ರಾಮನಗರ: ತಮ್ಮ ಅಭ್ಯರ್ಥಿ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದರೂ ಧೃತಿಗೆಡದ ಬಿಜೆಪಿ ಕಾರ್ಯಕರ್ತರು ನೂತನ ತಂತ್ರಕ್ಕೆ ಮುಂದಾಗಿದ್ದಾರೆ. 

ಚಂದ್ರಶೇಖರ್ ಸ್ಪರ್ಧಾ ಕಣದಿಂದ ಹಿಂದೆ ಸರಿದರೆ ಏನಂತೆ ಅವರ ಬದಲಿಗೆ ಪಕ್ಷಕ್ಕೆ ಮತ ನೀಡಿ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತದಾರರನ್ನು ಓಲೈಸುವ ಯತ್ನಕ್ಕೆ ಮುಂದಾಗಿದ್ದಾರೆ. ಚಂದ್ರಶೇಖರ್ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುತ್ತಿದ್ದಂತೆ ಸ್ಥಳೀಯ ಬಿಜೆಪಿ ಮುಖಂಡರೆಲ್ಲ ಒಂದಾಗಿ ನೂತನ ಕರಪತ್ರಗಳನ್ನು ಮುದ್ರಿಸಿದ್ದಾರೆ. 

ಮತಯಂತ್ರದ ಮಾದರಿಯಂತಿರುವ ಕರಪತ್ರದಲ್ಲಿ ಕ್ರಮ ಸಂಖ್ಯೆ 2ರಲ್ಲಿ ಅಭ್ಯರ್ಥಿಯ ಹೆಸರಿನ ಬದಲು ‘ದೇಶ ಮೊದಲು’ ಎಂದು ಹಾಗೂ ಅಭ್ಯರ್ಥಿಯ ಭಾವಚಿತ್ರ ಇರುವ ಸ್ಥಳದಲ್ಲಿ ಕಮಲದ ಚಿಹ್ನೆ ಎಂದು ಮುದ್ರಿಸಲಾಗಿದೆ. 

ಇದರ ಜತೆಗೆ ಪ್ರಧಾನಿ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ರಾಷ್ಟ್ರ ಮತ್ತು ರಾಜ್ಯ ನಾಯಕರ ಭಾವಚಿತ್ರಗಳಿವೆ. ನ. 3ರಂದು ನಡೆಯುವ ರಾಮನಗರ ಕ್ಷೇತ್ರ ಉಪ ಚುನಾವಣೆಯಲ್ಲಿ ಬಿಜೆಪಿಯ ಕಮಲದ ಗುರುತಿಗೆ ಮತದಾನ ಮಾಡುವ ಮೂಲಕ ನಂಬಿಕೆ ದ್ರೋಹಿಗಳಿಗೆ, ದಾರಿ ತಪ್ಪಿಸುವವರಿಗೆ ತಕ್ಕಪಾಠ ಕಲಿಸಬೇಕೆಂದು ವಿನಂತಿಸಿದ್ದಾರೆ.