Asianet Suvarna News Asianet Suvarna News

ರಾಜ್ಯ ರಾಜಕಾರಣದ ಮತ್ತೊಂದು ಸ್ಫೋಟಕ ಸಂಗತಿ ಬಯಲು

ಮಹಾರಾಷ್ಟ್ರ ಸಚಿವ ಚಂದ್ರಕಾಂತ್‌ ಪಾಟೀಲ್‌ ಅವರೊಂದಿಗೆ ಜಾರಕಿಹೊಳಿ ಸಹೋದರರು ಅದರಲ್ಲೂ ರಮೇಶ್‌ ಜಾರಕಿಹೊಳಿ ಅವರು ಹಲವು ವರ್ಷಗಳಿಂದ ಆತ್ಮೀಯ ಸಂಬಂಧ ಹೊಂದಿದ್ದಾರೆ. ಹೀಗಾಗಿಯೇ ಬಿಜೆಪಿ ನಾಯಕರು ಅವರ ಮೂಲಕವೇ ರಮೇಶ್‌ ಅವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.

Ramesh Jarkiholi Connection With Maharashtra BJP Minister
Author
Bengaluru, First Published Sep 20, 2018, 10:18 AM IST
  • Facebook
  • Twitter
  • Whatsapp

ಬೆಂಗಳೂರು :  ಕಾಂಗ್ರೆಸ್ಸಿನ ಪೌರಾಡಳಿತ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನದಲ್ಲಿ ಮಹಾರಾಷ್ಟ್ರದ ಕಂದಾಯ ಸಚಿವ ಚಂದ್ರಕಾಂತ್‌ ಪಾಟೀಲ್‌ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿದುಬಂದಿದೆ.

ಬೆಳಗಾವಿ ಜಿಲ್ಲೆಯ ಪಕ್ಕದ ಗಡಿ ಭಾಗದಲ್ಲಿರುವ ಕೊಲ್ಲಾಪುರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಚಂದ್ರಕಾಂತ್‌ ಪಾಟೀಲ್‌ ಅವರೊಂದಿಗೆ ಜಾರಕಿಹೊಳಿ ಸಹೋದರರು ಅದರಲ್ಲೂ ರಮೇಶ್‌ ಜಾರಕಿಹೊಳಿ ಅವರು ಹಲವು ವರ್ಷಗಳಿಂದ ಆತ್ಮೀಯ ಸಂಬಂಧ ಹೊಂದಿದ್ದಾರೆ. ಹೀಗಾಗಿಯೇ ಬಿಜೆಪಿ ನಾಯಕರು ಅವರ ಮೂಲಕವೇ ರಮೇಶ್‌ ಅವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಆದರೆ, ಈ ಪ್ರಕ್ರಿಯೆಯಲ್ಲಿ ಬಿಜೆಪಿ ವರಿಷ್ಠರ ಪಾತ್ರ ಇತ್ತೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ರಮೇಶ್‌ ಜಾರಕಿಹೊಳಿ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎಂಬ ಅನುಮಾನವಿದ್ದು, ಅದು ಸಚಿವ ಚಂದ್ರಕಾಂತ್‌ ಪಾಟೀಲ್‌ ಅವರ ಮೂಲಕವೇ ಆಗಿದೆ ಎಂದು ಮೂಲಗಳು ತಿಳಿಸಿವೆ.

ಬೆಳಗಾವಿ ರಾಜಕಾರಣಕ್ಕೂ ಮತ್ತು ಮಹಾರಾಷ್ಟ್ರದ ರಾಜಕಾರಣಕ್ಕೂ ಅವಿನಾಭಾವ ಸಂಬಂಧ ಇದೆ. ಬೆಳಗಾವಿಯ ಬಿಜೆಪಿ ಮತ್ತು ಕಾಂಗ್ರೆಸ್ಸಿನ ಬಹುತೇಕ ಎಲ್ಲ ಪ್ರಮುಖ ಮುಖಂಡರೂ ಮಹಾರಾಷ್ಟ್ರದ ರಾಜಕಾರಣಿಗಳೊಂದಿಗೆ ಪಕ್ಷಾತೀತವಾಗಿ ಉತ್ತಮ ಸಂಬಂಧ ಹೊಂದಿದ್ದಾರೆ. ಉದ್ಯಮಗಳಲ್ಲೂ ಪರೋಕ್ಷವಾಗಿ ಪಾಲುದಾರಿಕೆ ಹೊಂದಿದ್ದಾರೆ ಎನ್ನುವುದು ಗುಟ್ಟಿನ ವಿಷಯವೇನಲ್ಲ.

ರಮೇಶ್‌ ಜಾರಕಿಹೊಳಿ ಅವರು ಮಹಾರಾಷ್ಟ್ರದಲ್ಲೂ ಉದ್ಯಮ ವಿಸ್ತರಿಸಲು ಚಂದ್ರಕಾಂತ್‌ ಪಾಟೀಲ್‌ ಸೇರಿದಂತೆ ಅನೇಕ ಬಿಜೆಪಿ ಮುಖಂಡರೊಂದಿಗೆ ಸಂಪರ್ಕದಲ್ಲಿದ್ದಾರೆ. ಇದನ್ನೇ ಬಳಸಿಕೊಂಡ ರಾಜ್ಯ ಬಿಜೆಪಿ ನಾಯಕರು ಜಾರಕಿಹೊಳಿ ಅವರನ್ನು ಸೆಳೆಯಲು ಪ್ರಯತ್ನ ನಡೆಸಿದ್ದಾರೆ. ರಾಜ್ಯ ಬಿಜೆಪಿಯ ಹಿರಿಯ ಮುಖಂಡ ಬಿ.ಶ್ರೀರಾಮುಲು ಅವರೇ ಜಾರಕಿಹೊಳಿ ಅವರನ್ನು ಸೆಳೆಯಲು ಪ್ರಮುಖ ಕಾರಣ ಎಂದು ಬಿಂಬಿತಗೊಳ್ಳುತ್ತಿದ್ದರೂ ತೆರೆಮರೆಯಲ್ಲಿ ಇದಕ್ಕೆ ವೇದಿಕೆ ಸಿದ್ಧಪಡಿಸಿದ್ದು ಮಹಾರಾಷ್ಟ್ರದ ಸಚಿವ ಚಂದ್ರಕಾಂತ್‌ ಪಾಟೀಲ್‌. ಅವರ ಮೂಲಕವೇ ಕಾಂಗ್ರೆಸ್‌ ತೊರೆದು ಬಿಜೆಪಿಗೆ ವಲಸೆ ಬಂದರೆ ಏನೇನು ಸ್ಥಾನಮಾನ ನೀಡಬಹುದು ಎಂಬ ಸಂದೇಶ ರವಾನಿಸಲಾಗಿದೆ ಎಂದು ವಿಶ್ವಸನೀಯ ಮೂಲಗಳು ಮಾಹಿತಿ ನೀಡಿವೆ.

ಈ ಕಾರಣಕ್ಕಾಗಿಯೇ ರಮೇಶ್‌ ಜಾರಕಿಹೊಳಿ ಅವರು ಕಳೆದ ಹಲವು ದಿನಗಳಿಂದ ಕಾಂಗ್ರೆಸ್‌ ವಿರುದ್ಧ ಬಂಡಾಯ ಸಾರಿದ್ದಾರೆ. ಈಗ ಮೇಲ್ನೋಟಕ್ಕೆ ಶಮನಗೊಂಡಂತೆ ಕಂಡು ಬಂದರೂ ಮತ್ತೆ ಸ್ಫೋಟಗೊಳ್ಳಬಹುದು ಎಂಬುದು ಬಿಜೆಪಿ ನಾಯಕರ ನಿರೀಕ್ಷೆ.

Follow Us:
Download App:
  • android
  • ios