ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ 100 ರು. ಮುಖಬೆಲೆಯ ನೋಟುಗಳಿಗೂ ಹೊಸ ರೂಪ ನೀಡಲು ಹೊರಟಿದೆ. ಹೊಸ ವಿನ್ಯಾಸದ ನೋಟುಗಳನ್ನು ಶೀಘ್ರದಲ್ಲೇ ಆರ್‌ಬಿಐ ಮುದ್ರಿಸಲಿದೆ ಎಂದು ಆಂಗ್ಲದೈನಿಕವೊಂದು ವರದಿ ಮಾಡಿದೆ.

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ 100 ರು. ಮುಖಬೆಲೆಯ ನೋಟುಗಳಿಗೂ ಹೊಸ ರೂಪ ನೀಡಲು ಹೊರಟಿದೆ. ಹೊಸ ವಿನ್ಯಾಸದ ನೋಟುಗಳನ್ನು ಶೀಘ್ರದಲ್ಲೇ ಆರ್‌ಬಿಐ ಮುದ್ರಿಸಲಿದೆ ಎಂದು ಆಂಗ್ಲದೈನಿಕವೊಂದು ವರದಿ ಮಾಡಿದೆ.

ಹೊಸ ನೋಟುಗಳು ಬಂದ ಬಳಿಕವೂ ಸದ್ಯ ಇರುವ 100 ರು. ಮುಖಬೆಲೆಯ ನೋಟುಗಳೂ ಚಲಾವಣೆಯಲ್ಲಿರುತ್ತವೆ. ಯಾವುದೇ ತೊಂದರೆಯಾಗದಂತೆ ಆ ನೋಟುಗಳನ್ನು ಬ್ಯಾಂಕಿಂಗ್ ವ್ಯವಸ್ಥೆಯಿಂದ ಹಿಂಪಡೆಯಲಾಗುತ್ತದೆ ಎಂದು ಆರ್‌ಬಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರ್‌ಬಿಐ ಇತ್ತೀಚೆಗೆ ಬಿಡುಗಡೆ ಮಾಡಿದ ನೋಟುಗಳ ಗಾತ್ರ ಈ ಹಿಂದೆ ಚಲಾವಣೆಯಲ್ಲಿದ್ದ ನೋಟುಗಳಿಗಿಂತ ಚಿಕ್ಕದಿತ್ತು. ಆದರೆ 100 ರು. ಮುಖಬೆಲೆಯ ನೋಟುಗಳ ಗಾತ್ರವನ್ನು ಬದಲಿಸದೇ ಮುದ್ರಣ ವಿನ್ಯಾಸವನ್ನಷ್ಟೇ ಬದಲಾವಣೆ ಮಾಡಲು ಆರ್‌ಬಿಐ ಉದ್ದೇಶಿಸಿದೆ.

ಇದರಿಂದಾಗಿ ಹೊಸ ನೋಟು ಮಾರುಕಟ್ಟೆಗೆ ಬಂದಾಕ್ಷಣ ಎಟಿಎಂಗಳಲ್ಲೂ ಲಭಿಸಲಿದೆ. ಎಟಿಎಂ ಮಾರ್ಪಾಡು ಮಾಡಬೇಕಾದ ಅಗತ್ಯವಿಲ್ಲ.