ಸುಸ್ತಿಸಾಲ ವಸೂಲಿ ಮಾಡಲು ಬ್ಯಾಂಕುಗಳಿಗೆ ಹೊಸ ಅಸ್ತ್ರ ಕೊಟ್ಟಆರ್‌ಬಿಐ

First Published 14, Feb 2018, 9:29 AM IST
RBIs new norms on Bad loans Wake up call for Defaulters
Highlights

ಸಾವಿರಾರು ಕೋಟಿ ರು. ಸಾಲ ಮರುಪಾವತಿ ಮಾಡದೆ ವಿದೇಶಕ್ಕೆ ಪರಾರಿಯಾಗಿರುವ ವಿಜಯ್‌ ಮಲ್ಯರಂತಹ ಉದ್ಯಮಿಗಳು ಇನ್ನುಮುಂದೆ ತಪ್ಪಿಸಿಕೊಳ್ಳದಂತೆ ನೋಡಿಕೊಂಡು ಬ್ಯಾಂಕುಗಳಿಗೆ ಸುಸ್ತಿಸಾಲದ ಸಮಸ್ಯೆ ತಲೆದೋರದಂತೆ ಮಾಡಲು ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ಹೊಸ ವ್ಯವಸ್ಥೆ ಜಾರಿಗೊಳಿಸಿದೆ.

ಮುಂಬೈ : ಸಾವಿರಾರು ಕೋಟಿ ರು. ಸಾಲ ಮರುಪಾವತಿ ಮಾಡದೆ ವಿದೇಶಕ್ಕೆ ಪರಾರಿಯಾಗಿರುವ ವಿಜಯ್‌ ಮಲ್ಯರಂತಹ ಉದ್ಯಮಿಗಳು ಇನ್ನುಮುಂದೆ ತಪ್ಪಿಸಿಕೊಳ್ಳದಂತೆ ನೋಡಿಕೊಂಡು ಬ್ಯಾಂಕುಗಳಿಗೆ ಸುಸ್ತಿಸಾಲದ ಸಮಸ್ಯೆ ತಲೆದೋರದಂತೆ ಮಾಡಲು ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ಹೊಸ ವ್ಯವಸ್ಥೆ ಜಾರಿಗೊಳಿಸಿದೆ. ದೇಶದ ಬ್ಯಾಂಕುಗಳನ್ನು ಕಾಡುತ್ತಿರುವ ಲಕ್ಷಾಂತರ ಕೋಟಿ ರು. ಸುಸ್ತಿಸಾಲವನ್ನು ವಸೂಲಿ ಮಾಡುವುದು ಹಾಗೂ ಇನ್ನುಮುಂದೆ ಸುಸ್ತಿಸಾಲ ಸೃಷ್ಟಿಯಾಗುತ್ತಿದ್ದಂತೆ ಕೆಲವೇ ದಿನಗಳಲ್ಲಿ ಅದರ ಲೆಕ್ಕ ಆರ್‌ಬಿಐಗೆ ಸಿಗುವಂತೆ ನೋಡಿಕೊಂಡು ತಕ್ಷಣ ಅದರ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದೂ ಈ ಹೊಸ ವ್ಯವಸ್ಥೆಯಲ್ಲಿ ಸೇರಿದೆ.

ಸರ್ಕಾರ ಹಾಗೂ ಬ್ಯಾಂಕುಗಳು ಬಡಜನರು ಮತ್ತು ರೈತರ ಸಾಲ ಮನ್ನಾ ಮಾಡದೆ ಕಾರ್ಪೊರೇಟ್‌ ಉದ್ಯಮಿಗಳ ಸುಸ್ತಿಸಾಲವನ್ನು ಮನ್ನಾ ಮಾಡುತ್ತವೆ ಎಂಬ ಟೀಕೆಗಳು ಕೇಳಿಬರುತ್ತಿದ್ದವು. ಇದಕ್ಕೆ ಪರಿಹಾರ ಎಂಬಂತೆ ಹೊಸ ವ್ಯವಸ್ಥೆಯೊಂದನ್ನು ರೂಪಿಸಿ ಸೋಮವಾರ ರಾತ್ರಿ ಆರ್‌ಬಿಐ ಆದೇಶ ಹೊರಡಿಸಿದೆ. ಇದರ ಪ್ರಕಾರ, ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿ ಅದನ್ನು ಮರಳಿ ಪಾವತಿಸದೆ ಇರುವವರನ್ನು ಆಯಾ ಬ್ಯಾಂಕುಗಳೇ ದಿವಾಳಿ ನ್ಯಾಯಾಲಯಕ್ಕೆ ಎಳೆಯಬೇಕಾಗುತ್ತದೆ. ಬ್ಯಾಂಕುಗಳೇನಾದರೂ ಕಾರ್ಪೊರೇಟ್‌ ಕುಳಗಳ ಜೊತೆ ಸೇರಿಕೊಂಡು ಅವರ ಸುಸ್ತಿಸಾಲವನ್ನು ಮುಚ್ಚಿಟ್ಟರೆ ಅಥವಾ ಸುಸ್ತಿ ಸಾಲದಾರರನ್ನು ದಿವಾಳಿ ಪ್ರಕ್ರಿಯೆಗೆ ಒಳಪಡಿಸದೆ ಇದ್ದರೆ ಅಂತಹ ಬ್ಯಾಂಕುಗಳಿಗೆ ದಂಡ ವಿಧಿಸಲಾಗುತ್ತದೆ ಮತ್ತು ಬ್ಯಾಂಕುಗಳ ವಿರುದ್ಧ ಆರ್‌ಬಿಐ ಕಠಿಣ ಕ್ರಮ ಕೂಡ ಕೈಗೊಳ್ಳಲಿದೆ.

ಅಷ್ಟೇ ಅಲ್ಲ, ಈಗಾಗಲೇ ಇರುವ ಕಾರ್ಪೊರೇಟ್‌ ಸಾಲ ಮರುಹೊಂದಾಣಿಕೆಗೆ ಸಂಬಂಧಿಸಿದ ಅರ್ಧ ಡಜನ್‌ಗೂ ಹೆಚ್ಚಿನ ವಿವಿಧ ಪದ್ಧತಿಗಳನ್ನು ಆರ್‌ಬಿಐ ರದ್ದುಪಡಿಸಿದೆ. ಅಂದರೆ, ಬೃಹತ್‌ ಪ್ರಮಾಣದ ಸಾಲ ಮಾಡಿ, ನಂತರ ಅದನ್ನು ಮರುಪಾವತಿ ಮಾಡದೆ, ಮರು ಹೊಂದಾಣಿಕೆ ಮುಂತಾದ ಮಾರ್ಗಗಳ ಮೂಲಕ ಕಡಿಮೆ ಹಣ ಪಾವತಿಸಿ ತಪ್ಪಿಸಿಕೊಳ್ಳುತ್ತಿದ್ದ ಅಥವಾ ಅಂತಹ ವ್ಯವಸ್ಥೆಗಳ ಮೂಲಕ ವಿಜಯ್‌ ಮಲ್ಯರಂತೆ ಕಾಲಹರಣ ಮಾಡುತ್ತಿದ್ದ ಕಾರ್ಪೊರೇಟ್‌ ಕುಳಗಳಿಗೂ ಕಡಿವಾಣ ಬೀಳಲಿದೆ.

ಏನಿದು ಹೊಸ ವ್ಯವಸ್ಥೆ: ದೇಶದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಒಟ್ಟಾರೆ 7.3 ಲಕ್ಷ ಕೋಟಿ ರು. ಸುಸ್ತಿಸಾಲ (ವಸೂಲಾಗದ ಸಾಲ- ಎನ್‌ಪಿಎ) ಇದೆ. ಖಾಸಗಿ ಬ್ಯಾಂಕುಗಳಲ್ಲಿ ಸುಮಾರು 1 ಲಕ್ಷ ಕೋಟಿ ರು. ಸುಸ್ತಿಸಾಲವಿದೆ.ಬ್ಯಾಂಕುಗಳಲ್ಲಿ ಸುಸ್ತಿಸಾಲ ಜಾಸ್ತಿಯಾಗುತ್ತಿರುವುದರಿಂದ ಬ್ಯಾಂಕುಗಳು ಹಾಗೂ ದೇಶದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಆರ್‌ಬಿಐ ಹೊಸ ನಿಯಮಗಳನ್ನು ರೂಪಿಸಿದೆ. ಈ ನಿಯಮದಡಿ, ಸುಸ್ತಿಸಾಲದಾರರಿಗೆ ದಿವಾಳಿ ಸಂಹಿತೆ (ಐಬಿಸಿ- ಒಂದು ಕಂಪನಿಯು ತಾನು ದಿವಾಳಿಯಾಗಿದ್ದೇನೆ ಎಂದು ಘೋಷಿಸಿಕೊಂಡು ನಿಯಮಬದ್ಧವಾಗಿ ತನ್ನ ಆಸ್ತಿಗಳನ್ನು ಹರಾಜು ಹಾಕಿ ಸಾಲ ತೀರಿಸುವ ಪ್ರಕ್ರಿಯೆ) ಅನ್ವಯವಾಗಲಿದೆ. ಅಂದರೆ, ಬ್ಯಾಂಕುಗಳು ಸುಸ್ತಿದಾರರ ಬಳಿಯಿರುವ ಆಸ್ತಿಗಳನ್ನು ಗುರುತಿಸಿ, ಅವರನ್ನು ದಿವಾಳಿ ಕೋರ್ಟ್‌ಗೆ ಬರುವಂತೆ ಮಾಡಿ ಸಾಲ ವಸೂಲಿ ಮಾಡಿಕೊಳ್ಳಬೇಕು.

ದೇಶದಲ್ಲಿ 2016ರಲ್ಲಿ ಜಾರಿಗೆ ಬಂದಿರುವ ದಿವಾಳಿ ಸಂಹಿತೆಯಡಿ, ನಷ್ಟಕ್ಕೊಳಗಾಗಿರುವ ಅಥವಾ ಇನ್ನುಮುಂದೆ ಕಾರ್ಯಾಚರಣೆ ಮಾಡಲು ಸಾಧ್ಯವಿಲ್ಲದ ಕಂಪನಿಗಳು ದಿವಾಳಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿ, ದಿವಾಳಿ ನ್ಯಾಯಾಲಯಕ್ಕೆ ಹೋಗಿ, ತಮ್ಮ ವ್ಯವಹಾರವನ್ನು ಕಾಯ್ದೆಬದ್ಧವಾಗಿ ಮುಗಿಸಿಕೊಳ್ಳಲು ಅವಕಾಶವಿದೆ. ಆದರೆ, ಸುಸ್ತಿಸಾಲದ ವಿಷಯದಲ್ಲಿ ಅಂತಹ ಕಂಪನಿಗಳ ಪರವಾಗಿ ದಿವಾಳಿ ಪ್ರಕ್ರಿಯೆ ಆರಂಭಿಸಲು ಬ್ಯಾಂಕಿಗೇ (ನಾಲ್ಕೈದು ಬ್ಯಾಂಕುಗಳು ಸಾಲ ನೀಡಿದ್ದರೆ ಎಲ್ಲಾ ಬ್ಯಾಂಕುಗಳಿಗೆ) ಅಧಿಕಾರ ನೀಡಲಾಗಿದೆ.

ದಿವಾಳಿ ಪ್ರಕ್ರಿಯೆಗೆ ಸಂಬಂಧಿಸಿದಂತೆ 2016ರಲ್ಲೇ ಆರ್‌ಬಿಐ ಕೆಲ ಕ್ರಮಗಳನ್ನು ಪ್ರಕಟಿಸಿತ್ತು. ಆನಂತರ ಕಳೆದ ವರ್ಷ ದೊಡ್ಡ ಪ್ರಮಾಣದ ಸುಸ್ತಿದಾರರಾಗಿರುವ ಸುಮಾರು 40 ಮಂದಿಯ ವಿರುದ್ಧ ದಿವಾಳಿ ಪ್ರಕ್ರಿಯೆಗೂ ಚಾಲನೆ ನೀಡಿತ್ತು. ಈಗ ಅದಕ್ಕೆ ಸಂಬಂಧಿಸಿದಂತೆ ಕೆಲ ತಿದ್ದುಪಡಿಗಳನ್ನು ಮಾಡಿದೆ.

ಕ್ರಮ ಕೈಗೊಳ್ಳದಿದ್ದರೆ ಬ್ಯಾಂಕಿಗೆ ದಂಡ: ಆರ್‌ಬಿಐ ಜಾರಿಗೆ ತಂದಿರುವ ಹೊಸ ವ್ಯವಸ್ಥೆಯ ಪ್ರಕಾರ ಎಲ್ಲ ಬ್ಯಾಂಕುಗಳೂ ‘ವಿಶೇಷ ಸೂಚಿತ ಖಾತೆ’ (ಎಸ್‌ಎಂಎ) ಎಂಬ ವಿಭಾಗವೊಂದನ್ನು ಆರಂಭಿಸಬೇಕು. ಅದರಲ್ಲಿ, ಬ್ಯಾಂಕಿಗೆ ಯಾರು ಸುಸ್ತಿಸಾಲದಾರರಾಗುತ್ತಿದ್ದಾರೋ ಅವರ ಲೆಕ್ಕವನ್ನು ಸಾಲದ ಅಸಲು ಅಥವಾ ಬಡ್ಡಿ ಪಾವತಿ ಮಾಡದೇ ಇರುವ 1ನೇ ದಿನದಿಂದ ಆರಂಭಿಸಿ 90ನೇ ದಿನದವರೆಗೆ ಪ್ರತ್ಯೇಕವಾಗಿ ಬರೆಯಬೇಕು. 90 ದಿನದಲ್ಲಿ ಸಾಲದಾರರು ಹಣ ಪಾವತಿಸದೇ ಹೋದರೆ ಅವರ ವಿರುದ್ಧ ಕ್ರಮ ಜರುಗಿಸಿ ಸಾಲ ವಸೂಲಿ ಪ್ರಕ್ರಿಯೆ ಆರಂಭಿಸಬೇಕು. ಈ ಪ್ರಕ್ರಿಯೆ ಫಲ ನೀಡದೆ ಇದ್ದರೆ ನಂತರದ 15 ದಿನದೊಳಗೆ ಸುಸ್ತಿದಾರರ ಪರವಾಗಿ ಬ್ಯಾಂಕುಗಳು ದಿವಾಳಿ ಪ್ರಕ್ರಿಯೆ ಆರಂಭಿಸಬೇಕು. ಈ ನಿಯಮವನ್ನು ಬ್ಯಾಂಕುಗಳು ಪಾಲಿಸದೆ ಇದ್ದರೆ ಅವುಗಳಿಗೆ ಆರ್‌ಬಿಐ ದಂಡ ವಿಧಿಸುತ್ತದೆ ಹಾಗೂ ಕಠಿಣ ಕ್ರಮ ಕೈಗೊಳ್ಳುತ್ತದೆ.

2018ರ ಏಪ್ರಿಲ್‌ 1ರಿಂದ ಎಲ್ಲಾ ಬ್ಯಾಂಕುಗಳೂ ಪ್ರತಿ ಶುಕ್ರವಾರ 5 ಕೋಟಿ ರು.ಗಿಂತ ಹೆಚ್ಚಿನ ಸಾಲ ಮರುಪಾವತಿ ಮಾಡದೆ ಇರುವವರ ಆಯಾ ವಾರದ ಲೆಕ್ಕವನ್ನು ಸೆಂಟ್ರಲ್‌ ರೆಪಾಸಿಟರಿ ಆಫ್‌ ಇನ್‌ಫಾರ್ಮೇಷನ್‌ ಆನ್‌ ಲಾಜ್‌ರ್‍ ಕ್ರೆಡಿಟ್ಸ್‌ (ಸಿಆರ್‌ಐಎಲ್‌ಸಿ) ಸಂಸ್ಥೆಗೆ ನೀಡಬೇಕು. ಈ ತಿಂಗಳ 23ಕ್ಕೆ ಬ್ಯಾಂಕುಗಳು ಅಂತಹ ಮೊದಲ ವರದಿ ಸಲ್ಲಿಕೆ ಮಾಡಬೇಕು ಎಂದು ಆರ್‌ಬಿಐನ ಅಧಿಸೂಚನೆ ತಿಳಿಸಿದೆ.

ಒಂದು ಅಥವಾ ಹಲವು ಬ್ಯಾಂಕುಗಳಿಗೆ ಒಟ್ಟಾರೆ 2000 ಕೋಟಿ ರು.ಗಿಂತ ಹೆಚ್ಚಿನ ಸಾಲ ಮರುಪಾವತಿ ಮಾಡದೆ ಸುಸ್ತಿಸಾಲದಾರರಾಗಿರುವ ಕಂಪನಿ ಅಥವಾ ವ್ಯಕ್ತಿಗಳ ವಿರುದ್ಧ 2018ರ ಮಾಚ್‌ರ್‍ 1ರಿಂದ 180 ದಿನಗಳ ಒಳಗೆ ದಿವಾಳಿ ಪ್ರಕ್ರಿಯೆ ಆರಂಭಿಸಬೇಕು ಎಂದೂ ಆರ್‌ಬಿಐ ಅಪ್ಪಣೆ ಮಾಡಿದೆ.

ಭಾರಿ ಸುಸ್ತಿಸಾಲದ ಕುಳಗಳು : ದೇಶದಲ್ಲಿ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರು. ಸಾಲ ಮರಳಿಸದೆ ಸುಸ್ತಿಸಾಲದಾರರಾಗಿರುವ ಹಲವಾರು ಕಂಪನಿಗಳಿವೆ. ಅಂತಹ ಟಾಪ್‌ 12 ಕಂಪನಿಗಳು ಹಾಗೂ ಅವುಗಳ ಸುಸ್ತಿಸಾಲದ ಮೊತ್ತ ಇಲ್ಲಿದೆ. ಇವುಗಳ ವಿರುದ್ಧ ದಿವಾಳಿ ಪ್ರಕ್ರಿಯೆ ಆರಂಭಿಸುವಂತೆ ಆರ್‌ಬಿಐ ಕಳೆದ ವರ್ಷವೇ ಸೂಚಿಸಿದ್ದು, ಈಗಾಗಲೇ ಬೇರೆ ಬೇರೆ ಬ್ಯಾಂಕುಗಳು ಇವುಗಳನ್ನು ದಿವಾಳಿ ನ್ಯಾಯಾಲಯಕ್ಕೆ ಎಳೆದಿವೆ ಎಂದು ಹೇಳಲಾಗಿದೆ. ಈ 12 ಕಂಪನಿಗಳ ಸುಸ್ತಿಸಾಲದ ಮೊತ್ತವು ದೇಶದ ಎಲ್ಲಾ ಬ್ಯಾಂಕುಗಳಲ್ಲಿರುವ ಒಟ್ಟು ಸುಸ್ತಿಸಾಲದ ಶೇ.25ರಷ್ಟಾಗುತ್ತದೆ.

1. ಭೂಷಣ್‌ ಸ್ಟೀಲ್‌ ಲಿಮಿಟೆಡ್‌ - ಸುಸ್ತಿಸಾಲ 44,478 ಕೋಟಿ ರು.

2. ಲ್ಯಾಂಕೋ ಇನ್‌ಫ್ರಾಟೆಕ್‌ ಲಿಮಿಟೆಡ್‌ - ಸುಸ್ತಿಸಾಲ 44,364 ಕೋಟಿ ರು.

3. ಎಸ್ಸಾರ್‌ ಸ್ಟೀಲ್‌ ಲಿಮಿಟೆಡ್‌ - ಸುಸ್ತಿಸಾಲ 37,284 ಕೋಟಿ ರು.

4. ಭೂಷಣ್‌ ಪವರ್‌ + ಸ್ಟೀಲ್‌ - ಸುಸ್ತಿಸಾಲ 37248 ಕೋಟಿ ರು.

5. ಅಲೋಕ್‌ ಇಂಡಸ್ಟ್ರೀಸ್‌ - ಸುಸ್ತಿಸಾಲ 22,075 ಕೋಟಿ ರು.

6. ಆಮ್ಟೆಕ್‌ ಆಟೋ ಲಿಮಿಟೆಡ್‌ - ಸುಸ್ತಿಸಾಲ 14,074 ಕೋಟಿ ರು.

7. ಮಾನೆಟ್‌ ಇಸ್ಪಾತ್‌ ಅಂಡ್‌ ಎನರ್ಜಿ - ಸುಸ್ತಿಸಾಲ 12,115 ಕೋಟಿ ರು.

8. ಎಲೆಕ್ಟ್ರೋಸ್ಟೀಲ್‌ ಸ್ಟೀಲ್ಸ್‌ ಲಿಮಿಟೆಡ್‌ - ಸುಸ್ತಿಸಾಲ 10,273 ಕೋಟಿ ರು.

9. ಎರಾ ಇನ್‌ಫ್ರಾ ಎಂಜಿನಿಯರಿಂಗ್‌ - ಸುಸ್ತಿಸಾಲ 10,065 ಕೋಟಿ ರು.

10. ಜೇಪಿ ಇನ್‌ಫ್ರಾಟೆಕ್‌ ಲಿಮಿಟೆಡ್‌ - ಸುಸ್ತಿಸಾಲ 9,635 ಕೋಟಿ ರು.

11. ಎಬಿಜಿ ಶಿಪ್‌ಯಾರ್ಡ್‌ ಲಿಮಿಟೆಡ್‌ - ಸುಸ್ತಿಸಾಲ 6,953 ಕೋಟಿ ರು.

12. ಜ್ಯೋತಿ ಸ್ಟ್ರಕ್ಚರ್ಸ್‌ ಲಿಮಿಟೆಡ್‌ - ಸುಸ್ತಿಸಾಲ 5,165 ಕೋಟಿ ರು.

loader