ಹಿಂದಿ ಕಿರುತೆರೆಯಲ್ಲಿ ಭಾರೀ ಸಂಚಲನ ಮೂಡಿಸಿ ಅಪಾರ ಪ್ರೇಕ್ಷಕರನ್ನು ಹೊಂದಿದ್ದ ರಾಮಾನಂದ್ ಸಾಗರ್'ರವರ 'ರಾಮಾಯಣ್'. ಇದೀಗ ಈ ಧಾರವಾಹಿಯಲ್ಲಿ ವಿಭೀಷಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಗುಜರಾತಿ ನಟ ಮುಕೇಶ್ ರಾವಲ್ ಮೃತದೇಹ ಮುಂಬೈನ ರೈಲು ಹಳಿಯೊಂದರಲ್ಲಿ ಪತ್ತೆಯಾಗಿದೆ.
ಮುಂಬೈ(ನ.17): ಹಿಂದಿ ಕಿರುತೆರೆಯಲ್ಲಿ ಭಾರೀ ಸಂಚಲನ ಮೂಡಿಸಿ ಅಪಾರ ಪ್ರೇಕ್ಷಕರನ್ನು ಹೊಂದಿದ್ದ ರಾಮಾನಂದ್ ಸಾಗರ್'ರವರ 'ರಾಮಾಯಣ್'. ಇದೀಗ ಈ ಧಾರವಾಹಿಯಲ್ಲಿ ವಿಭೀಷಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಗುಜರಾತಿ ನಟ ಮುಕೇಶ್ ರಾವಲ್ ಮೃತದೇಹ ಮುಂಬೈನ ರೈಲು ಹಳಿಯೊಂದರಲ್ಲಿ ಪತ್ತೆಯಾಗಿದೆ.
ಸೋಮವಾರ ಬೆಳಿಗ್ಗೆ ಹಣ ವಿನಿಮಯ ಮಾಡಿಕೊಳ್ಳಲು ಮನೆಯಿಂದ ಬ್ಯಾಂಕ್'ಗೆ ತೆರಳಿದ್ದ ಮುಕೇಶ್ ರಾವಲ್ ಬಳಿಕ ಡಬಿಂಗ್ ಮಾಡಲು ಘಟ್ ಕೋಪರ್'ಗೆ ತೆರಳಿದ್ದರು. ಆದರೆ 24 ಗಂಟೆಯಾದರೂ ಮುಕೇಶ್ ಮನೆಗೆ ಮರಳದಿರುವುದನ್ನು ಕಂಡ ಕುಟುಂಬಸ್ಥರು ಕಾಂದಿವಲೀ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರನ್ವಯ ಶೋಧ ಕಾರ್ಯಕ್ಕಿಳಿದ ಪೊಲೀಸರಿಗೆ ಮುಂಬೈನ ಕಾಂದಿವಲೀ ರೈಲ್ವೇ ಸ್ಟೇಷನ್ ಬಳಿಯ ರೈಲು ಹಳಿಯ ಮೇಲೆ ಮುಕೇಶ್ ಮೃತದೇಹ ಸಿಕ್ಕಿದೆ.
ಆತ್ಮಹತ್ಯೆ ಮಾಡಿಕೊಂಡರಾ ಮುಕೇಶ್ ರಾವಲ್?
ಇವೆಲ್ಲದರ ಮಧ್ಯೆ ಮುಖೇಶ್ ರಾವಲ್ ಆತ್ಮಹತ್ಯೆ ಮಾಡಿಕೊಂಡಿರಬಹುದಾ? ಎಂಬ ಪ್ರಶ್ನೆಗಳು ಕೇಳಿ ಬಂದಿದ್ದವು. ಆದರೆ ಮಾತುಗಳನ್ನು ನಿರಾಕರಿಸಿರುವ ಕುಟುಂಬಸ್ಥರು 'ಅವರು ತಮ್ಮ ಇಡೀ ದಿನದ ದಿನಚರಿಯನ್ನು ತಿಳಿಸಿ ಹೋಗಿದ್ದರು. ಹೀಗಿರುವಾಗ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮಾತೇ ಇಲ್ಲ' ಎಂದಿದ್ದಾರೆ.
ತನ್ನ ಅಣ್ಣನ ಕುರಿತಾಗಿ ತಿಳಿಸಿರುವ ಮುಕೇಶ್ ರಾವಲ್ ತಮ್ಮ ವಿಜಯ್ 'ಅವರು ಯಾವುದೇ ರೀತಿಯ ಒತ್ತಡದಲ್ಲಿರಲಿಲ್ಲ. ಕುಟುಂಬಸ್ಥರೊಂದಿಗೂ ಆತ್ಮೀಯವಾಗಿದ್ದರು. ಹೀಗಾಘಿ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಗಳೇ ಇಲ್ಲ' ಎಂದಿದ್ದಾರೆ.
ಶವ ಪತ್ತೆ ಮಾಡಿದ ಮೋಟರ್ ಮ್ಯಾನ್!
ಮುಕೇಶ್ ಮೃತದೇಹದ ಕುರಿತಾಗಿ ಪೊಲೀಸರಿಗೆ ಮೊದಲು ಮಾಹಿತಿ ನೀಡಿದ್ದು ಓರ್ವ ಮೋಟರ್ ಮ್ಯಾನ್. ಕಾಂದಿವಲೀ ಹಾಗೂ ಬೋರಿವಲೀ ನಡುವೆ ಮುಖೇಶ್ ರಾವಲ್ ಬಿದ್ದಿರುವುದನ್ನು ತಾನು ನೋಡಿರುವುದಾಗಿ ಮೋಟರ್ ಮ್ಯಾನ್ ಹೇಳಿದ್ದಾನೆ.
