ವರದಿ: ರೇಣು​ಕಾ​ಪ್ರ​ಸಾದ್‌ ಹಾಡ್ಯ, ಕನ್ನಡಪ್ರಭ

ಬೆಂಗಳೂರು: ಮುಚ್ಚಿದ ಎಟಿಎಂಗಳು, ತೆರೆದರೂ ಹಣ ಪಾವತಿಸಲಾಗದ ಬ್ಯಾಂಕ್‌ ಶಾಖೆಗಳು ನೋಟು ರದ್ದಾದ ನಂತರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ವಿಫಲವಾಗಿರುವುದಕ್ಕೆ ಪ್ರತಿಬಿಂಬದಂತಿವೆ. ಹಳೆಯ ನೋಟು ಚಲಾವಣೆ ರದ್ದು ಮಾಡಿ ಇಪ್ಪತ್ತೆರಡು ದಿನ ಕಳೆದಿವೆ. ಈ ಅವಧಿಯಲ್ಲಿ ಸರ್ಕಾರ ಮತ್ತು ಜನಸಾಮಾನ್ಯರು ಎದುರಿಸಿದ ಸಮಸ್ಯೆ, ಸವಾಲುಗಳೇ ಬೇರೆ. ಡಿಸೆಂಬರ್‌ 1ರಿಂದ ಎದುರಿಸಲಿರುವ ಸಮಸ್ಯೆಗಳೇ ಬೇರೆ. ಆರ್‌ಬಿಐ ಮತ್ತು ಸರ್ಕಾರಕ್ಕೆ ನಿಜವಾದ ಅಗ್ನಿಪರೀಕ್ಷೆ ಆರಂಭವಾಗಿರುವುದೇ ಈಗ.

ಇದುವರೆಗೆ ಸರ್ಕಾರ ಮತ್ತು ಆರ್‌ಬಿಐ ಕೈಗೊಂಡಿರುವ ಮಾರ್ಗೋ­ಪಾಯಗಳೆಲ್ಲವೂ ಸಮಸ್ಯೆಗಳನ್ನು ತಗ್ಗಿಸುವ ಬದಲು ಹಿಗ್ಗಿಸಿವೆ. ಅದಕ್ಕೆ ಮುಖ್ಯ ಕಾರಣ 16 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳ ಪೈಕಿ ಶೇ.84ರಷ್ಟಿದ್ದ 500 ಮತ್ತು 1000 ರೂ. ನೋಟುಗಳ ಚಲಾವಣೆಯನ್ನು ಯಾವುದೇ ಪೂರ್ವಸಿದ್ಧತೆ ಇಲ್ಲದೇ ಏಕಾಏಕಿ ರದ್ದುಮಾಡಿದ್ದು.

ಸುಮಾರು 10 ಕೋಟಿಯಷ್ಟಿರುವ ಸಂಬಳ ಪಡೆಯುವ ಬೃಹತ್‌ ಸಮೂಹವು ಗುರು​ವಾ​ರ​ದಿಂದ ಎಟಿಎಂ ಮತ್ತು ಬ್ಯಾಂಕುಗಳಿಗೆ ಎಡತಾಕಲಿದೆ. ಶೇ.2­ರಷ್ಟಿ­ರುವ ಕಾರ್ಪೋರೆಟ್‌ ವಲಯದ ವೇತನದಾರರು ಬುಧವಾರ ಎಟಿಎಂ ಮತ್ತು ಬ್ಯಾಂಕುಗಳಿಗೆ ತೆರಳಿದಾಗಲೇ ಬ್ಯಾಂಕ್‌ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿ­ದ್ದಾರೆ. ಬಹುತೇಕ ಎಟಿಎಂಗಳು ಮುಚ್ಚಿವೆ. ತೆರೆದಿ­ರುವ ಬ್ಯಾಂಕ್‌ ಶಾಖೆಗಳಲ್ಲಿ ಹಣ ಪಾವತಿಯಾಗುತ್ತಿಲ್ಲ. ಸಾಲುಗಳು ಕರಗುತ್ತಲೇ ಇಲ್ಲ. ನೋಟು ರದ್ದು ಮಾಡಿದ ಮೊದಲ ಮೂರು ದಿನಗಳಲ್ಲಿ ಕಂಡು ಬಂದ ಬೃಹತ್‌ ಸಾಲುಗಳು ಡಿಸೆಂಬರ್‌ 1ರಿಂದ ದೇಶವ್ಯಾಪಿ ಕಾಣಲಿವೆ.

ಬಹುತೇಕ ಬ್ಯಾಂಕುಗಳ ದೂರೆಂದರೆ​​- ಸಾಕಷ್ಟುಪ್ರಮಾಣದಲ್ಲಿ ನೋಟು ಸರಬರಾಜಾಗಿಲ್ಲ. ಸರಬರಾಜಾಗಿರುವ ನೋಟುಗಳು ಬಹುತೇಕ 2000 ರೂ ಮುಖಬೆಲೆಯವು. 100 ಮತ್ತು 500 ರೂ. ನೋಟುಗಳಿಗೆ ಸಲ್ಲಿಸಿರುವ ಬೇಡಿಕೆಗೆ ಅನುಗುಣವಾಗಿ ಸರಬರಾಜಾಗುತ್ತಿಲ್ಲ.

ಆದರೆ, ಸಮಸ್ಯೆ ಮೂಲ ಇರುವುದು ಆರ್‌ಬಿಐನಲ್ಲಿ. ಮುದ್ರಣಾಲಯಗಳಲ್ಲಿ ನಿರೀಕ್ಷಿತ ವೇಗದಲ್ಲಿ ನೋಟು ಮುದ್ರಿತವಾಗುತ್ತಿಲ್ಲ. ಮುದ್ರಣಾಲಯಗಳಿಂದ ಆರ್‌ಬಿಐ ಪ್ರಾದೇಶಿಕ ಕಚೇರಿಗಳಿಗೆ ನಿರೀಕ್ಷಿತ ಪ್ರಮಾಣದ ನಗದು ಸರಬರಾಜಾಗಿಲ್ಲ. 19 ಪ್ರಾದೇಶಿಕ ಕಚೇರಿಗಳು ನಗದಿಗಾಗಿ ಕಾದಿವೆ. ಈ ಪ್ರಾದೇಶಿಕ ಕಚೇರಿಗಳಿಂದ 4000 ಮಿಕ್ಕಿರುವ ಕರೆನ್ಸಿ ಚೆಸ್ಟ್‌ಗಳಿಗೆ ನೋಟು ಸರಬರಾಜಾಗಿ, ನಂತರ ಬ್ಯಾಂಕುಗಳು ಮತ್ತು ಎಟಿಎಂಗಳಿಗೆ ತಲುಪಿಸಬೇಕು.

ಸಂಬಳದ ದಿನ ಬರುತ್ತಿದ್ದಂತೆ ಬ್ಯಾಂಕಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತದೆಂಬುದು ಗೊತ್ತಿದ್ದರೂ ನೋಟುಗಳ ಮುದ್ರಣ​ದಲ್ಲಾಗುತಿ​್ತ​ರುವ ವಿಳಂಬದಿಂದಾಗಿ ಆರ್‌ಬಿಐ ಸಹ ಅಸಹಾಯಕ ಸ್ಥಿತಿಯಲ್ಲಿದೆ. ಆದರೆ, ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳುವಂತಿಲ್ಲ. ನಗದು ಹರಿವು ತಗ್ಗಿಸಲು ವಿವಿಧ ಮಾರ್ಗೋಪಾಯಗಳನ್ನು ನಿತ್ಯವೂ ಹುಡುಕುತ್ತಿದೆ. ಬುಧವಾರ ಜನ್‌-ಧನ್‌ ಖಾತೆಗಳಿಂದ ವಿತ್‌ಡ್ರಾ ಮಾಡುವ ಮಾಸಿಕ ಮಿತಿಯನ್ನು 10,000 ರೂ.ಗೆ ತಗ್ಗಿಸಿ ಆದೇಶ ನೀಡಿದೆ.

ಎಲ್ಲಾ ಎಟಿಎಂಗಳನ್ನು ಹೊಸ ನೋಟುಗಳಿ​ಗನುಸಾರ ಪುನರ್‌ಹೊಂದಾಣಿಕೆ ತ್ವರಿತವಾಗಿ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದರೂ ತಾಂತ್ರಿಕ ಕಾರಣಗಳಿಗಾಗಿ ಈ ಕೆಲಸವೂ ನಿಧಾನಗತಿಯಲ್ಲಿ ಸಾಗಿದೆ. ಸರ್ಕಾರ ನಿತ್ಯವೂ 10000-12000 ಎಟಿಎಂಗಳನ್ನು ಮರುಹೊಂದಾಣಿಕೆ ಮಾಡುವ ಗುರಿ ಹೊಂದಿದ್ದರೂ ತಾಂತ್ರಿಕ ತೊಂದರೆಗಳಿಂದಾಗಿ ಅದೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಹುತೇಕ ಎಟಿಎಂಗಳು ಮುಚ್ಚಿವೆ. ಬ್ಯಾಂಕುಗಳಿಗೆ ಹೊಂದಿಕೊಂಡಿರುವ ಮತ್ತು ಬ್ಯಾಂಕುಗಳ ಸುತ್ತಮುತ್ತಲಿನ ಎಟಿಎಂಗಳಿಗೆ ಮಾತ್ರ ನೋಟು ತುಂಬಿಸುವ ಕೆಲಸ ನಡೆಯುತ್ತಿದೆ. ಬ್ಯಾಂಕುಗಳಿಂದ ದೂರ ಇರುವ ಎಟಿಎಂಗಳ ಅರೆತೆರೆದ ಬಾಗಿಲುಗಳು ನೋಟುಗಳಿಲ್ಲ ಎಂಬುದನ್ನು ಸಾರಿ ಹೇಳುತ್ತಿವೆ.

ಜನರ ನಿಜವಾದ ಸಮಸ್ಯೆ: ಬ್ಯಾಂಕುಗಳಿಗೆ ಬರುವ ಜನರನ್ನು ನಿಭಾಯಿಸುವುದು ಬ್ಯಾಂಕ್‌ ಸಿಬ್ಬಂದಿಗೆ ಹೊಸ ತಲೆನೋವಾಗಬಹುದು. ಆದರೆ, 1ನೇ ತಾರೀಕಿನಿಂದ ಮನೆ ಬಾಡಿಗೆ, ಹಾಲು, ಪೇಪರ್‌, ತರಕಾರಿ, ವಿದ್ಯುತ್‌, ನೀರಿನ ಬಿಲ್ಲು, ಕೇಬಲ್‌ ಬಿಲ್ಲು ಸೇರಿ ಕನಿಷ್ಠ ಹತ್ತು ವಿಧದ ಪಾವತಿ ಮಾಡಬೇಕಾದ ಸಂಬಳದಾರನ ಪರಿಸ್ಥಿತಿ ಏನು?

ಬಹುತೇಕ ಬಾಡಿಗೆದಾರರು ನಗದು ಮೂಲಕ ಹಣ ಪಾವತಿಸುತ್ತಿದ್ದಾರೆ. ಚೆಕ್‌ ಮೂಲಕ ಹಣಪಾವತಿಗೆ ಒಪ್ಪುವ ಮಾಲೀಕರು ಅತ್ಯಲ್ಪ. ಬಹುತೇಕ ಮಾಲೀಕರು ನಗದನ್ನೇ ಬಯಸುತ್ತಾರೆ. ಚೆಕ್‌ ಮೂಲಕ ಸ್ವೀಕರಿಸುವಂತೆ ಒತ್ತಾಯ ಮಾಡಿದರೆ ಮನೆ ಖಾಲಿ ಮಾಡುವಂತೆ ತಾಕೀತು ಮಾಡುತ್ತಾರೆ.

ಹೀಗಾಗಿ ಅದೆಷ್ಟೇ ಕಷ್ಟವಾದರೂ, ಅದೆಷ್ಟೇ ಹೊತ್ತು ಸಾಲಿನಲ್ಲಿ ನಿಂತರೂ ನಗದು ರೂಪದಲ್ಲೇ ಬಾಡಿಗೆ ಪಾವತಿಸಬೇಕು. ವಿದ್ಯುತ್‌ ಮತ್ತು ನೀರಿನ ಬಿಲ್ಲನ್ನು ಡಿಜಿಟಲ್‌ ಮೂಲಕ ಪಾವತಿ ಮಾಡಬಹುದು. ಆದರೆ ಹಾಲು, ತರಕಾರಿ, ಮನೆ ಕೆಲಸದವರ ಸಂಬಳ ಮತ್ತಿತರ ಪಾವತಿಗಳನ್ನು ನಗದಿಲ್ಲದೇ ಮಾಡುವುದು ಹೇಗೆ ಎಂಬುದು ಸಂಬಳದಾರರ ಚಿಂತೆ.

ನಗದಿಲ್ಲದೇ ದಿನ ಕಳೆಯುವುದು ಎಷ್ಟುಕಷ್ಟಎಂಬುದು ನಿಧಾನವಾಗಿ ಎಲ್ಲರಿಗೂ ಅರಿವಾಗ ತೊಡಗುತ್ತಿದ್ದಂತೆ ನೋಟು ಅಮಾನ್ಯದ ಬಗ್ಗೆ ಇದ್ದ ಸದಭಿಪ್ರಾಯ ನಿಧಾನವಾಗಿ ಬದಲಾಗುತ್ತಿದೆ.

ಈ 22 ದಿನಗಳಲ್ಲಿ ಸಮಾಜದ ಕೆಳಸ್ತರದ ಜನರು ನಗದಿಲ್ಲದೇ ಸಂಕಷ್ಟ ಅನುಭವಿಸಿದ್ದರು. ಆಗ ನೋಟು ರದ್ದು ಕ್ರಮವನ್ನು ಬೆಂಬಲಿಸಿದ್ದ ವೇತನದಾರರ ವರ್ಗಕ್ಕೆ ಈಗ ಸಮಸ್ಯೆಯ ಆಳ ಮತ್ತು ಅಗಲ ಅರ್ಥವಾಗುತ್ತಿದೆ. ನೋಟು ರದ್ದು ಮಾಡಿದ್ದರಿಂದಾಗುತ್ತಿರುವ ಸಂಕಷ್ಟವನ್ನು ಒಂದೆರಡು ದಿನ ನಿಭಾಯಿಸಬಹುದು. ಆದರೆ, ತಿಂಗಳುಗಟ್ಟಲೇ ಅನುಭವಿಸುವುದು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡುತ್ತಿದೆ. ಈ ಪ್ರಶ್ನೆ ಕೋಟ್ಯಂತರ ಜನರದ್ದು.

ಸಂಕಷ್ಟ ಪರಿಹಾರಕ್ಕಾಗಿ ಷಟ್ ಸೂತ್ರ:
ಸುಮಾರು 10 ಕೋಟಿಷ್ಟಿರುವ ವೇತನದಾರರಿಗೆ ನಗದು ಪಾವತಿಯಲ್ಲಿ ವ್ಯತ್ಯಯವಾಗುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ತಾತ್ಕಾಲಿಕ ಕ್ರಮ ಕೈಗೊಂಡಿದ್ದು, ಹಣ ಪೂರೈ​ಸಲು ಹೇಳಿ​ದೆ .

1) ನಗದು ಹರಿವು ತ್ವರಿತಗೊಳಿಸಿದ ಆರ್‌ಬಿಐ 
2) ಡಿಸೆಂಬರ್‌ 7ವರೆಗೆ ನಗದು ಸರಬರಾಜು ಹೆಚ್ಚಳ 
3) ವೇತನದಾರರಿಗೆ ನಿತ್ಯದ ಮಿತಿಗಿಂತ 25% ಹೆಚ್ಚು ಪಾವತಿ
4) ವೇತನ, ಪಿಂಚಣಿ ಪಾವತಿಗೆ ಹೆಚ್ಚಿನ ಸಿಬ್ಬಂದಿ ನಿಯೋಜನೆ
5) ಖಾತೆ ಇಲ್ಲದವರಿಗೆ ಹೊಸ ಖಾತೆ ತೆರೆಯಲು ಕ್ಯಾಂಪ್‌ 
6) 2000ದ ಬದಲು 500 ರೂ. ನೋಟು ಮುದ್ರಣಕ್ಕೆ ಆದ್ಯತೆ 

(epaper.kannadaprabha.in)