ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಇನ್ನೋರ್ವ ಕಾಂಗ್ರೆಸ್ ಮುಖಂಡ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಮ್ಮ ರಾಜಕೀಯದಲ್ಲಿ ಅವರು ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದ್ದಾರೆ. 

ಬೆಳಗಾವಿ : ‘ಸಚಿವ ಡಿ.ಕೆ.ಶಿವಕುಮಾರ್‌ ಬೆಳಗಾವಿಯಲ್ಲಿ ಹಸ್ತಕ್ಷೇಪ ಮಾಡುವುದು ತಪ್ಪು. ಅದೇ ರೀತಿಯಾಗಿ ನಾನು ಬೆಂಗಳೂರಿನಲ್ಲಿ ಹಸ್ತಕ್ಷೇಪ ಮಾಡುವುದು ಕೂಡ ತಪ್ಪು. ಡಿಕೆಶಿ ಅವರಾಗಿಯೇ ಹಸ್ತಕ್ಷೇಪ ಮಾಡಲು ಬಂದರೆ ನಾವು ಬಿಡುವುದಿಲ್ಲ’ ಎಂದು ಪೌರಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಖಡಕ್‌ ಮಾತುಗಳನ್ನಾಡಿದ್ದಾರೆ. ಇದೇ ವೇಳೆ ಶೋಪೀಸ್‌ಗಳ ಮಾತು ಕೇಳಿದರೆ ಕಾಂಗ್ರೆಸ್‌ ಹಾಳಾಗುತ್ತದೆ ಎಂದೂ ಮಾರ್ಮಿಕವಾಗಿ ನುಡಿದಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಇರಲಿ ರಮೇಶ ಜಾರಕಿಹೊಳಿ ಇರಲಿ ನಮ್ಮ ಜಿಲ್ಲೆ ನಾವು ನೋಡಿಕೊಳ್ಳಬೇಕು. ನಮ್ಮ ಸಮಸ್ಯೆಗಳಿದ್ದಾಗ ನಾವು ಕರೆದರೆ ಬರಲಿ. ಆದರೆ, ಅದನ್ನು ಬಿಟ್ಟು ಅವರಾಗಿಯೇ ಹಸ್ತಕ್ಷೇಪ ಮಾಡಲು ಬಂದರೆ ನಾವು ಬಿಡುವುದಿಲ್ಲ. ಡಿಕೆಶಿ ಇರಲಿ ಯಾರೇ ಇರಲಿ ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಲು ಬಿಡೊಲ್ಲ ಎಂದು ಹೇಳಿದರು.

ಬೆಳಗಾವಿ ಕಾಂಗ್ರೆಸ್‌ನಲ್ಲಿ ಭಿನ್ನಮತ ವಿಚಾರದ ಕುರಿತು ಈಗಾಗಲೇ ನಾವು ಚರ್ಚೆ ಮಾಡಿದ್ದೇವೆ. ದಯವಿಟ್ಟು ಅದನ್ನು ಮುಂದುವರಿಸಬೇಡಿ. ರಾಜಕಾರಣದಲ್ಲಿ ವಾಗ್ವಾದ ಆಗುವುದು ಸಾಮಾನ್ಯ. ಆದರೆ, ಅದನ್ನೇ ವೈರತ್ವ ಎಂದು ಅಂದುಕೊಂಡರೆ ಮೂರ್ಖತನ ಎಂದು ಹೇಳಿದರು. ಶಾಸಕ ಸತೀಶ್‌ ಜಾರಕಿಹೊಳಿ ಮೃದುವಾಗಿ ಹೇಳುತ್ತಾರೆ. ಆದರೆ ನಾನು ಸಿಟ್ಟಿನಿಂದ ಹೇಳ್ತಿನಿ. ಇದು ಅವರವರ ಸ್ವಭಾವ. ಅದನ್ನೇ ಮಾಧ್ಯಮದವರು ಊಹೆ ಮಾಡಿ ಬರೆದರೆ, ತಪ್ಪು ಎಂದರು.

ಹೆಬ್ಬಾಳ್ಕರ್‌ ಜೊತೆ ಮಾತಾಡಿಲ್ಲ: ಪಿಎಲ್ ಡಿ ಬ್ಯಾಂಕ್‌ ಬಗ್ಗೆ ನನಗೆ ಗೊತ್ತಿಲ್ಲ. ಮೂರ್ನಾಲ್ಕು ಜನ ಶಾಸಕರಿದ್ದಾರೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ. ಶಾಸಕಿ ಲಕ್ಷ್ಮೀ ಹೆಬ್ಬಾಳಕರ್‌ ಬಗ್ಗೆ ಚರ್ಚಿಸಲು ಆಕೆ ಸಂಬಂಧವಿಲ್ಲ. ಹೆಬ್ಬಾಳಕರ್‌ ನನ್ನ ಜೊತೆಗೆ ಈ ಕುರಿತು ಮಾತನಾಡಿಯೇ ಇಲ್ಲ. ಶಾಸಕ ಸತೀಶ್‌ ಜಾರಕಿಹೊಳಿ ಮಾತಾಡಿದ್ದಾರೆ. ಹೀಗಾಗಿ ಅವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಮತವಿರಬೇಕು. ಅಂದರೆ ಪ್ರಜಾಪ್ರಭುತ್ವ. ನಾವು ಹೇಳಿದ್ದೆ ತಲೆಯಾಡಿಸೋದಾದರೆ, ಹಿಟ್ಲರ್‌ ಶಾಹಿ ಆಗುತ್ತದೆ. ಶೋ ಪೀಸ್‌ಗಳ ಮಾತು ಕೇಳಿದರೆ, ಕಾಂಗ್ರೆಸ್‌ ಹಾಳಾಗುತ್ತದೆ. ಬೆಂಗಳೂರಿನಲ್ಲಿ ಹೋಗಿ ಶೋ ಮಾಡೋದಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಇದನ್ನೇ ಇಟ್ಟುಕೊಂಡು ಕೆಲವರು ಬೆಂಗಳೂರಿನಲ್ಲಿ ಶೋ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.