Asianet Suvarna News Asianet Suvarna News

ಬಿಜೆಪಿ ಮುಖಂಡ ರವಿ ಮಾಗಳಿಯದ್ದು ಅಪಘಾತವಲ್ಲ, ನಿಯೋಜಿತ ಕೊಲೆ: ಪ್ರತಾಪ್ ಸಿಂಹ ಆರೋಪ

ಮಾಗಳಿ ರವಿ ಅವರ ವಾಹನ ಅಪಘಾತವಾಗಿದ್ದರೆ ವಾಹನದ ಮುಂಭಾಗವಾಗಲೀ ಅಥವಾ ಹಿಂಭಾಗವಾಗಲೀ ಜಖಂ ಆಗಬೇಕಿತ್ತು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ravi magali death is not accident but murder says pratap simha
  • Facebook
  • Twitter
  • Whatsapp

ಪಿರಿಯಾಪಟ್ಟಣ: ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮಾಗಳಿ ರವಿ ಅವರ ಸಾವು ನಿಯೋಜಿತ ಕೊಲೆ ಎಂಬುದು ಸ್ಪಷ್ಟವಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದರು. ಪಟ್ಟಣದ ಪಕ್ಷದ ಕಚೇರಿ ಮುಂಭಾಗ ರವಿ ಅವರ ಮೃತ ದೇಹವನ್ನು ಅಂತಿಮ ದರ್ಶನಕ್ಕಾಗಿ ಇಡಲಾಗಿದ್ದ ವೇಳೆ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರವಿ ಅವರ ಸಾವಿನ ಬಗ್ಗೆ ಪೊಲೀಸರು ಇದೊಂದು ಅಪಘಾತ ಎಂದು ಮಾಧ್ಯಮಗಳ ಮುಂದೆ ಬಿಂಬಿಸುವ ಮೂಲಕ ಸಾರ್ವಜನಿಕರನ್ನು ಈ ಪ್ರಕರಣದಲ್ಲಿ ದಿಕ್ಕುತಪ್ಪಿಸುವ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.

ಪಕ್ಷ ಟಿಪ್ಪು ಜಯಂತಿ ವಿರೋಸುತ್ತಿರುವ ಈ ಸಂದರ್ಭದಲ್ಲಿ ರವಿ ಅವರ ಸಾವಾಗಿರುವುದು ಇದೊಂದು ಕೊಲೆ ಎಂಬುದು ಸ್ಪಷ್ಟವಾಗುತ್ತಿದೆ. ರವಿ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿರುವುದರಿಂದಲೇ ಅವರ ಸಾವಾಗಿದೆ ಎಂಬುದು ವೈದ್ಯರಿಂದ ತಿಳಿದುಬಂದಿದೆ. ಅವರ ವಾಹನ ಅಪಘಾತವಾಗಿದ್ದರೆ ವಾಹನದ ಮುಂಭಾಗವಾಗಲೀ ಅಥವಾ ಹಿಂಭಾಗವಾಗಲೀ ಜಖಂ ಆಗಬೇಕಿತ್ತು ಎಂದು ಅವರು ತಿಳಿಸಿದರು.

ಈ ಹಿಂದೆ ರಾಜು ಹಾಗೂ ರುದ್ರೇಶ್ ಹತ್ಯೆ ಸಂದರ್ಭದಲ್ಲಿಯೂ ಪೊಲೀಸರು ದಾರಿತಪ್ಪಿಸಿದ್ದು, ನಂತರ ಸತ್ಯಾಂಶ ಹೊರಬಂದಿದೆ. ಪೊಲೀಸರು ರವಿ ಅವರ ಪ್ರಕರಣವನ್ನು ಸೂಕ್ತ ರೀತಿ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡುವುದರ ಜೊತೆಗೆ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.

ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ ಮಾತನಾಡಿ, ರವಿ ಉತ್ತಮ ನಡವಳಿಕೆಯುಳ್ಳ ಸ್ನೇಹ ಜೀವಿ. ಆತನ ಸಾವು ಪೂರ್ವ ನಿಯೋಜಿತ ಕೊಲೆ. ಪೊಲೀಸರು ಸೂಕ್ತ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಅಂತ್ಯ ಸಂಸ್ಕಾರ: ರವಿ ಅವರ ಮೃತ ದೇಹವನ್ನು ಪಟ್ಟಣದ ಪಕ್ಷದ ಕಚೇರಿ ಮುಂಭಾಗ ಕೆಲಕಾಲ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ನಂತರ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಸ್ವಗ್ರಾಮ ಮಾಗಳಿಗೆ ಕೊಂಡೊಯ್ದು ಅವರ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದರು.

ಅಂತ್ಯ ಸಂಸ್ಕಾರದಲ್ಲಿ ಸಂಸದ ಪ್ರತಾಪ್‌ಸಿಂಹ, ಮಾಜಿ ಸಚಿವ ಸಿ.ಎಚ್. ವಿಜಯಶಂಕರ್, ಬಿಜೆಪಿ ಮುಖಂಡ ಹಾಗೂ ತಂಬಾಕು ಮಂಡಳಿ ನಿರ್ದೇಶಕ ಪಿ.ವಿ. ಬಸವರಾಜಪ್ಪ, ಪಕ್ಷದ ತಾಲೂಕು ಅಧ್ಯಕ್ಷ ಪಿ.ಜೆ. ರವಿ, ಮಾಜಿ ಅಧ್ಯಕ್ಷ ಆರ್.ಟಿ. ಸತೀಶ್, ಮುಖಂಡರಾದ ಪ್ರಸನ್ನಕೇಶವ, ವಿಕ್ರಂರಾಜ್, ಕೃಷ್ಣೇಗೌಡ, ರಾಮಕೃಷ್ಣ, ಕೃಷ್ಣಪ್ರಸಾದ್, ಶಿವರಾಂ, ಪವನ್‌ಕುಮಾರ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

(ಕನ್ನಡಪ್ರಭ ವಾರ್ತೆ)

Follow Us:
Download App:
  • android
  • ios