ರಾಮನಗರ: ಚುನಾವಣಾ ಕಣದಿಂದ ಹಿಂದೆ ಸರಿದಿರುವ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಮತ್ತೊಂದು ದಾಳ ಉರುಳಿಸಿದ್ದು ಕ್ಷೇತ್ರದ 277 ಮತಗಟ್ಟೆಗಳಲ್ಲಿ ಎಲ್ಲೂ ಕೂಡ ಬಿಜೆಪಿ ಏಜೆಂಟರು ಮತಗಟ್ಟೆ ಪ್ರವೇಶಿಸದಂತೆ ಮಾಡಿದ್ದಾರೆ. 

ಗುರುವಾರ ಸಂಜೆ  ಅಭ್ಯರ್ಥಿ ಚಂದ್ರಶೇಖರ್ ಚುನಾವಣಾಧಿಕಾರಿಗೆ ನಮೂನೆ 9 ನ್ನು ನೀಡಿ ತಮ್ಮ ಅಧಿಕೃತ ಚುನಾವಣಾ ಏಜೆಂಟ್ ಆಗಿದ್ದ  ಪದ್ಮನಾಭ್ ರನ್ನು ರದ್ದುಗೊಳಿಸಿರುವುದಾಗಿ ಪತ್ರ ನೀಡಿದ್ದಾರೆ.

ತಕ್ಷಣದಿಂದಲೇ ಅಭ್ಯರ್ಥಿಯ ಅಧಿಕೃತ ಏಜೆಂಟ್ ಪದ್ಮನಾಭ್ ಅವರ ಸಹಿ ಇನ್ ವ್ಯಾಲಿಡ್ ಆಗಿದೆ( ಮಾನ್ಯತೆ ಕಳೆದುಕೊಂಡಿದೆ)
ಇದರಿಂದಾಗಿ‌ ಈಗಾಗಲೇ ಇಡೀ ಕ್ಷೇತ್ರದಲ್ಲಿ ಬೂತ್ ಮಟ್ಟದಲ್ಲಿ ನೇಮಕ ಮಾಡಿದ್ದ ಎಲ್ಲ ಬಿಜೆಪಿ ಮತಗಟ್ಟೆ ಏಜೆಂಟರ ನೇಮಕಾತಿ  ಪತ್ರಗಳು ಮಾನ್ಯತೆ ಕಳೆದುಕೊಂಡಿದ್ದು ಅವರು ಮತಗಟ್ಟೆಯಿಂದ ಹೊರಗುಳಿಯುವಂತಾಗಿದೆ.

ಈ ಬಗ್ಗೆ ಮಾಹಿತಿಯಿರದ ಬಿಜೆಪಿ ಅಭ್ಯರ್ಥಿಯ ಏಜೆಂಟ್ ಶುಕ್ರವಾರ ಸಂಜೆ ಚುನಾವಣಾಧಿಕಾರಿಯನ್ನು ಭೇಟಿ ಮಾಡಿದ ವೇಳೆ ಚುನಾವಣಾಧಿಕಾರಿ ಕೃಷ್ಣಮೂರ್ತಿ ಈ ವಿಷಯವನ್ನು  ಸ್ಪಷ್ಟ ಪಡಿಸಿದ್ದಾರೆ. 

ಚುನಾವಣಾ ಕಣದಿಂದ ಹಿಂದೆ ಸರಿದು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದ ಚಂದ್ರಶೇಖರ್ ಬಿಜೆಪಿಗೆ ದೊಡ್ಡ ಹೊಡೆತ ನೀಡಿದ್ದರು. ಮತದಾನದ ದಿನ ಮತ್ತು ಎಣಿಕೆ ದಿನ ಬಿಜೆಪಿ ಕಾರ್ಯಕರ್ತರು ಮತಗಟ್ಟೆ ಏಜೆಂಟರಾಗಿ ಕಾರ್ಯ ನಿರ್ವಹಿಸದಂತೆ ಮಾಡಿ  ಮತ್ತೊಂದು ಹೊಡೆತ ನೀಡಿದ್ದಾರೆ.