ನಾಟ್ಯಗೃಹದಲ್ಲಿ ನಾಟಕ ವೀಕ್ಷಿಸುತ್ತಿದ್ದ ಮಹಿಳೆಯೊಬ್ಬರ ಸೀರೆಯೊಳಗೆ ಇಲಿಯೊಂದು ಪ್ರವೇಶಿಸಿದ ಘಟನೆ ನಡೆದಿದೆ. ಇದರಿಂದ ನಾಟಕ ಪ್ರದರ್ಶನದಲ್ಲಿ ಅಡಚಣೆ ಉಂಟಾಗಿ ಪ್ರೇಕ್ಷಕರಲ್ಲಿ ಗಲಾಟೆ, ಗೊಂದಲ ಉಂಟಾಯಿತು. 

ಮುಂಬೈ: ಮನೆಯಲ್ಲಿ ಇಲಿ ಇದ್ರೆ ಮೊದಲು ಅದನ್ನು ಹೊರಗೆ ಹಾಕಬೇಕು. ಇಲ್ಲಾಂದ್ರೆ ಮನೆಯಲ್ಲಿರುವ ಎಲ್ಲಾ ವಸ್ತುಗಳನ್ನು ನಾಶ ಮಾಡುತ್ತದೆ. ಮನೆಯಲ್ಲಿ ಇಲಿ/ಜಿರಳೆ/ಹಲ್ಲಿ ನೋಡಿದ್ರೆ ಮಹಿಳೆಯರು ಜೋರಾಗಿ ಕಿರುಚುತ್ತಾರೆ. ಇನ್ನು ಮೈಮೇಲೆ ಬಿದ್ದರಂತೂ ಭಯಗೊಂಡು ಮಹಿಳೆಯರು ಮನೆ ತುಂಬೆಲ್ಲಾ ಓಡಾಡುತ್ತಾರೆ. ಇನ್ನು ಈ ಮಾತುಗಳಿಗೆ ಅಪವಾದ ಎಂಬಂತೆ ಕೆಲವರು ಇಲಿ, ಹಲ್ಲಿ, ಜಿರಳೆಗಳಿಗೆ ಹೆದರಲ್ಲ. ಮಹಾರಾಷ್ಟ್ರದ ಪುಣೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ನಾಟಕ ವೀಕ್ಷಿಸುತ್ತಿದ್ದ ಮಹಿಳೆ ಸೀರೆಯೊಳಗೆ ಪ್ರವೇಶಿಸಿದ್ದರಿಂದ ದೊಡ್ಡಮಟ್ಟದ ಗಲಾಟೆ ನಡೆದಿದೆ. ಇದರಿಂದ ನಾಟಕ ಪ್ರದರ್ಶನದಲ್ಲಿ ಕೆಲ ಸಮಯ ಅಡಚಣೆ ಸಹ ಉಂಟಾಗಿತ್ತು. ಕೊನೆಗೆ ಈ ಘಟನೆಗೆ ನಾಟಕ ಕಂಪನಿಯ ಮಾಲೀಕರು ಪ್ರೇಕ್ಷಕರ ಬಳಿ ಕ್ಷಮೆಯಾಚಿಸಿದ್ದಾರೆ.

ಏನಿದು ಘಟನೆ?

ಪುಣೆಯ ಪ್ರತಿನಿಧಿ ನಗರದ ಯಶವಂತರಾವ್ ಚವಾಣ್ ನಾಟ್ಯಗೃಹದಲ್ಲಿ ಭಾನುವಾರ ಸಂಜೆ 'ಗಂಧರ್ವ' ಹೆಸರಿನ ನಾಟಕದ ಪ್ರದರ್ಶನವಾಗುತ್ತಿತ್ತು. ಈ ನಾಟಕ ವೀಕ್ಷಣೆಗೆ ಸುಮಾರು 800ಕ್ಕೂ ಅಧಿಕ ಜನರು ಆಗಮಿಸಿದ್ದರು. ಈ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಜೋರಾಗಿ ಕಿರುಚಲು ಆರಂಭಿಸಿದ್ದಾರೆ.

ಮಹಿಳೆಯ ಕಿರುಚಾಟದಿಂದ ಜನರ ಗಮನವೆಲ್ಲಾ ಮಹಿಳೆಯತ್ತ ಹೋಗಿತ್ತು. ಇದರಿಂದ ಪ್ರೇಕ್ಷಕರ ಗ್ಯಾಲರಿಯಲ್ಲಿ ಗಲಾಟೆ ಉಂಟಾಗಿತ್ತು. ನಾಟಕ ವೀಕ್ಷಣೆ ಮಾಡುತ್ತಿರುವ ಸಂದರ್ಭದಲ್ಲಿ ಇಲಿಯೊಂದು ಮಹಿಳೆ ಸೀರೆಯೊಳಗೆ ಹೋಗಿದ್ದರಿಂದ ಕ್ಷಣಮಾತ್ರದಲ್ಲಿ ಪ್ರೇಕ್ಷಾಗೃಹದಲ್ಲಿ ಗಲಾಟೆ ಉಂಟಾಯಿತು.

ಈ ಘಟನೆ ನಡೆದಾಗ ಸಭಾಂಗಣದಲ್ಲಿ ಸುಮಾರು 800 ಕ್ಕೂ ಹೆಚ್ಚು ಪ್ರೇಕ್ಷಕರು ಇದ್ದರು. ಮಹಿಳೆಯ ಕಿರುಚಾಟದಿಂದಾಗಿಕೆಲವು ಕ್ಷಣಗಳ ಕಾಲ ಪ್ರದರ್ಶನವನ್ನು ನಿಲ್ಲಿಸಬೇಕಾಯಿತು. ನಂತರ ಮಹಿಳೆಯನ್ನು ಹೊರಗೆ ಕರೆದುಕೊಂಡು ಹೋಗಲಾಯ್ತು. ಆನಂತರ ಪರಿಸ್ಥಿತಿ ತಿಳಿಯಾಯ್ತು. ನಾಟಕ ಪ್ರದರ್ಶನಕ್ಕೆ ತಡೆಯುಂಟಾಗಿದ್ದರಿಂದ ವೀಕ್ಷಕರು ಸಭಾಂಗಣದ ಮಾಲೀಕರ ವಿರುದ್ಧ ಅಸಮಾಧಾನ ಹೊರ ಹಾಕಿದರು.

ನಾವು ನಿಯಮಿತವಾಗಿ ಸ್ವಚ್ಛತೆ ಮಾಡುತ್ತೇವೆ, ಆದರೆ ಇಂತಹ ಘಟನೆಗಳು ದುರದೃಷ್ಟಕರ. ನಾವು ಸಂಪೂರ್ಣ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ನಾಟ್ಯಗೃಹದ ಆಡಳಿತ ಮಂಡಳಿ ಹೇಳಿದೆ. ಪುಣೆಯನ್ನು ಸಾಂಸ್ಕೃತಿಕ ನಗರ ಎಂದು ಕರೆಯಲಾಗುತ್ತದೆ ಮತ್ತು ಯಶವಂತರಾವ್ ಚವಾಣ್ ನಾಟ್ಯಗೃಹವು ಅನೇಕ ದೊಡ್ಡ ನಾಟಕ ಪ್ರದರ್ಶನಗಳ ವೇದಿಕೆಯಾಗಿದೆ. ಅಂತಹ ಸ್ಥಳದಲ್ಲಿ ಇಲಿ ಪ್ರವೇಶದಂತಹ ಘಟನೆಗಳು ಕೇವಲ ಅನಾನುಕೂಲವಲ್ಲ, ಬದಲಾಗಿ ಪ್ರೇಕ್ಷಕರ ಸುರಕ್ಷತೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.

ಮೂಲಭೂತ ಸೌಕರ್ಯಗಳು

ಕಲಾ ಪ್ರಪಂಚವನ್ನು ಕಲಾವಿದರು ಮಾತ್ರವಲ್ಲ, ಆಡಳಿತ ಮಂಡಳಿಯೂ ಸಹ ನಿರ್ವಹಿಸಬೇಕು. ದೈನಂದಿನ ಪ್ರದರ್ಶನಗಳು, ಬರುವ ಪ್ರೇಕ್ಷಕರು ಮತ್ತು ಅವರ ನಿರೀಕ್ಷೆಗಳು - ಇವೆಲ್ಲದರ ಜವಾಬ್ದಾರಿಯನ್ನು ತೆಗೆದುಕೊಳ್ಳುವಾಗ ಕೇವಲ ವೇದಿಕೆಯ ಬೆಳಕು ಮತ್ತು ಧ್ವನಿ ವ್ಯವಸ್ಥೆ ಸಾಕಾಗುವುದಿಲ್ಲ, ಮೂಲಭೂತ ವಿಷಯಗಳಿಗೆ ಆದ್ಯತೆ ನೀಡಬೇಕು. ಅದರಲ್ಲಿ ಸ್ವಚ್ಛತೆ, ಕೀಟ ನಿಯಂತ್ರಣ, ತುರ್ತು ವ್ಯವಸ್ಥೆಗಳು ಸೇರಿವೆ.