Asianet Suvarna News Asianet Suvarna News

ಬಿಜೆಪಿ ಅಲ್ಲ , ಕಲ್ಲಡ್ಕ ಭಟ್ ಎದುರಾಳಿ : ರಮಾನಾಥ ರೈ

ಬಂಟ್ವಾಳ ಕ್ಷೇತ್ರದಿಂದ ಸತತ ಏಳು ಬಾರಿ ಸ್ಪರ್ಧಿಸಿ, ಆರು ಸಲ ಗೆಲುವು ಕಂಡಿರುವ ಕಾಂಗ್ರೆಸ್ಸಿನ ಹಿರಿಯ ನಾಯಕ, ಹಾಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಈಗ ಎಂಟನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

Ramanath Rai Contest Against Kalladka Prabhakar Bhat

ಮಂಗಳೂರು : ಬಂಟ್ವಾಳ ಕ್ಷೇತ್ರದಿಂದ ಸತತ ಏಳು ಬಾರಿ ಸ್ಪರ್ಧಿಸಿ, ಆರು ಸಲ ಗೆಲುವು ಕಂಡಿರುವ ಕಾಂಗ್ರೆಸ್ಸಿನ ಹಿರಿಯ ನಾಯಕ, ಹಾಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಈಗ ಎಂಟನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಎರಡು ವರ್ಷಗಳಲ್ಲಿ ಸಂಭವಿಸಿದ ನಾಲ್ಕು ಹತ್ಯೆಗಳು, ಕಲ್ಲಡ್ಕ ಹಾಗೂ ಪುಣಚ ಶಾಲೆಗೆ ಕೊಲ್ಲೂರು ದೇವಸ್ಥಾನದಿಂದ ಲಭಿಸುತ್ತಿದ್ದ ಅನುದಾನ ಸ್ಥಗಿತ, ಹಿರಿಯ ಕಾಂಗ್ರೆಸ್ಸಿಗ ಜನಾರ್ದನ ಪೂಜಾರಿ ಬಗ್ಗೆ ನಿಂದನೆ ವಿವಾದಗಳು ಈ ಬಾರಿಯ ಚುನಾವಣೆಯಲ್ಲಿ ರೈ ಅವರಿಗೆ ಪ್ರಮುಖ ಸವಾಲಾಗಿ ಕಾಡುತ್ತಿವೆ.

1985ರಿಂದಲೂ ಚುನಾವಣೆಗೆ ಸ್ಪರ್ಧಿಸುತ್ತಾ ಬಂದಿರುವ ರಮಾನಾಥ ರೈ, 2004ರ ಚುನಾವಣೆ ಹೊರತುಪಡಿಸಿ ಮಿಕ್ಕ ಎಲ್ಲ ಸಂದರ್ಭಗಳಲ್ಲೂ ಜಯಭೇರಿ ಬಾರಿಸಿದ್ದಾರೆ. ಅವರ ಎದುರಾಳಿ ಬಿಜೆಪಿ ಅಭ್ಯರ್ಥಿ ಎನ್ನುವುದಕ್ಕಿಂತ ಆರ್‌ಎಸ್ ಎಸ್ ಹಿರಿಯ ಮುಖಂಡ ಡಾ| ಕಲ್ಲಡ್ಕ ಪ್ರಭಾಕರ್ ಭಟ್ ಎನ್ನುವುದು ಸೂಕ್ತ. ಕಳೆದ ಬಾರಿ ಈ ಕ್ಷೇತ್ರದಲ್ಲಿ ಹೊಸ ಮುಖವನ್ನು ರೈ ಅವರ ವಿರುದ್ಧ ಬಿಜೆಪಿ ಕಣಕ್ಕೆ ಇಳಿಸಿತ್ತು.

ಆದರೆ ತಮ್ಮ ಎದುರಾಳಿ ಪ್ರಭಾಕರ ಭಟ್ ಎಂದು ರಮಾನಾಥ ರೈ ಪ್ರಚಾರ ಮಾಡಿದ್ದರು. ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಅವರ ಪ್ರಚಾರ ಪರಿಣಾಮ ಬೀರಿ ರೈ ಆಯ್ಕೆಯಾಗಿದ್ದರು. ಈ ಬಾರಿ ಗೆಲುವಿಗೆ ರೈ ಅವರು ಹೆಚ್ಚು ಶ್ರಮ ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಚಿವರು ಸಾಕಷ್ಟು ವಿವಾದಗಳಲ್ಲಿ ಸಿಲುಕಿ ಬಿಸಿ ಅನುಭವಿಸಿದ್ದಾರೆ. ಹರೀಶ್ ಪೂಜಾರಿ, ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳ, ಎಸ್‌ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಸೇರಿದಂತೆ ಎರಡು ವರ್ಷದಲ್ಲಿ ನಾಲ್ವರ ಕೊಲೆ ನಡೆದು ರಾಜಕೀಯ ಕೆಸರೆರಚಾಟ ಭರ್ಜರಿಯಾಗಿಯೇ ಆಗಿತ್ತು.

ಎಸ್ಪಿಯಾಗಿದ್ದ ಭೂಷಣ್ ಬೊರಸೆ ಅವರನ್ನು ಕಚೇರಿಗೆ ಕರೆಸಿ ಆರ್‌ಎಸ್‌ಎಸ್ ಮುಖಂಡರನ್ನು ಬಂಧಿಸುವಂತೆ ಸಚಿವರು ಸೂಚನೆ ನೀಡಿದ ವಿಡಿಯೊ ವೈರಲ್ ಆಗಿ ಸಚಿವರಿಗೆ ಮುಜುಗರ ಸೃಷ್ಟಿಸಿತ್ತು. ಕಲ್ಲಡ್ಕ ಮತ್ತು ಪುಣಚ ಶಾಲೆಗೆ ಕೊಲ್ಲೂರು ದೇವಸ್ಥಾನದಿಂದ ಸಿಗುತ್ತಿದ್ದ ಬಿಸಿಯೂಟದ ಅನುದಾನವನ್ನು ಸಚಿವ ರೈ ಅವರ ಸೂಚನೆ ಮೇರೆಗೆ ಸ್ಥಗಿತಗೊಳಿಸಿದ್ದು, ಹಿಂದೂ ವಿರೋಧಿ ಎಂಬ ಹಣೆಪಟ್ಟಿಗೆ ಕಾರಣವಾಯಿತು. ಈ ಮಧ್ಯೆ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಬಲಗೈ ಬಂಟ ಹರಿಕೃಷ್ಣ ಬಂಟ್ವಾಳ್ ಬಿಜೆಪಿ ಪಾಳೆಯ ಸೇರಿಕೊಂಡು ರಮಾನಾಥ ರೈ ವಿರುದ್ಧ ಭ್ರಷ್ಟಾಚಾರ ಆರೋಪಗಳ ಸುರಿಮಳೆ ಮಾಡಿದರು.

ಅದು ಫಲಕಾರಿಯಾಗದಾಗ ಜನಾರ್ದನ ಪೂಜಾರಿ ಅವರನ್ನು ಸಚಿವ ರೈ ನಿಂದಿಸಿದರು ಎಂದು ಬಹಿರಂಗ ಆರೋಪ ಮಾಡತೊಡಗಿದರು. ಇದು ಸಚಿವ ರೈ ಅವರಿಗೆ ಸಾಕಷ್ಟು ಹೊಡೆತ ಉಂಟು ಮಾಡಿತು. ಈ ಆರೋಪವನ್ನು ನಿರಾಕರಿಸಿದರೂ ವೇದಿಕೆ ಸಿಕ್ಕಿದಲ್ಲೆಲ್ಲ ಹರಿಕೃಷ್ಣ ಬಂಟ್ವಾಳ್ ಈ ಘಟನೆಯನ್ನು ನೆನಪಿಸುವುದನ್ನು ಬಿಡಲಿಲ್ಲ. ಇದರಿಂದ ಬಿಲ್ಲವ ಸಮುದಾಯದಲ್ಲಿ ರಮಾನಾಥ ರೈ ವರ್ಚಸ್ಸಿಗೆ ಕೊಂಚ ಕುಂದುಂಟಾಯಿತು. ಒಂದು ಹಂತದಲ್ಲಿ ಆರೋಪಗಳಿಗೆ ಉತ್ತರಿಸಿ ಸುಸ್ತಾದ ಸಚಿವ ರೈ, ಎಲ್ಲವನ್ನೂ ಮತದಾರರು, ದೇವರು ನೋಡಿಕೊಳ್ಳುತ್ತಾರೆ ಎಂದು ಕೈಚೆಲ್ಲಿದರು.

ಇಷ್ಟೆಲ್ಲದರ ನಡುವೆಯೂ ರಮಾನಾಥ ರೈ ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸಿದ್ದಾರೆ. ಕೋಮುವಾದದ ವಿರುದ್ಧ ಹಾಗೂ ಅಭಿವೃದ್ಧಿ ಪರವಾಗಿ ತಮ್ಮನ್ನು ಬೆಂಬಲಿಸುವಂತೆ ಕ್ಷೇತ್ರದ ಜನತೆಯನ್ನು ಕೋರುತ್ತಿದ್ದಾರೆ. ಶಾಂತಿಯ ಪರವಾಗಿ ಸಾಮರಸ್ಯದ ನಡಿಗೆಯನ್ನು ಮಾಡಿದ್ದಾರೆ.

ಈ ಬಾರಿಯೂ ರಮಾನಾಥ ರೈ ಅವರಿಗೆ ಎದುರಾಳಿ ಬಿಜೆಪಿಯ ರಾಜೇಶ್ ನಾಯ್ಕ್. ಕಳೆದ ಬಾರಿ ಪರಾಭವಗೊಂಡಿದ್ದರೂ ರಾಜೇಶ್ ನಾಯ್ಕ್ ಕ್ಷೇತ್ರದಲ್ಲಿ ಪ್ರತಿ ಮನೆಗಳ ಭೇಟಿಯನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ. ಒಂದರ್ಥದಲ್ಲಿ ಚುನಾವಣಾ ಪ್ರಚಾರದ ಮುಂಚೂಣಿಯಲ್ಲಿದ್ದಾರೆ.

ಸಿಪಿಎಂ ಅಥವಾ ಜೆಡಿಎಸ್ ಇಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಯೋಚನೆಯಲ್ಲಿವೆ. ಎಸ್‌ಡಿಪಿಐ ಈಗಾಗಲೇ ಅಭ್ಯರ್ಥಿಯನ್ನು ಘೋಷಿಸಿದೆ. ಉಳಿದವರ ಸ್ಪರ್ಧೆ ಇಲ್ಲಿ ನಗಣ್ಯವಾದರೂ ಮುಸ್ಲಿಂ ಮತಗಳು ವಿಭಜನೆಗೊಂಡರೆ ರಮಾನಾಥ ರೈ ಅವರು ಗೆಲುವಿಗೆ ಏದುಸಿರು ಬಿಡಬೇಕಾಗಬಹುದು.

Follow Us:
Download App:
  • android
  • ios