ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ, ರಾಷ್ಟ್ರ ಮಟ್ಟದ ಆಟಗಾರ್ತಿ ಕಾವ್ಯಶ್ರೀ (16) ನಿಗೂಢ ಸಾವು ಪ್ರಕರಣ ಮಾಧ್ಯಮಗಳಲ್ಲಿ ನಾನಾ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಈ ಸಂಬಂಧ ತನಿಖೆಗೆ ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ಅವರು ಶುಕ್ರವಾರ ಆದೇಶ ನೀಡಿದ್ದಾರೆ. 

ಮಂಗಳೂರು (ಜು.28): ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ, ರಾಷ್ಟ್ರ ಮಟ್ಟದ ಆಟಗಾರ್ತಿ ಕಾವ್ಯಶ್ರೀ (16) ನಿಗೂಢ ಸಾವು ಪ್ರಕರಣ ಮಾಧ್ಯಮಗಳಲ್ಲಿ ನಾನಾ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಈ ಸಂಬಂಧ ತನಿಖೆಗೆ ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ಅವರು ಶುಕ್ರವಾರ ಆದೇಶ ನೀಡಿದ್ದಾರೆ. 
ಅದರಂತೆ ಎಸಿಪಿ ರಾಜೇಂದ್ರಕುಮಾರ್ ನೇತೃತ್ವದ ತನಿಖಾ ತಂಡ ಆಳ್ವಾಸ್ ಕಾಲೇಜಿಗೆ ಭೇಟಿ ನೀಡಿ ತನಿಖೆಯನ್ನು ಕೈಗೆತ್ತಿಕೊಂಡಿದೆ. ಆಳ್ವಾಸ್ ಹಾಸ್ಟೆಲ್ ವಾರ್ಡನ್, ಕಾವ್ಯಶ್ರೀಯವರ ಸಹಪಾಠಿ ವಿದ್ಯಾರ್ಥಿನಿಯರು ಹಾಗೂ ಆಡಳಿತ ಮಂಡಳಿಯಿಂದ ಮಾಹಿತಿ ಪಡೆದುಕೊಂಡಿದೆ. ಇನ್ನೂ ಹೆಚ್ಚಿನ ತನಿಖೆ ಶನಿವಾರವೂ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತನಿಖೆ ಎದುರಿಸಲು ಸಿದ್ಧ:ಕಾವ್ಯಶ್ರಿ ಸಾವಿನ ಪ್ರಕರಣದ ಕುರಿತು ಯಾವುದೇ ತನಿಖೆಗೆ ಸಿದ್ಧ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆ ತಿಳಿಸಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ ಆಳ್ವ, ವಿದ್ಯಾರ್ಥಿನಿ ಕಾವ್ಯಶ್ರೀ ನಮ್ಮ ಕಾಲೇಜಿಗೆ ಸೇರ್ಪಡೆಯಾಗಿ ಕೇವಲ ೧ ತಿಂಗಳು ೮ ದಿನ ಕಳೆದಿತ್ತು. ಆಕೆ ಬಾಲ್‌ಬ್ಯಾಡ್ಮಿಂಟನ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಳು. ಕಾಲೇಜಿನಲ್ಲಿ ಉತ್ತಮ ನಡವಳಿಕೆಯಿಂದ ಇದ್ದು, ಯಾವುದೇ ತೊಂದರೆ ಆಕೆಗೆ ಇರಲಿಲ್ಲ. ಆದರೆ ಜು.೨೦ರಂದು ಸಂಜೆ ಹಠಾತ್ತನೆ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ. 
ಆಕೆಯ ಶವವನ್ನು ನೇಣಿನಿಂದ ಹಾಸ್ಟೆಲ್ ಕೊಠಡಿಯ ವಿದ್ಯಾರ್ಥಿನಿಯರೇ ಕೆಳಗಿಳಿಸಿದ್ದಾರೆ. ಮರುದಿನ ಪರೀಕ್ಷೆ ಇದ್ದ ಕಾರಣ ಇತರೆ ವಿದ್ಯಾರ್ಥಿನಿಯರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಪೊಲೀಸರ ಗಮನಕ್ಕೆ ತಂದೇ ಶವವನ್ನು ನಿರ್ವಹಿಸಲಾಗಿದೆ. ಶವಾಗಾರಕ್ಕೆ ಆಕೆಯ ಪೋಷಕರೂ ಆಗಮಿಸಿ ಶವವನ್ನು ಪರಿಶೀಲಿಸಿದ್ದಾರೆ. ಘಟನೆಯ ಬಳಿಕ ಬಾಹ್ಯ ಕ್ರೀಡಾ ತರಬೇತುದಾರ ಪ್ರವೀಣ್ ಅವರನ್ನೂ ಪ್ರಶ್ನಿಸಲಾಗಿದ್ದು, ಅವರು ಕೂಡ ಆಕೆಗೆ ಯಾವುದೇ ಕಿರುಕುಳ ನೀಡಿಲ್ಲ ಎಂದಿದ್ದಾರೆ. ಸದ್ಯದ ಮಟ್ಟಿಗೆ ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ಕಾಲೇಜಿಗೆ ಕ್ರೀಡಾ ತರಬೇತಿಗೆ ಬಾರದಂತೆ ಪ್ರವೀಣ್‌ಗೆ ತಾಕೀತು ಮಾಡಲಾಗಿದೆ ಎಂದು ಡಾ.ಮೋಹನ ಆಳ್ವ ತಿಳಿಸಿದ್ದಾರೆ. 
ಘಟನೆ ಹಿನ್ನೆಲೆ: ಆಳ್ವಾಸ್ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿ ಜು.೨೦ರಂದು ಸಂಜೆ ನಿಗೂಢ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ಆಕೆಯ ಶವವನ್ನು ಪೋಷಕರು ಬರುವುದಕ್ಕೆ ಮುನ್ನವೇ ಶವಾಗಾರಕ್ಕೆ ಸಾಗಿಸಲಾಗಿತ್ತು. ಅಲ್ಲದೆ ಶವದ ಮುಖವನ್ನು ನೋಡಲೂ ಪೋಷಕರಿಗೆ ಅವಕಾಶ ನೀಡಲಿಲ್ಲ ಎಂದು ಆಕೆಯ ತಂದೆ, ಕಟೀಲು ಎಕ್ಕಾರಿನ ದೇವರಗುಡ್ಡೆಯ ನಿವಾಸಿ ಲೋಕೇಶ್ ಆರೋಪಿಸಿದ್ದರು. ಅಲ್ಲದೆ ಈ ಸಾವಿನ ಬಗ್ಗೆ ಶಂಕೆ ಇದೆ. ಆಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ. ಈ ಕುರಿತು ತನಿಖೆ ನಡೆಸುವಂತೆ ಕೋರಿ ಲೋಕೇಶ್ ಅವರು ಮಂಗಳೂರು ಪೊಲೀಸ್ ಕಮಿಷನರ್‌ಗೆ ಕಳೆದ ವಾರ ದೂರು ನೀಡಿದ್ದರು. ಈ ಘಟನೆಯ ಹಿನ್ನೆಲೆಯಲ್ಲಿ ಪ್ರಗತಿಪರ ಸಂಘಟನೆಗಳು ಘಟನೆಯನ್ನು ವಿರೋಧಿಸಿ ಪ್ರತಿಭಟನೆಗೆ ಇಳಿದಿವೆ.
ನಮ್ಮ ಕಾಲೇಜಿನಲ್ಲಿ ಕಾವ್ಯಶ್ರೀ ಮಾತ್ರವಲ್ಲ ಬೇರೆ ಆತ್ಮಹತ್ಯೆಗಳ ಬಗ್ಗೆಯೂ ಮುಕ್ತ ತನಿಖೆಗೆ ಸ್ವಾಗತಿಸುತ್ತೇನೆ. ನಮ್ಮ ಸಂಸ್ಥೆ ಶಿಸ್ತಿಗೆ ಹೆಸರಾಗಿದ್ದು, ವಿದ್ಯಾರ್ಥಿಗಳ ಮೇಲೆ ಅನಗತ್ಯ ಶಿಸ್ತನ್ನು ಹೇರುತ್ತಿಲ್ಲ. ಹಾಗೆಂದು ಶಿಸ್ತಿಗೆ ಬೆನ್ನು ಹಾಕುವುದಿಲ್ಲ. ಕಾವ್ಯಶ್ರೀ ಅವಳದ್ದು ಆತ್ಮಹತ್ಯೆ ಪ್ರಕರಣವಾಗಿದ್ದು, ಈ ಬಗ್ಗೆ ಯಾವುದೇ ತನಿಖೆಗೆ ನಾವು ಸಿದ್ಧವಿದ್ದೇವೆ
- ಡಾ.ಮೋಹನ ಆಳ್ವ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ