Asianet Suvarna News Asianet Suvarna News

ರಾಮಲಿಂಗಾರೆಡ್ಡಿ ಪುತ್ರಿ ಟಿಕೆಟ್‌ಗೆ ಕಂಟಕ

ರಾಜಧಾನಿಯ ಜಯ​ನ​ಗರ ಕ್ಷೇತ್ರ​ದಿಂದ ತಮ್ಮ ಪುತ್ರಿ ಸೌಮ್ಯಾ ರೆಡ್ಡಿ ಅವ​ರನ್ನು ಕಣಕ್ಕೆ ಇಳಿ​ಸಲು ಸರ್ವ ಪ್ರಯತ್ನ ನಡೆ​ಸು​ತ್ತಿ​ರುವ ಗೃಹ ಸಚಿವ ರಾಮ​ಲಿಂಗಾ​ರೆಡ್ಡಿ ಅವ​ರಿಗೆ ಈಗ ಅತ್ಯಂತ ಪ್ರಬಲ ಪೈಪೋಟಿ ಎದು​ರಾ​ಗಿ​ದೆ.

Ramlinga Reddy Doughter May Contest Election

ಎಸ್‌.ಗಿರೀಶ್‌ಬಾಬು

ಬೆಂಗ​ಳೂರು : ರಾಜಧಾನಿಯ ಜಯ​ನ​ಗರ ಕ್ಷೇತ್ರ​ದಿಂದ ತಮ್ಮ ಪುತ್ರಿ ಸೌಮ್ಯಾ ರೆಡ್ಡಿ ಅವ​ರನ್ನು ಕಣಕ್ಕೆ ಇಳಿ​ಸಲು ಸರ್ವ ಪ್ರಯತ್ನ ನಡೆ​ಸು​ತ್ತಿ​ರುವ ಗೃಹ ಸಚಿವ ರಾಮ​ಲಿಂಗಾ​ರೆಡ್ಡಿ ಅವ​ರಿಗೆ ಈಗ ಅತ್ಯಂತ ಪ್ರಬಲ ಪೈಪೋಟಿ ಎದು​ರಾ​ಗಿ​ದೆ.

ಕಾಂಗ್ರೆಸ್‌ ನಡೆ​ಸಿ​ರುವ ಸಮೀಕ್ಷೆ ಪ್ರಕಾರ ಪಕ್ಷ ಗೆಲ್ಲ​ಬ​ಹು​ದಾದ ಬೆಂಗ​ಳೂ​ರಿನ ಕ್ಷೇತ್ರ​ಗಳ ಪೈಕಿ ಜಯ​ನ​ಗರ ಕೂಡ ಒಂದು. ಈ ಕ್ಷೇತ್ರ​ದಲ್ಲಿ ತಮ್ಮ ಪುತ್ರಿ​ಯನ್ನು ಕಣಕ್ಕೆ ಇಳಿ​ಸಲು ಬಹಳ ಹಿಂದಿ​ನಿಂದಲೇ ರಾಮಲಿಂಗಾರೆಡ್ಡಿ ಪ್ರಯತ್ನ ಆರಂಭಿ​ಸಿ​ದ್ದಾರೆ. ಇದು​ವ​ರೆಗೂ ಅವರ ಪುತ್ರಿಗೆ ಟಿಕೆಟ್‌ ದೊರೆ​ಯುವ ಸಾಧ್ಯತೆ ಕಂಡುಬಂದಿತ್ತು. ಆದರೆ, ಇದೀಗ ಕೆಪಿ​ಸಿಸಿ ಅಧ್ಯಕ್ಷ ಡಾ.ಜಿ.ಪರ​ಮೇ​ಶ್ವರ್‌ ಹಾಗೂ ಲೋಕ​ಸ​ಭೆ​ಯಲ್ಲಿನ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿ​ಕಾ​ರ್ಜುನ ಖರ್ಗೆ ಅವರು ಅಖಾಡ ಪ್ರವೇ​ಶಿ​ಸಿ​ರು​ವುದು ಪೈಪೋಟಿ ತೀವ್ರ​ಗೊ​ಳ್ಳು​ವಂತೆ ಮಾಡಿ​ದೆ.

ಪರ​ಮೇ​ಶ್ವರ್‌ ಅವರು ತಮ್ಮ ಆಪ್ತ ಎಂ.ಸಿ. ವೇಣು​ಗೋ​ಪಾ​ಲ್‌ಗೆ ಈ ಬಾರಿಯೂ ಜಯ​ನ​ಗರ ಟಿಕೆಟ್‌ ಬೇಕು ಎಂದು ಪಟ್ಟು ಹಿಡಿ​ದಿ​ದ್ದಾರೆ. ಕಳೆದ ಬಾರಿಯೂ ಪರ​ಮೇ​ಶ್ವರ್‌ ಅವರ ಪ್ರಯ​ತ್ನ​ದಿಂದ ವೇಣುಗೋಪಾಲ್‌ ಟಿಕೆಟ್‌ ಗಿಟ್ಟಿಸಿದ್ದರು. ಆದರೆ, ಚುನಾವಣೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಬಾರಿಯೂ ಪರಮೇಶ್ವರ್‌ ಅವರು ವೇಣುಗೋಪಾಲ್‌ ಪರ ಪ್ರಬಲ ಲಾಬಿ ನಡೆಸಿದ್ದಾರೆ.

ಆದರೆ, ರಾಮಲಿಂಗಾರೆಡ್ಡಿ ಅವರು ಹೈಕಮಾಂಡ್‌ ಸಂಪರ್ಕಿಸಿ ತಮ್ಮ ಪುತ್ರಿಗೆ ಟಿಕೆಟ್‌ ಪಡೆಯುವ ಪ್ರಯತ್ನ ತೀವ್ರಗೊಳಿಸಿದ್ದರಿಂದ ತುಸು ಅಸಮಾಧಾನಗೊಂಡಿರುವ ಪರಮೇಶ್ವರ್‌ ಅವರು ಇತ್ತೀಚೆಗೆ ನಡೆದ ಕಾಂಗ್ರೆಸ್‌ ನಾಯಕರ ಸಭೆಯಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷನಾಗಿ ನಾನು ನನ್ನ ಕ್ಷೇತ್ರ ಬಿಟ್ಟು ಕೆಲವೇ ಕೆಲವು ಕ್ಷೇತ್ರಗಳಿಗೆ ಟಿಕೆಟ್‌ ಬಯಸುತ್ತಿದ್ದೇನೆ. ಅದು ಕೂಡ ಕೊಡುವುದಿಲ್ಲ ಎಂದರೆ ನಾನು ಈ ಹುದ್ದೆಯಲ್ಲಿ ಇದ್ದು ಏನು ಪ್ರಯೋಜನ ಎಂದು ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ಗೆ ನೇರವಾಗಿ ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದು ರಾಮಲಿಂಗಾರೆಡ್ಡಿ ಅವರ ಪ್ರಯತ್ನಕ್ಕೆ ದೊಡ್ಡ ಹಿನ್ನಡೆ ಉಂಟುಮಾಡಿದೆ. ಇದಿಷ್ಟೇ ಅಲ್ಲದೆ, ಈ ಪೈಪೋಟಿಗೆ ಮಲ್ಲಿಕಾರ್ಜುನ ಖರ್ಗೆ ಕೂಡ ಸೇರಿಕೊಂಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಆಪ್ತ ಯು.ಬಿ. ವೆಂಕಟೇಶ್‌ ಅವರಿಗೆ ಜಯನಗರ ಟಿಕೆಟ್‌ ನೀಡುವಂತೆ ಪ್ರಭಾವ ಬೀರತೊಡಗಿದ್ದಾರೆ. ಕಳೆದ ಚುನಾವಣೆಯಲ್ಲೂ ಯು.ಬಿ. ವೆಂಕಟೇಶ್‌ ಅವರಿಗೆ ಜಯನಗರ ಕ್ಷೇತ್ರದ ಟಿಕೆಟ್‌ ಕೊಡಿಸಲು ಖರ್ಗೆ ಯತ್ನಿಸಿದ್ದರು. ಆದರೆ, ಆಗ ಪರಮೇಶ್ವರ್‌ ಕೈ ಮೇಲಾಗಿದ್ದರಿಂದ ಯು.ಬಿ.ವೆಂಕಟೇಶ್‌ಗೆ ಟಿಕೆಟ್‌ ದೊರಕಿರಲಿಲ್ಲ. ಈ ಬಾರಿ ವೆಂಕಟೇಶ್‌ಗೆ ಟಿಕೆಟ್‌ ನೀಡಬೇಕು ಎಂದು ಖರ್ಗೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಹೀಗೆ ಪ್ರಭಾವಿಗಳು ಪಟ್ಟು ಹಿಡಿದ ಕಾರಣ ಗತ್ಯಂತರವಿಲ್ಲದೆ ಈ ಕ್ಷೇತ್ರಕ್ಕೆ ಸೌಮ್ಯಾರೆಡ್ಡಿ, ಎಂ.ಸಿ.ವೇಣುಗೋಪಾಲ್‌ ಹಾಗೂ ಯು.ಬಿ.ವೆಂಕಟೇಶ್‌ ಅವರ ಹೆಸರಿರುವ ಪ್ಯಾನೆಲ್‌ ಸಿದ್ಧಪಡಿಸಲಾಗಿದೆ. ಇದನ್ನೇ ಹೈಕಮಾಂಡ್‌ಗೂ ಕಳುಹಿಸಲಿದ್ದು, ಅಂತಿಮ ನಿರ್ಧಾರವನ್ನು ಹೈಕಮಾಂಡ್‌ಗೆ ಬಿಡಲು ಸ್ಥಳೀಯವಾಗಿ ನಿರ್ಧರಿಸಲಾಗಿದೆ.

ಆದರೆ, ಹೈಕಮಾಂಡ್‌ನಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಸಭೆಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಹಾಗೂ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಇರುತ್ತಾರೆ. ರಾಮಲಿಂಗಾರೆಡ್ಡಿ ಇಂತಹ ಸಭೆಯಲ್ಲಿ ಇರುವುದಿಲ್ಲ. ಹೀಗಾಗಿ ರಾಮಲಿಂಗಾರೆಡ್ಡಿ ನೇರವಾಗಿ ಹೈಕಮಾಂಡ್‌ ಮೇಲೆ ಪ್ರಭಾವ ಬೀರಲು ಮುಂದಾಗಿದ್ದು, ಗೆಲ್ಲುವ ಮಾನದಂಡವನ್ನು ಪರಿಗಣಿಸುವಂತೆ ಮನವಿ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಜಯನಗರ ಕ್ಷೇತ್ರದಲ್ಲಿ ಸ್ಥಳೀಯವಾಗಿ ನನಗೆ ಹಿಡಿತವಿದೆ. ಮಗಳಿಗೆ ಟಿಕೆಟ್‌ ನೀಡಿದರೆ ಬಿಜೆಪಿ ತೆಕ್ಕೆಯಲ್ಲಿರುವ ಈ ಕ್ಷೇತ್ರವನ್ನು ಪಕ್ಷಕ್ಕೆ ಬರುವಂತೆ ಮಾಡುವ ಸಾಮರ್ಥ್ಯವಿದೆ. ಆದರೆ, ಉಳಿದ ಅಭ್ಯರ್ಥಿಗಳಿಗೆ ಆ ಸಾಮರ್ಥ್ಯವಿಲ್ಲ ಎಂದು ಅವರು ಬಿಂಬಿಸಲು ಮುಂದಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಅಂತಿಮವಾಗಿ ಜಯನಗರ ಕ್ಷೇತ್ರ ಯಾರಿಗೆ ಒಲಿಯುತ್ತದೆ ಎಂಬುದನ್ನು ಕಾದು ನೋಡಬೇಕು.

Follow Us:
Download App:
  • android
  • ios