ಬೆಂಗಳೂರು :  ಸಚಿವ ಸ್ಥಾನ ವಂಚಿತ ಕಾಂಗ್ರೆಸ್‌ ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಅವರಿಗೆ ನ್ಯಾಯ ದೊರ​ಕಿ​ಸಿ​ಕೊ​ಡು​ವಂತೆ ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌ ಹಾಗೂ ರಾಜ್ಯ ಉಸ್ತು​ವಾರಿ ಅವ​ರನ್ನು ಒತ್ತಾ​ಯಿ​ಸಲು ರೆಡ್ಡಿ ಬೆಂಬ​ಲಿಗ ಪಾಲಿಕೆ ಸದ​ಸ್ಯರು ಹಾಗೂ ಪಕ್ಷದ ಪದಾ​ಧಿ​ಕಾ​ರಿ​ಗಳು ನಿರ್ಧ​ರಿ​ಸಿದ್ದಾರೆ. ಒಂದು ವೇಳೆ ರೆಡ್ಡಿ ಅವರಿಗೆ ಸಚಿವ ಸ್ಥಾನ ದೊರೆಯದಿದ್ದಲ್ಲಿ ತಮ್ಮ ಹುದ್ದೆ​ಗ​ಳಿಗೆ ಸಾಮೂಹಿಕ ರಾಜೀ​ನಾಮೆ ನೀಡುವುದಾಗಿಯೂ ಪ್ರಕಟಿಸಿದ್ದಾರೆ.

ಕರ್ನಾಟಕ ರೆಡ್ಡಿ ಜನಸಂಘ, ಬಿಟಿಎಂ ಲೇಔಟ್‌ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರದ ಬಿಬಿಎಂಪಿಯ ಕಾಂಗ್ರೆಸ್‌ ಸದಸ್ಯರು ಹಾಗೂ ರಾಮಲಿಂಗಾರೆಡ್ಡಿ ಬೆಂಬಲಿತ ಕಾಂಗ್ರೆಸ್‌ ಪದಾಧಿಕಾರಿಗಳು ಸೋಮವಾರ ಖಾಸಗಿ ಹೋಟೆಲ್‌ನಲ್ಲಿ ನಡೆ​ಸಿದ ಸಭೆ​ಯಲ್ಲಿ ಈ ತೀರ್ಮಾನ ಕೈಗೊ​ಳ್ಳ​ಲಾ​ಗಿದೆ.

ಸಭೆ ಬಳಿಕ ಈ ವಿಷಯ ತಿಳಿ​ಸಿದ ಬಿಬಿಎಂಪಿ ಮಾಜಿ ಮೇಯರ್‌ ಮಂಜುನಾಥ್‌ ರೆಡ್ಡಿ, ಬೆಂಗಳೂರಿನಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಹೆಚ್ಚಲು ಮತ್ತು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅತ್ಯಧಿಕ ಸ್ಥಾನ ಗಳಿಸುವುದರಲ್ಲಿ ರಾಮಲಿಂಗಾರೆಡ್ಡಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ, ಕಾಂಗ್ರೆಸ್‌ ವರಿಷ್ಠರು ರಾಮಲಿಂಗಾರೆಡ್ಡಿ ಅವರನ್ನು ಕಡೆಗಣಿಸಿದ್ದಾರೆ. ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ದೊಡ್ಡ ನಷ್ಟಆಗಲಿದೆ ಎಂದು ಎಚ್ಚರಿಸಿದರು.

ಕಾಂಗ್ರೆಸ್‌ ವರಿಷ್ಠರು ಜಾತಿವಾರು ಸಚಿವ ಸ್ಥಾನ ಹಂಚಿಕೆ ಮಾಡಲಾಗಿದೆ ಎಂದು ಕೆಲ ಮಾಧ್ಯಮಗಳ ಮೂಲಕ ಹೇಳಿಕೆ ನೀಡಿದ್ದಾರೆ. ಆದರೆ, ರಾಮಲಿಂಗಾರೆಡ್ಡಿ ಅವರು ಒಂದು ಜಾತಿ ಧರ್ಮಕ್ಕೆ ಸೇರಿದ ನಾಯಕರಲ್ಲ. ಅವರಿಗೆ ಎಲ್ಲ ಜಾತಿ ಧರ್ಮದಲ್ಲಿ ಬೆಂಬಲಿಗರಿದ್ದಾರೆ. ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಮೈತ್ರಿ ಸರ್ಕಾರ ಹಾಗೂ ಬಿಬಿಎಂಪಿ ಮೇಲೆಯೂ ಪರಿಣಾಮ ಬೀರಲಿದೆ ಎಂದು ಹೇಳಿದರು.

ಕರ್ನಾಟಕ ರೆಡ್ಡಿ ಜನಸಂಘದ ಅಧ್ಯಕ್ಷ ಎಚ್‌.ಎನ್‌.ವಿಜಯರಾಘವ ರೆಡ್ಡಿ ಮಾತನಾಡಿ, ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಕಾಂಗ್ರೆಸ್‌ ಪಕ್ಷ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾರೀ ನಷ್ಟಅನುಭವಿಸಲಿದೆ. ಕಳೆದ 40 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿಸಿರುವ ಅವರು, ಸತತವಾಗಿ 7 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಣ್ಣ ಕೈಗಾರಿಕೆ, ಗೃಹ ಇಲಾಖೆ ಸೇರಿದಂತೆ ಹಲವು ಮಹ್ವತದ ಖಾತೆಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ. ಆದರೂ ಅವರಿಗೆ ಸಚಿವ ಸ್ಥಾನ ನೀಡದೆ ಅವಮಾನ ಮಾಡಲಾಗಿದೆ. ಇದರ ಪರಿಣಾಮವನ್ನು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಎದುರಿಸಲಿದೆ ಎಂದು ಹೇಳಿದರು.

ರೆಡ್ಡಿ ಜನಸಂಘದ ಉಪಾಧ್ಯಕ್ಷ ಡಿ.ಎನ್‌.ಲಕ್ಷ್ಮಣ್‌ ರೆಡ್ಡಿ ಮಾತನಾಡಿ, ಮೈತ್ರಿ ಸರ್ಕಾರ ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು. ನಗರದಲ್ಲಿ ರೆಡ್ಡಿ ಜನಾಂಗ ಪ್ರಬಲವಾಗಿದೆ ಎಂಬುದನ್ನು ಕಾಂಗ್ರೆಸ್‌ ವರಿಷ್ಠರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮನವಿ ಸಲ್ಲಿಕೆಗೆ ತೀರ್ಮಾನ:  ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೆ ಮನವಿ ಸಲ್ಲಿಕೆ ಮಾಡುವುದಕ್ಕೆ ತೀರ್ಮಾನಿಸಲಾಯಿತು. ಮಾಜಿ ಮೇಯರ್‌ ಮಂಜುನಾಥ್‌ ರೆಡ್ಡಿ, ಬನಶಂಕರಿ ವಾರ್ಡ್‌ನ ಸದಸ್ಯ ಎಸ್‌.ಅನ್ಸರ್‌ ಪಾಷಾ, ಕೋರಮಂಗಲ ವಾರ್ಡ್‌ನ ಎಂ.ಚಂದ್ರಪ್ಪ ರೆಡ್ಡಿ, ಗುರಪ್ಪನಪಾಳ್ಯ ವಾರ್ಡ್‌ ಮಹಮ್ಮದ್‌ ರಿಜ್ವಾನ್‌ ನವಾಬ್‌, ಬಿಬಿಎಂಪಿ ಮಾಜಿ ಸದಸ್ಯ ಉದಯ ಶಂಕರ್‌ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಇದೇ ವೇಳೆ, ಆನೇಕಲ್‌ ಬ್ಲಾಕ್‌ ಕಾಂಗ್ರೆಸ್‌ ಸದಸ್ಯರು ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ನಂತರ ಮಾತನಾಡಿದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾಜಣ್ಣ, ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ನಾವೆಲ್ಲ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಹೇಳಿದರು.

ಬಿಜೆಪಿ ಶಾಸಕರಿಂದ ರೆಡ್ಡಿ ಭೇಟಿ

ಸಚಿವ ಸ್ಥಾನ ವಂಚಿತ ರಾಮ​ಲಿಂಗಾ​ರೆ​ಡ್ಡಿ ಅವ​ರನ್ನು ಬಿಜೆ​ಪಿಯ ಶಾಸಕ ಸತೀಶ್‌ ರೆಡ್ಡಿ ಅವರು ಭೇಟಿ ಮಾಡಿ ಮಾತು​ಕತೆ ನಡೆ​ಸಿ​ದ್ದಾರೆ ಎಂದು ರಾಮ​ಲಿಂಗಾ​ರೆಡ್ಡಿ ಪುತ್ರಿಯೂ ಆದ ಬಿಟಿಎಂ ಲೇಔಟ್‌ ಕಾಂಗ್ರೆಸ್‌ ಶಾಸ​ಕಿ ಸೌಮ್ಯಾ ರೆಡ್ಡಿ ತಿಳಿ​ಸಿ​ದ್ದಾ​ರೆ. ಸೋಮ​ವಾರ ಮಾಧ್ಯ​ಮ​ಗ​ಳಿಗೆ ಈ ವಿಷಯ ತಿಳಿ​ಸಿದ ಅವರು, ಚರ್ಚೆಯ ವಿವ​ರ​ವನ್ನು ಬಹಿ​ರಂಗ​ಪ​ಡಿ​ಸಲು ನಿರಾ​ಕ​ರಿ​ಸಿ​ದರು. ಸಚಿವ ಸ್ಥಾನ ಕೈ ತಪ್ಪಿ​ದ್ದ​ರಿಂದ ತೀವ್ರ ಅಸ​ಮಾ​ಧಾ​ನ​ಗೊಂಡಿ​ರುವ ರಾಮ​ಲಿಂಗಾ​ರೆಡ್ಡಿ ಅವ​ರನ್ನು ಬಿಜೆಪಿ ಶಾಸ​ಕರು ಭೇಟಿ ಮಾಡಿ​ರು​ವುದು ರಾಜ​ಕೀಯ ವಲ​ಯ​ದಲ್ಲಿ ಕುತೂ​ಹಲ ಕೆರ​ಳಿ​ಸಿ​ದೆ.