ವಿದ್ಯಾರ್ಥಿ ವಿಶ್ವಾಸ್ ಈಜು ಬಾರದೆ ಮುಳುಗುತ್ತಿದ್ದ. ಈ ಸಂದರ್ಭದಲ್ಲಿ ಆತನನ್ನು ರಕ್ಷಿಸುವ ಬದಲು ಉಳಿದ ಸ್ನೇಹಿತರು ಸೆಲ್ಫಿ ತೆಗೆದುಕೊಳ್ಳುವಲ್ಲಿ ನಿರತರಾಗಿದ್ದರು
ಕನಕಪುರ(ಸೆ.25): ಸೆಲ್ಫಿ ತೆಗೆದುಕೊಳ್ಳುವ ಸಂಭ್ರಮದಲ್ಲಿ ನೀರಿನಲ್ಲಿ ಮುಳುಗುತ್ತಿರುವ ಸ್ನೇಹಿತನನ್ನು ಮರೆತ ಕಾರಣ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ರಾಮಗೊಂಡ್ಲು ಬಳಿ ನಡೆದಿದೆ.
ಜಯನಗರ ನ್ಯಾಷನಲ್ ಕಾಲೇಜಿನಿಂದ 21 ವಿದ್ಯಾರ್ಥಿಗಳ ತಂಡ ರಾಮಗೊಂಡ್ಲು ಬಳಿ ಟ್ರಕ್ಕಿಂಗ್'ಗೆ ತೆರಳಿದ್ದಾರೆ. ಅಲ್ಲೇ ಸ್ಥಳೀಯ ಈಜುಕೊಳದಲ್ಲಿ ಎಲ್ಲ ಸ್ನೇಹಿತರು ಮೋಜು ಮಾಡುತ್ತಿದ್ದರು. ಈ ಸಮಯದಲ್ಲಿ ವಿದ್ಯಾರ್ಥಿ ವಿಶ್ವಾಸ್ ಈಜು ಬಾರದೆ ಮುಳುಗುತ್ತಿದ್ದ. ಈ ಸಂದರ್ಭದಲ್ಲಿ ಆತನನ್ನು ರಕ್ಷಿಸುವ ಬದಲು ಉಳಿದ ಸ್ನೇಹಿತರು ಸೆಲ್ಫಿ ತೆಗೆದುಕೊಳ್ಳುವಲ್ಲಿ ನಿರತರಾಗಿದ್ದರು. ಕೊನೆಗೂ ಈತನನ್ನು ಉಳಿಸಲು ಯಾರು ಮುಂದಾಗದ ಕಾರಣ ವಿಶ್ವಾಸ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಈ ದೃಶ್ಯ ಫೋಟೊದಲ್ಲಿ ಸೆರೆಯಾಗಿದೆ. ಪುತ್ರನನ್ನು ಕಳೆದುಕೊಂಡಿರುವ ವಿಶ್ವಾಸ್'ನ ಪೋಷಕರು ತಮ್ಮ ಮಗನ ಸಾವಿಗೆ ಕಾಲೇಜ್ ಆಡಳಿತ ಮಂಡಳಿ ಕಾರಣವೆಂದು ಆರೋಪಿಸಿ ಕಾಲೇಜು ಮುಂಭಾಗ ಶವವಿಟ್ಟು ಸಂಬಂಧಿಕರ ಪ್ರತಿಭಟನೆ ನಡೆಸುತ್ತಿದ್ದಾರೆ. ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
