ಬೆಳಗಾವಿ[ಸೆ.29]: ಮೂಲ ಮತ್ತು ವಲಸಿಗ ವಿಚಾರವನ್ನಿಟ್ಟುಕೊಂಡು ಮಾಜಿ ಮುಖ್ಯಮಂತ್ರಿ ವಿರುದ್ಧ ಹಿರಿಯ ಕಾಂಗ್ರೆಸ್‌ ನಾಯಕ ಮುನಿಯಪ್ಪ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಗೋಕಾಕ್‌ನ ಅನರ್ಹ ಶಾಸಕ ರಮೇಶ್‌ ಜಾರಕಿಹೊಳಿ ಕಿಡಿಕಾರಿದ್ದಾರೆ. ನಾವು ಕಾಂಗ್ರೆಸ್‌ನ ಮೂಲ ಕಾರ್ಯಕರ್ತರು. ಪಕ್ಷವನ್ನು ಕಟ್ಟಿಬೆಳೆಸಿದವರು. ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ ಪಕ್ಷಕ್ಕೆ ವಲಸೆ ಬಂದವರು. ಅವರನ್ನು ಪಕ್ಷದಿಂದ ಹೊರಹಾಕದಿದ್ದರೆ ಕಾಂಗ್ರೆಸ್‌ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬರುವುದಕ್ಕಿಂತ 20 ವರ್ಷ ಮೊದಲೇ ನಾವು ಪಕ್ಷವನ್ನು ಕಟ್ಟಿಬೆಳೆಸಿದ್ದೇವೆ. ಹಲವು ಮಹಾನ್‌ ನಾಯಕರು ಕಟ್ಟಿಬೆಳೆಸಿದ ಕಾಂಗ್ರೆಸ್‌ ಪಕ್ಷ. ಇಂದು ಕೆಲವರ ಸ್ವಾರ್ಥಕ್ಕಾಗಿ ಹಾಳಾಗುತ್ತಿದೆ ಎಂದರು.

ಸಿದ್ದರಾಮಯ್ಯ ಅವರಿಗೆ ಪಾರ್ಟಿ ಹಾಳಾಗಿ ಹೋಗುವುದು ಬೇಕಾಗಿತ್ತು. ಈಗ ದಿಟ್ಟತೀರ್ಮಾನ ಕೈಗೊಳ್ಳದಿದ್ದರೆ ಕಾಂಗ್ರೆಸ್‌ ಪರಿಸ್ಥಿತಿ ಇನ್ನೂ ಕೆಡುತ್ತದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ 30 ಸ್ಥಾನಗಳಲ್ಲಿಯೂ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದರು.

ನಾನು ಸಿದ್ದರಾಮಯ್ಯ ಅವರ ಶಿಷ್ಯ ಆಗಿದ್ದರೆ ಅವರು ನಮ್ಮನ್ನು ಕರೆದು ಮಾತಾಡಿ ಪಕ್ಷದಲ್ಲಿ ಉಳಿಸಿಕೊಳ್ಳಬೇಕಿತ್ತು. ಹಿರಿಯರಾಗಿ ಮನವಿ ಮಾಡಲಿಲ್ಲ, ತಿಳಿ ಹೇಳುವ ಕೆಲಸ ಮಾಡಲಿಲ್ಲ ಎಂದು ಆರೋಪಿಸಿದರು. ಅವರು ನಮಗೆ ಒಂದು ದಿನ ತಿಳಿಹೇಳಿದ್ದರೂ ಇಂದೇ ರಾಜಕೀಯ ನಿವೃತ್ತಿ ನೀಡುವುದಾಗಿ ಸವಾಲು ಹಾಕಿದರು.

ಜೊತೆಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಒಬ್ಬ ಬೇಕಾರ (ಕೆಟ್ಟ) ಮನುಷ್ಯ. ಕಾಂಗ್ರೆಸ್‌ ಪಕ್ಷದ ಇಂದಿನ ದುಸ್ಥಿತಿಗೆ ವೇಣುಗೋಪಾಲ್‌ ಅವರೂ ಪ್ರಮುಖ ಕಾರಣ ಎಂದು ದೂರಿದರು.

ಬಿಜೆಪಿ ಸೇರಲು ರಾಜೀನಾಮೆ ಅಲ್ಲ:

ನಾವು ರಾಜೀನಾಮೆ ನೀಡಿದ್ದು ಬಿಜೆಪಿ ಸೇರಲು ಅಲ್ಲ. ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ನಮಗೆ ಅನ್ಯಾಯ ಮಾಡಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುವಂತೆ ಕೇಳಿದರೂ ನಮ್ಮ ಬೇಡಿಕೆಗೆ ಸರಿಯಾಗಿ ಸ್ಪಂದಿಸಲಿಲ್ಲ. ಹಾಗಾಗಿ, ಅನಿವಾರ್ಯವಾಗಿ ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಸುಪ್ರೀಂಕೋರ್ಟ್‌ ತೀರ್ಪು ಬರುವವರೆಗೆ ಮುಂದಿನ ನಡೆ ಏನೆಂಬುದನ್ನು ಬಹಿರಂಗಪಡಿಸುವುದಿಲ್ಲ ಎಂದರು.

ಚುನಾವಣೆ ಎದುರಿಸಲು ಸಿದ್ಧ

ಮತ್ತೆ ಚುನಾವಣೆ ನಿಗದಿಯಾಗಿದ್ದಕ್ಕೆ ಸಂತೋಷವಾಗಿದೆ. ಚುನಾವಣೆ ಯಾವಾಗ ಆದರೂ ನಾವು ಎದುರಿಸಲು ಸಿದ್ಧರಿದ್ದೇವೆ. ಸುಪ್ರೀಂಕೋರ್ಟ್‌ ಅನುಮತಿ ನೀಡಿದರೆ ಚುನಾವಣೆಗೆ ಸ್ಪರ್ಧಿಸುತ್ತೇವೆ. ಇಲ್ಲದಿದ್ದರೆ ಮತ್ತೆ ಚುನಾವಣೆ ಮುಂದಕ್ಕೆ ಹೋಗುವ ಸಾಧ್ಯತೆಯಿದೆ ಎಂದರು.

ಶ್ರೀಮಂತ ಪಾಟೀಲ ಮತ್ತು ಆರ್‌.ಶಂಕರ ಕ್ಷೇತ್ರಕ್ಕೆ ಉಪಚುನಾಣೆ ನಡೆಯುವುದು ಅನುಮಾನವಿದೆ. ಶಾಸಕ ಶ್ರೀಮಂತ ಪಾಟೀಲ ರಾಜೀನಾಮೆ ನೀಡಿಲ್ಲ. ಹಾಗಾಗಿ, ಕಾಗವಾಡ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುವುದಿಲ್ಲ. ಬಳ್ಳಾರಿ ಶಾಸಕ ನಾಗೇಂದ್ರ ಮತ್ತು ಶ್ರೀಮಂತ ಪಾಟೀಲ ಇಬ್ಬರೂ ಆಸ್ಪತ್ರೆಯಲ್ಲಿದ್ದರು. ಆದರೆ, ನಾಗೇಂದ್ರಗೆ ಒಂದು ನ್ಯಾಯ, ಶ್ರೀಮಂತ ಪಾಟೀಲಗೆ ಇನ್ನೊಂದು ನ್ಯಾಯವಾಗಿದೆ. ನಾಗೇಂದ್ರಗೆ ವಿಪ್‌ ನೀಡಲಾಗಿತ್ತು. ಆದರೆ, ಶ್ರೀಮಂತಗೆ ವಿಪ್‌ ನೀಡಿರಲಿಲ್ಲ. ಹಾಗಾಗಿ ಕಾಗವಾಡ ಕ್ಷೇತ್ರದ ಚುನಾವಣೆ ನಡೆಯುವುದು ಅನುಮಾನವಿದೆ.

ಸಹೋದರ ಸತೀಶ್‌ ಜಾರಕಿಹೊಳಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆತನ ತಲೆ ಸರಿಯಿಲ್ಲ. ಆತನನ್ನು ಧಾರವಾಡದ ಮೆಂಟಲ್‌ ಆಸ್ಪತ್ರೆಗೆ ದಾಖಲಿಸಬೇಕು ಎಂದು ವ್ಯಂಗ್ಯವಾಡಿದರು.