ಬೆಳಗಾವಿ :  ಈಗಾಗಲೇ ಮೈತ್ರಿ ಸರ್ಕಾರದ ವಿರುದ್ಧ ಮುನಿಸಿಕೊಂಡು ದೂರವೇ ಉಳಿಯುತ್ತಿರುವ ಸಚಿವ ರಮೇಶ್ ಜಾರಕಿಹೊಳಿ ಇದೀಗ ಮತ್ತೊಮ್ಮೆ ದೂರ ಉಳಿಯುತ್ತಿದ್ದಾರೆ. 

ಸರ್ಕಾರದಲ್ಲಿ ಇದುವರೆಗೂ ನಡೆದ ಅನೇಕ ಸಚಿವ ಸಂಪುಟ ಸಭೆಗಳಿಗೆ ಗೈರಾಗಿರುವ ಅವರು ಇದೀಗ ಸೋಮವಾರದಿಂದ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೂ ಕೂಡ ಗೈರಾಗುವ ಸಾಧ್ಯತೆ ಇದೆ. 

ಕಳೆದ ನವೆಂಬರ್ 1 ರಿಂದಲೂ ಕೂಡ ಯಾವುದೇ ರೀತಿಯ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದ ಅವರು, ದೋಸ್ತಿ ಸರ್ಕಾರದಿಂದ ದೂರವೇ ಉಳಿಯುತ್ತಿದ್ದಾರೆ. ಅಲ್ಲದೇ ಸರ್ಕಾರಿ ವಾಹನವನ್ನೂ ಕೂಡ ಬಳಕೆ ಮಾಡುತ್ತಿಲ್ಲ. ಇದರಿಂದ ರಮೇಶ್ ಜಾರಕಿಹೊಳಿ ನಡೆ ಸಾಕಷ್ಟು ಅನುಮಾನವನ್ನು ಹುಟ್ಟು ಹಾಕಿದೆ.  

ಸರ್ಕಾರದ ವಿರುದ್ಧ ಹಾಗೂ ಕಾಂಗ್ರೆಸ್ ಮುಖಂಡರ ವಿರುದ್ಧ ಈ ಹಿಂದೆ ಪದೇ ಪದೇ ಅಸಮಾಧಾನ ಹೊರಹಾಕುತ್ತಿದ್ದ ಅವರು ಒಟ್ಟು 10 ಸಂಪುಟ ಸಭೆಗಳಿಗೆ ಗೈರಾಗಿದ್ದರು. ಅಲ್ಲದೇ ಪಕ್ಷ ತೊರೆಯುತ್ತಾರೆ ಎನ್ನುವ ಬಗ್ಗೆಯೂ ಕೂಡ ಸಾಕಷ್ಟು ಚರ್ಚೆಗಳಾಗಿದ್ದವು.