ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಶೀತಲ ಸಮರದ ಕುರಿತಂತೆ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್'ಲಾಲ್ ಬೆಳಗಾವಿಯಲ್ಲಿ ನಡೆಯುತ್ತಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಪ್ರಸ್ತಾಪಿಸಿದ್ದು, ಪಕ್ಷದ ಅಧ್ಯಕ್ಷರ ವಿರುದ್ಧ ಬಹಿರಂಗ ವೇದಿಕೆಗಳಲ್ಲಿ ಯಾರೂ ಟೀಕಿಸಕೂಡದು ಎಂದು ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಎರಡು ದಿನಗಳ ಕಾರ್ಯಕಾರಿಣಿಯ ಸಮಾರೋಪದಲ್ಲಿ ಮಂಗಳವಾರ ಮಾತನಾಡಿದ ಅವರು, ‘‘ಪಕ್ಷದ ಅಧ್ಯಕ್ಷರ ವಿರುದ್ಧ ಪಕ್ಷದ ಮುಖಂಡರೇ ಬಹಿರಂಗವಾಗಿ ಮಾತನಾಡಿದರೆ, ಪಕ್ಷವನ್ನು ಮುನ್ನಡೆಸುವುದು ಅಧ್ಯಕ್ಷರಿಗೆ ಹೊರೆಯಾಗುತ್ತದೆ. ಸಾಮಾನ್ಯ ಕಾರ್ಯಕರ್ತರಿಗೆ, ಜನರಿಗೆ ಮುಖ ತೋರಿಸುವುದು ಕಷ್ಟವಾಗುತ್ತದೆ’’ ಎಂದು ಹೇಳಿದರು.
‘‘ಪಕ್ಷದ ಆಂತರಿಕ ವಿಚಾರಗಳನ್ನು ಬಹಿರಂಗವಾಗಿ ಯಾರೂ ಕೂಡ ಮಾತನಾಡಕೂಡದು. ಪಕ್ಷದಲ್ಲಿನ ಪದಾಧಿಕಾರಿಗಳ ನೇಮಕಾತಿ ಸೇರಿದಂತೆ ಯಾವುದೇ ವಿಚಾರವನ್ನು ಪಕ್ಷದ ವೇದಿಕೆಯಲ್ಲೇ ಚರ್ಚಿಸಬೇಕು. ಇಂತಹ ವಿಚಾರಗಳನ್ನು ಬಹಿರಂಗವಾಗಿ ಮಾತನಾಡುವುದನ್ನು ಅಶಿಸ್ತು ಎಂದೇ ಹೇಳಬೇಕಾಗುತ್ತದೆ’’ ಎಂದು ಖಡಕ್ ಸಂದೇಶ ನೀಡಿದರು.
‘‘ನಿಮಗೆ ಪಕ್ಷದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಹೇಳಬೇಕೆ?’’ ಎಂದು ರಾಮ್‌ಲಾಲ್ ಪ್ರತಿನಿಧಿಗಳನ್ನು ಉದ್ದೇಶಿಸಿ ಕೇಳಿದಾಗ, ಪ್ರತಿನಿಧಿಗಳೆಲ್ಲರೂ ಯಡಿಯೂರಪ್ಪ ಅವರ ಹೆಸರು ಉಚ್ಚರಿಸಿದರು. ಆಗ ರಾಮ್‌ಲಾಲ್, ‘‘ಪಕ್ಷದ ರಾಷ್ಟ್ರೀಯ ನಾಯಕರೂ ಇದನ್ನೇ ಬಯಸುತ್ತಾರೆ’’ ಎಂದು ಸೂಚ್ಯವಾಗಿ ಹೇಳಿದರು.
