ಸಾಮಾನು ಖರೀದಿಗೆ ಹೋದವರಿಗೆ ಶಾಕ್ ಕಾದಿತ್ತು. ಯಾಕಂದ್ರೆ, ಹಬ್ಬದ ನಿಮಿತ್ತ ಹೂವಿನ ಬೆಲೆ ದುಪ್ಪಟ್ಟು ಏರಿಕೆಯಾಗಿದೆ. ಈ ಕುರಿತ ಒಂದು ರಿಪೋರ್ಟ್​ ಇಲ್ಲಿದೆ ನೋಡಿ.

ಬೆಂಗಳೂರು(ಸೆ.29): ನಾಡಿನೆಲ್ಲೆಡೆ ದಸರಾ ಸಂಭ್ರಮ. ಅದರಲ್ಲೂ ಇಂದು ಆಯುಧ ಪೂಜೆ ಸಡಗರ.. ವಾಹನ ಪೂಜೆ ಜೋರು.. ಇನ್ನೂ ಹಬ್ಬ ಅಂದ್ಮೇಲೆ ಕೇಳ್ಬೇಕಾ. ಮಾರ್ಕೆಟ್​ನಲ್ಲಿ ರೇಟ್ ಗಗನಕ್ಕೇರಿರುತ್ತೆ. ಈ ಬಾರಿ ವಾಹನಗಳನ್ನ ಅಲಂಕಾರ ಮಾಡಬೇಕಂದ್ರೆ ಸ್ವಲ್ಪ ಯೋಚನೆ ಮಾಡಲೇಬೇಕು. ಯಾಕಂದ್ರೆ ಈ ಬಾರಿ ಹೂ, ಹಣ್ಣುಗಳ ಬೆಲೆ ಇತರೆ ಹಬ್ಬಗಳಿಗಿಂತ ದುಪ್ಪಟ್ಟು ಹೆಚ್ಚಾಗಿದೆ.

ಗಗನಕ್ಕೇರಿದೆ ಹೂವಿನ ದರ

ಒಂದು ವಾರದ ಹಿಂದೆ ಕೆಜಿಗೆ 300 ರೂಪಾಯಿ ಇದ್ದ ಮಲ್ಲಿಗೆ ಹೂ 900 ರೂಪಾಯಿಯಾಗಿದೆ. ಇನ್ನು, 200 ರೂಪಾಯಿ ಇದ್ದ ಕಾಕಡ 500 ರೂಪಾಯಿಗೆ ತಲುಪಿದೆ. ಕನಕಾಂಬರ ಹೂ ಒಂದು ವಾರಗಳ ಹಿಂದೆ 500 ರೂಪಾಯಿ ಇತ್ತು.. ಇದೀಗ ಸಾವಿರ ರೂಪಾಯಿಗೆ ಮುಟ್ಟಿದೆ. ಕೆಜಿಗೆ 120 ರೂಪಾಯಿ ಇದ್ದ ಸೇವಂತಿಗೆ ಹೂ 200 ರೂಪಾಯಿಗೆ ತಲುಪಿದ್ದು, ಗುಲಾಬಿ ಹೂ 80 ರೂಪಾಯಿಯಿಂದ 200 ರೂಪಾಯಿಗೆ ತಲುಪಿದೆ. ಇನ್ನು, ಸುಗಂಧ ರಾಜ ಹೂ 100 ರೂಪಾಯಿಯಿಂದ 300 ರೂಪಾಯಿಗೆ ತಲುಪಿದೆ. ಚೆಂಡು ಹೂ 10 ರೂಪಾಯಿಯಿಂದ 100ಕ್ಕೆ ತಲುಪಿದ್ದು, 300 ರೂಪಾಯಿ ಇದ್ದ ಮಲ್ಲೆ ಹೂ ಕೆಜಿಗೆ 600ಕ್ಕೆ ತಲುಪಿದೆ.

ಇನ್ನೂ ದ್ರಾಕ್ಷಿ, ದಾಳಿಂಬೆ, ಸೇಬು ಸೇರಿದಂತೆ ಹಣ್ಣಿನ ಬೆಲೆಗಳಲ್ಲಿ ಕೂಡ ಹೆಚ್ಚಳವಾಗಿದೆ. ತರಕಾರಿ ಬೆಲೆ ಕೂಡ ಕೊಂಚ ಏರಿಕೆ ಕಂಡಿದೆ.

ಹಬ್ಬಕ್ಕೆ ಬೆಲೆ ಏರಿಕೆ ಸಾಮಾನ್ಯ. ಆದರೆ ಈ ಬಾರಿ ಇಷ್ಟೊಂದು ಪ್ರಮಾಣದಲ್ಲಿ ಬೆಲೆ ಏರಿಕೆಯಾಗಿದ್ದು, ಜನರು ಖರೀದಿ ವೇಳೆ ಎರಡೆರೆಡು ಬಾರಿ ಯೋಚಿಸುವಂತಾಗಿದೆ.