ನವದೆಹಲಿ(ಅ.10): 740 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಅತೀ ದೊಡ್ಡ ಔಷಧಿ ಮಾರಾಟ ಮತ್ತು ತಯಾರಿಕಾ ಕಂಪನಿ ರಾನ್‌ಬಾಕ್ಸಿ ಮಾಜಿ ಪ್ರವರ್ತಕ ಶಿವಿಂದರ್ ಸಿಂಗ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಳೆದ ಮಾರ್ಚ್’ನಲ್ಲಿ ಶಿವಿಂದರ್ ಸಿಂಗ್ ಹಾಗೂ ಅವರ ಸಹೋದರ ಮಾಲ್ವಿಂದರ್ ಸಿಂಗ್ ವಿರುದ್ಧ ಕೇಸ್ ದಾಖಲಿಸಿದ್ದರು.

ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಕಳೆದ ಆಗಸ್ಟ್ ತಿಂಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಿಂಗ್ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.

ಫೋರ್ಟಿಸ್ ಹೆಲ್ತ್ ಕೇರ್ ಪ್ರವರ್ತಕರು ಆಗಿರುವ ಶಿವಿಂದರ್ ಸಿಂಗ್ ಹಾಗೂ ಮಾಲ್ವಿಂದರ್ ಸಿಂಗ್, ಕಳೆದ ಫೆಬ್ರವರಿಯಲ್ಲಿ ರಾನ್‌ಬಾಕ್ಸಿ ನಿರ್ದೇಶಕರ ಮಂಡಳಿಗೆ ರಾಜೀನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.