ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ರಾಮಚಂದ್ರಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿ ಹೆಸರನ್ನು ಅನಗತ್ಯವಾಗಿ ಎಳೆದುತಂದು ಶ್ರೀಗಳ ಚಾರಿತ್ರ್ಯ ಹರಣ ಮಾಡುವ ಪ್ರಯತ್ನ ಖಂಡನೀಯ ಎಂದು ಮಠದ ಪ್ರಕಟಣೆ ತಿಳಿಸಿದೆ.

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ರಾಮಚಂದ್ರಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿ ಹೆಸರನ್ನು ಅನಗತ್ಯವಾಗಿ ಎಳೆದುತಂದು ಶ್ರೀಗಳ ಚಾರಿತ್ರ್ಯ ಹರಣ ಮಾಡುವ ಪ್ರಯತ್ನ ಖಂಡನೀಯ ಎಂದು ಮಠದ ಪ್ರಕಟಣೆ ತಿಳಿಸಿದೆ.

ಪ್ರಕರಣದ ಎಸ್‌ಐಟಿ ತನಿಖಾ ತಂಡ ಫೋನ್ ಕರೆಗಳ ಆಧಾರದ ಮೇಲೆ ರಾಘವೇಶ್ವರ ಸ್ವಾಮೀಜಿ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕಾನೂನು ಪ್ರಕಾರ ಪ್ರಕರಣ ಸಂಬಂಧ ಸಾಕ್ಷಿ, ಪುರಾವೆ ಹಾಗೂ ಕುರುಹುಗಳ ಬೆನ್ನು ಹತ್ತಿ ತನಿಖೆ ಮಾಡಬೇಕು. ಅಭಿಪ್ರಾಯ ಸಂಗ್ರಹದ ಮೇಲೆ ತನಿಖೆಗೆ ಮಾಡಲು ಅವಕಾಶವಿಲ್ಲ ಎಂದು ಹೇಳಲಾಗಿದೆ.

ಈ ಹಿಂದೆ ಶ್ರೀಗಳ ವಿರುದ್ಧ ಸುಳ್ಳು ಆರೋಪ ಮಾಡಿದ್ದ ವ್ಯಕ್ತಿಗಳು ಗೌರಿ ಲಂಕೇಶ್ ಹತ್ಯೆಯಾದ ಮೂರು ದಿನಗಳ ಬಳಿಕ ತನಿಖಾ ತಂಡವನ್ನು ಭೇಟಿ ಮಾಡಿ ಶ್ರೀಗಳ ಹೆಸರನ್ನು ಪ್ರಸ್ತಾಪಿಸಿ ಆರೋಪ ಮಾಡಿದ್ದಾರೆ ಎಂದು ಮಾಧ್ಯಮಗಳ ವರದಿಯಿಂದ ತಿಳಿದು ಬಂದಿದೆ.

ಇದು ಶ್ರೀಗಳಿಗೆ ತೊಂದರೆ ಕೊಡುವ ಒಂದು ವ್ಯವಸ್ಥಿತ ತಂತ್ರವೆಂಬುದು ಮೇಲ್ನೋಟಕ್ಕೆ ಬಂದಿದೆ. ಅಲ್ಲದೆ, ನಿಜವಾದ ಕೊಲೆಗಾರರನ್ನು ಬಚಾವ್ ಮಾಡುವ ಉದ್ದೇಶವೂ ಇರಬಹುದು. ಈ ಬಗ್ಗೆ ತನಿಖಾ ತಂಡ ಪತ್ತೆ ಹಚ್ಚಬೇಕು ಎಂದು ಆಗ್ರಹಿಸಲಾಗಿದೆ.

ಜೀವ ಜಗತ್ತನ್ನು ಗೌರವಿಸುವ, ಪಶು ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಎಂದು ಶ್ರೀಗಳು ನಂಬಿದ್ದಾರೆ ಎಂದು ತಿಳಿಸಲಾಗಿದೆ.