ಎಲ್ಲೆಲ್ಲೂ ನವಜಾತ ಶಿಶುಗಳ ಮಾರಣಹೋಮ, ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಮಾತ್ರವಲ್ಲ ರಾಜ್ಯಾದ್ಯಂತ ಸುವರ್ಣನ್ಯೂಸ್ ನಡೆಸಿದ ರಿಯಾಲಿಟಿ ಚೆಕ್ನಲ್ಲಿ ಬೆಂಗಳೂರು ಸೇರಿ ರಾಜ್ಯದ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸಮಸ್ಯೆ ಇರುವುದು ಬಯಲಾಗಿದೆ.
ಬೆಂಗಳೂರು(ಆ.24): ನವಜಾತ ಶಿಶುಗಳ ಸಾವು, ಇದು ಕೋಲಾರ ಮಾತ್ರವಲ್ಲ ರಾಜ್ಯದ ಅದೆಷ್ಟೋ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ದುರಂತ. ಈ ಬಗ್ಗೆ ಸುವರ್ಣನ್ಯೂಸ್ ರಾಜ್ಯಾದ್ಯಂತ ರಿಯಾಲಿಟಿ ಚೆಕ್ ನಡೆಸಿದ್ದು ಆಸ್ಪತ್ರೆಗಳ ಸ್ಥಿತಿಯ ಸತ್ಯದರ್ಶನವಾಗಿದೆ.
ಬೀದರ್ ಜಿಲ್ಲಾಸ್ಪೆತ್ರೆಯಲ್ಲಿ ಕಳೆದ 6 ತಿಂಗಳಲ್ಲಿ148 ಮಕ್ಕಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ದುರಂತ ಅಂದ್ರೆ ಸುವರ್ಣನ್ಯೂಸ್ ತಂಡ ರಿಯಾಲಿಟಿ ಚೆಕ್ ನಡೆಸಿದಾಗ ಜಿಲ್ಲಾಸ್ಪತ್ರೆ ಆವರಣದಲ್ಲೇ ನವಜಾತ ಶಿಶುವಿನ ಶವ ಪತ್ತೆಯಾಗಿದೆ.
ಹುಬ್ಬಳ್ಳಿಯ ಕಿಮ್ಸ್ ನಲ್ಲಿ ರಿಯಾಲಿಟಿ ಚೆಕ್ ಮಾಡಿರುವ ಸುವರ್ಣ ನ್ಯೂಸ್ ಗೆ ಬಾಣಂತಿಯರ ಶೋಚನಿಯ ಸ್ಥಿತಿಯ ದರ್ಶನವಾಗಿದೆ. ಅಲ್ಲದೇ, ಕಲಬುರಗಿ ಆಸ್ಪತ್ರೆಯಲ್ಲಿ ಒಂದೇ ವಾರ್ಮರ್ ನಲ್ಲಿ ಎರೆಡೆರೆಡು ಮಕ್ಕಳನ್ನ ಮಲಗಿಸಿ ಚಿಕಿತ್ಸೆ ನೀಡುತ್ತಿರುವ ದೃಶ್ಯ ಕಂಡುಬಂತು. ಕಳೆದ 7 ತಿಂಗಳಲ್ಲಿ 148 ಶಿಶುಗಳ ಸಾವನ್ನಪ್ಪಿವೆ.
ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಒಂದೇ ದಿನದಲ್ಲಿ 3 ಮಕ್ಕಳು ಮೃತಪಟ್ಟಿವೆ. ವೈದ್ಯರ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಅನ್ನೋ ಆರೋಪವೂ ಕೇಬಂದಿದೆ. ಇನ್ನು, ಸಾಂಸ್ಕೃತಿಕ ನಗರಿ ಮೈಸೂರಿನ ಚಲುವಾಂಬ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ಹೆಚ್ಚು ಮಂದಿ ದಾಖಲಾಗುತ್ತಿದ್ದು, ಒಂದೇ ಬೆಡ್ ನಲ್ಲಿ ಇಬ್ಬರು ಬಾಣಂತಿಯರು ಇರಿಸುವ ಪ್ರಸಂಗ ಎದುರಾಗುತ್ತಿದೆ.
ಅಷ್ಟೇ ಅಲ್ಲ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೀಟರ್ ಸಮಸ್ಯೆಯಿಂದ 1 ವರ್ಷದಲ್ಲಿ 18 ಮಕ್ಕಳು ಸಾವಿನ ಮನೆ ಸೇರಿವೆ. ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕಳೆದ 3 ತಿಂಗಳಲ್ಲಿ ಒಟ್ಟು 8 ಶಿಶುಗಳು ಮೃತಪಟ್ಟಿರುವ ಬಗ್ಗೆ ವರದಿ ಸಿಕ್ಕಿದೆ.
ದುರಂತ ಅಂದ್ರೆ ಸಿಲಿಕಾನ್ ಸಿಟಿ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲೂ ಇದೇ ಕಥೆ. ಮಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆ, ವಾಣಿ ವಿಲಾಸ್ ಆಸ್ಪತ್ರೆಯಲ್ಲೂ ವೆಂಟಿಲೇಟರ್ ಸಮಸ್ಯೆ ಕಂಡು ಬಂದಿದೆ.
ಇನ್ನು ರಾಜ್ಯದ ಮಕ್ಕಳ ರೆಫರಲ್ ಆಸ್ಪತ್ರೆಯಾಗಿರುವ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿಯೂ ವೆಂಟಿಲೇಟರ್ ಸೌಲಭ್ಯವಿಲ್ಲ ಅನ್ನೋದು ಸುವರ್ಣನ್ಯೂಸ್ನ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.
ಒಟ್ನಲ್ಲಿ ಸರ್ಕಾರದ ನಿರ್ಲಕ್ಷಕ್ಕೆ ಅದೆಷ್ಟೋ ಮುಗ್ದ ಕಂದಮ್ಮಗಳು ಕಣ್ಣು ಬಿಡುವ ಮುನ್ನವೇ ಸಾವಿನ ಮನೆ ಸೇರ್ತಿರೋದು ನಿಜಕ್ಕೂ ದುರಂತವೇ ಸರಿ. ಇನ್ನಾದ್ರೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಾ?.. ಮುಂದೆ ಇಂತಹ ಅನಾಹುತ ನಡೆಯದಂತೆ ಕ್ರಮ ಕೈಗೊಳ್ಳುತ್ತಾ ಕಾದು ನೊಡಬೇಕಿದೆ.
