರಿತ ಆಂದೋಲನಗಳೋ ಎಂಬ ಗೊಂದಲದಲ್ಲಿ ಉಪೇಂದ್ರ ಇದ್ದರು. ಇದೀಗ ಉಪೇಂದ್ರ ಅವರ ಚಿಂತನೆಗಳು ಪಕ್ವವಾದಂತಿವೆ ಎನ್ನುತ್ತವೆ ಅವರ ಆಪ್ತ ವಲಯಗಳು.

ರಾಜಕೀಯ ಪದವಿ ಅಥವಾ ಅಧಿಕಾರ ಮುಖ್ಯವಲ್ಲ. ಈಗಿನ ಅನೇಕ ಸಮಾಜಿಕ ಹಾಗೂ ಅಂತಾರಾಜ್ಯ ಸಮಸ್ಯೆಗಳಿಗೆ ಪರಿಹಾರ ಬೇಕಾಗಿದೆ. ಒಂದೊಂದು ಸಣ್ಣ ಐಡಿಯಾ ಆ ಸಮಸ್ಯೆ ಪರಿಹರಿಸಬಲ್ಲದು. ಆದರೆ, ಇದಕ್ಕೆಲ್ಲ ರಾಜಕೀಯ ಬಲ ಮತ್ತು ಇಚ್ಛಾಶಕ್ತಿ ಬೇಕು. ಅಂತಹ ರಾಜಕೀಯ ಐಡಿಯಾಗಳ ಸಂಚಲನಕ್ಕಾಗಿ ರಾಜಕೀಯ ಪ್ರವೇಶ ಮಾಡಬಹುದು ಎಂಬ ಇರಾದೆ ಉಪೇಂದ್ರ ಅವರದ್ದು ಎನ್ನಲಾಗಿದೆ.

500, 1000 ರೂ. ರದ್ದು ಸೇರಿದಂತೆ ಸಾಮಾಜಿಕ ಹಾಗೂ ರಾಜಕೀಯ ಬದಲಾವಣೆ ತರುವ ಸಲುವಾಗಿ ಉಪೇಂದ್ರ ತಮ್ಮ ಹಲವು ಸಿನಿಮಾಗಳಲ್ಲಿ ಸಂದೇಶ ನೀಡುತ್ತಿದ್ದರು. ಇತ್ತೀಚಿನ ಕೆಲ ತಿಂಗಳುಗಳಿಂದ ಉಪೇಂದ್ರ ಕೆಲ ರಾಜಕೀಯ ಹಾಗೂ ಸಾಮಾಜಿಕ ವಿಷಯಗಳಲ್ಲಿ ತಮ್ಮ ಸ್ಪಷ್ಟ ನಿಲುವುಗಳನ್ನು ಟ್ವೀಟರ್ ಹಾಗೂ ಸುದ್ದಿ ವಾಹಿನಿಗಳ ಮೂಲಕ ಬಹಿರಂಗಪಡಿಸು ತ್ತಲೇ ಬಂದಿದ್ದಾರೆ. ಈಗ ಅಂಥ ಸಂದೇಶಗಳನ್ನು ರಿಯಲ್ ಮಾಡಬೇಕು ಎನ್ನುವುದು ಉಪೇಂದ್ರ ಆಸೆ. ಅದಕ್ಕಾಗಿ ಅವರು ರಾಜಕೀಯ ರಂಗ ಪ್ರವೇಶಿಸುವ ಚಿಂತನೆಯಲ್ಲಿ ಇದ್ದಾರೆ ಎನ್ನುತ್ತಾರೆ ಉಪೇಂದ್ರ ಅವರ ಒಬ್ಬ ರಾಜಕೀಯ ಚಿಂತನ ಸಹವರ್ತಿ. ಇಷ್ಟಕ್ಕೂ ಉಪೇಂದ್ರ ರಿಯಲ್ಲಾಗಿ ರಾಜಕೀಯ ಪ್ರವೇಶ ಮಾಡುತ್ತಾರಾ? ಬಹುಶಃ ಒಂದೆರಡು ತಿಂಗಳಲ್ಲಿ ಉತ್ತರ ಸಿಗಬಹುದು.

-ರವಿ ಹೆಗಡೆ, ಬೆಂಗಳೂರು

Follow Us:
Download App:
  • android
  • ios