1) ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಮುಂದಿನ ಲೋಕಸಭಾ ಚುನಾವಣೆಗೂ ಮುನ್ನವೇ ರಾಮಮಂದಿರ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಒತ್ತಾಯಿಸುತ್ತಿವೆ..

ರಾಮಮಂದಿರ ನಿರ್ಮಾಣ ಬಹುಶಃ ಬಿಜೆಪಿಯ ಪ್ರಾಣಾಳಿಕೆ. ಆರ್‌ಎಸ್‌ಎಸ್‌, ವಿಎಚ್‌ಪಿ, ಶಿವಸೇನಾ ಬೇಡಿಕೆ ಮುಂದಿಡುತ್ತಿವೆ. ಆದರೆ ಇದು ಎನ್‌ಡಿಎ ಸರ್ಕಾರದ ಅಜೆಂಡಾ ಅಲ್ಲ. ಸಂವಿಧಾನವೇ ಧರ್ಮ, ಪಾರ್ಲಿಮೆಂಟೇ ದೇವಾಲಯ ಅಂತ ನರೇಂದ್ರ ಮೊದಿ ಅವರೇ ಹೇಳಿದ್ದಾರೆ. ಅವರು ರಾಮಮಂದಿರ-ಬಾಬ್ರಿ ಮಸೀದಿ ಬಗ್ಗೆ ಎಂದೂ ಮಾತನಾಡಿಲ್ಲ. ಬಿಜೆಪಿ ಈ ಬಗ್ಗೆ ಮಾತನಾಡುತ್ತಿರಬಹುದು. ಆದರೆ ಸರ್ಕಾರದ ಮುಖ್ಯ ಗುರಿ ಅಭಿವೃದ್ಧಿ ಮತ್ತು ಸಮಾನತೆ. ಸಂವಿಧಾನದಲ್ಲಿ ಸುಗ್ರೀವಾಜ್ಞೆಗೆ ಅವಕಾಶವಿಲ್ಲ. ಸುಪ್ರೀಂಕೋರ್ಟ್‌ ನಿರ್ಣಯಕ್ಕೆ ನಮ್ಮ ಪಕ್ಷ ಬದ್ಧ.

ಎಲ್‌.ಕೆ ಅಡ್ವಾಣಿ ರಥಯಾತ್ರೆ ಮಾಡಿದ್ದಾಗ ನರಸಿಂಹರಾವ್‌ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಆಗ ಸರ್ಕಾರ ವಿವಾದಿತ ಜಾಗವನ್ನು ವಶಕ್ಕೆ ಪಡೆದುಕೊಳ್ಳಲು ತೀರ್ಮಾನಿಸಿತು. ವಿವಾದಿತ ಭೂಪ್ರದೇಶವು ಕೇಂದ್ರ ಸರ್ಕಾರದ ವ್ಯಾಪ್ತಿಗೆ ತರುವಂತೆ ಸುಗ್ರೀವಾಜ್ಞೆಯನ್ನೂ ಹೊರಡಿಸಿತು. ಬಾಬ್ರಿ ಮಸೀದಿ ಮತ್ತು ಆರ್‌ಎಸ್‌ಎಸ್‌ ಪ್ರತಿಭಟನೆ ನಡೆಸಿದವು. ಅದೆಷ್ಟುತೀವ್ರವಾಗಿತ್ತೆಂದರೆ ಸರ್ಕಾರ ತನ್ನ ಆದೇಶವನ್ನು ಹಿಂಪಡೆಯಿತು. ಪರಿಣಾಮ ಏನಾಯಿತು ಎಲ್ಲರಿಗೂ ಗೊತ್ತಿದೆ. ಆದರೆ ಇವತ್ತು ನನಗೆ ಆ ರೀತಿಯ ಅನ್‌ಕಂಫರ್ಟಬಲ್‌ ಫೀಲಿಂಗ್‌ ಇಲ್ಲ. ಏಕೆಂದರೆ, ಸರ್ಕಾರ ಈ ಬಗ್ಗೆ ಮಾತನಾಡುತ್ತಿಲ್ಲ. ಸಂಪೂರ್ಣವಾಗಿ ಸುಪ್ರೀಂಕೋರ್ಟ್‌ ನಿರ್ಣಯಕ್ಕೆ ಬಿಟ್ಟಿದೆ. ಬಿಜೆಪಿ, ವಿಎಚ್‌ಪಿ, ಶಿವಸೇನ ಈ ಬಗ್ಗೆ ಮಾತನಾಡುತ್ತಿವೆಯೇ ಹೊರತು ಕ್ಯಾಬಿನೆಟ್‌ನಲ್ಲಿ ಯಾವತ್ತೂ ಚರ್ಚೆಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯೂ ಇದನ್ನು ಬೆಂಬಲಿಸುವುದಾಗಿ ಎಂದೂ ಹೇಳಿಲ್ಲ.

ಇನ್ನೊಂದು ವಿಷಯ ಎಂದರೆ ಈ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎನ್ನಲಾಗುತ್ತಿದೆ. ಆದರೆ ಬಾಬ್ರಿ ಮಸೀದಿ ಧ್ವ ಂಸವಾಗಿದ್ದು 1992ರಲ್ಲಿ. ಒಂದೊಮ್ಮೆ ರಾಜಕೀಯ ಲಾಭಕ್ಕೇ ಬಳಸಿಕೊಳ್ಳುತ್ತಿದ್ದರೆ ಅದಾದ 25 ವರ್ಷ ತಡವಾಗಿ ಏಕೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು?

2) ಬಿಹಾರ ಸೀಟು ಹಂಚಿಕೆ ಒಪ್ಪಂದ ವಿಷಯದಲ್ಲಿ ನಿಮ್ಮ ನಿಲುವೇನು? 2014ರಲ್ಲಿ ನೀವು ಮಾಡಿದಂತೆ ಎಲ್‌ಜೆಪಿ 7 ಸೀಟುಗಳಿಗಾಗಿ ಪಟ್ಟು ಹಿಡಿಯುತ್ತದೆಯೇ?

ಬಿಹಾರ ಸೀಟು ಹಂಚಿಕೆ ವಿಷಯದಲ್ಲಿ ನಾವು ತ್ಯಾಗ ಮಾಡಲು ಸಿದ್ಧರಿದ್ದೇವೆ. ಬಿಜೆಪಿ ಕೂಡ 22ಸೀಟುಗಳಲ್ಲಿ 5-6 ಸೀಟುಗಳನ್ನು ಬಿಟ್ಟುಕೊಡಲು ತಯಾರಿದೆ. ಬಿಜೆಪಿಯೂ ಬಿಟ್ಟುಕೊಡಲು ಸಿದ್ಧವಿರುವಾಗ ನಾವೇಕೆ ಹಠ ಮಾಡಬೇಕು? ಸದ್ಯ ನಿತೀಶ್‌ಕುಮಾರ್‌ ಕೂಡ ಮೈತ್ರಿ ಸೇರಿದ್ದಾರೆ. ನಾವೆಲ್ಲಾ ಒಂದಾಗಿದ್ದೇವೆ. ಬಿಹಾರದಲ್ಲಿ ನಿತೀಶ್‌ ಕುಮಾರ್‌ ಅವರು ಪ್ರಮುಖರು. ಅವರು ನಮ್ಮ ಮೈತ್ರಿಗೆ ಬಲ ನೀಡಲಿದ್ದಾರೆ.

3) ಸುಷ್ಮಾ ಸ್ವರಾಜ್‌ ಮತ್ತು ಉಮಾ ಭಾರತಿ ಚುನಾವಣಾ ರಾಜಕೀಯದಿಂದ ಹೊರಬಂದು ಇನ್ನುಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ ಎಂದಿದ್ದಾರೆ. ನೀವು?

ರಾಜಕೀಯದಿಂದ ಹೊರಗುಳಿಯುವ ಪ್ರಶ್ನೆಯೇ ಇಲ್ಲ. ನಾನು ಯಾವಾಗಲೂ ಸಕ್ರಿಯ ರಾಜಕಾರಣದಲ್ಲಿರುತ್ತೇನೆ. ಆದರೆ 2019ರ ಚುನಾವಣೆಗೆ ಸ್ಪರ್ಧಿಸಬೇಕಾ ಇಲ್ಲವಾ ಎಂಬ ಬಗ್ಗೆ ನಿರ್ಧರಿಸಿಲ್ಲ. 1977ರಲ್ಲಿ ಹಜಿಪುರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಸಂಸದನಾಗಿದ್ದೆ. ಅಲ್ಲಿಂದಲೂ ಸಾಕಷ್ಟುಹೋರಾಡಿದ್ದೇನೆ. ನನ್ನ ಪಕ್ಷವನ್ನೂ ಇನ್ನೂ ಎತ್ತರಕ್ಕೆ ಕೊಂಡೊಯ್ಯಬೇಕಾದ ಜವಾಬ್ದಾರಿ ನನ್ನ ಮೇಲಿದೆ. ಸಂಸತ್‌ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬುದು ನಮ್ಮ$ಪಕ್ಷದ ಅಭಿಮತ. ಈ ಬಗ್ಗೆ ಹಜಿಪುರ ಜನರು ಭಾವನಾತ್ಮಕರಾಗಿದ್ದಾರೆ. ದಶಕಗಳಿಂದಲೂ ನನ್ನ ಮತ್ತು ಹಜಿಪುರ ಜನರ ನಡುವೆ ಒಂದು ರೀತಿ ಸಂಬಂಧ ಬೇರೂರಿದೆ. ಹಾಗಾಗಿ ಈ ಬಗ್ಗೆ ನಾನು ಇನ್ನೂ ಯೋಚಿಸುತ್ತಿದ್ದೇನೆ. ಆದರೆ ನನ್ನ ಮಗ ಚಿರಾಗ್‌ ಪಾಸ್ವಾನ್‌ ಜಮೂಯಿ ಕ್ಷೇತ್ರದಿಂದ 2019ಕ್ಕೆ ಸ್ಪರ್ಧಿಸುತ್ತಾನೆ.

4) ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಹೀಗಿರುವಾಗ 2019ರ ಚುನಾವಣೆಯ ರಾಜಕೀಯ ಸನ್ನಿವೇಶವನ್ನು ನೀವು ಹೇಗೆ ಕಾಣುತ್ತೀರಿ?

2019ರ ಲೋಕಸಭಾ ಚುನಾವಣೆಯಲ್ಲಿ ಸೀಟುಗಳಲ್ಲಿ ವ್ಯತ್ಯಾಸ ಉಂಟಾಗಬಹುದು. ಎನ್‌ಡಿಎ ಸೀಟುಗಳ ಸಂಖ್ಯೆ ಕಡಿಮೆಯಾಗಿ ಅವರ ಸೀಟುಗಳ ಸಂಖ್ಯೆ ಹೆಚ್ಚಬಹುದು. ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರವೇ ಮತ್ತೆ ಅಸ್ತಿತ್ವಕ್ಕೆ ಬರಲಿದೆ. ದೇಶದ ಜನತೆ ದುರ್ಬಲ ಪ್ರಧಾನಿಯನ್ನು ಬಯಸಲ್ಲ, ದೇಶವನ್ನು ದುರ್ಬಲಗೊಳಿಸಲ್ಲ. ಮೋದಿ ಇವರೆಡೂ ಅಂಶಗಳಿಂದಲೂ ಅಡ್ವಾಂಟೇಜ್‌ ಪಡೆಯುತ್ತಾರೆ. ವಿರೋಧ ಪಕ್ಷಗಳಲ್ಲಿ ಬಲಿಷ್ಠ ಅಭ್ಯರ್ಥಿಯೇ ಇಲ್ಲ. ರಾಹುಲ್‌ ಗಾಂಧಿ ಬೇರೆ ಯಾರೇ ನಾಯಕರು ಪ್ರಧಾನಿಯಾದರೂ ಅಭ್ಯಂತರ ಇಲ್ಲ ಎಂದಿದ್ದಾರೆ. ಆದರೆ ಬೇರೆ ಯಾರಿದ್ದಾರೆ? ರಾಹುಲ್‌ ಹೇಳಿದವರನ್ನು ಪ್ರಧಾನಿ ಮಾಡಲು ಬೇರೆಯವರು ತಯಾರಿದ್ದಾರಾ? ಇನ್ನು ಇತಿಹಾಸವನ್ನೇ ನೋಡುವುದಾದರೆ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಜಾರಿ ಮಾಡಿದರೂ ಕೂಡ ದೇಶದ ಜನತೆ ಮತ್ತೆ ಅವರನ್ನೇ ಪ್ರಧಾನಿಯಾಗಿ ಆಯ್ಕೆ ಮಾಡಿದ್ದರು. ಏಕೆಂದರೆ ಆಗ ಜನತಾ ಪಾರ್ಟಿ ದೃಢ ಸರ್ಕಾರವನ್ನು ನೀಡಲ್ಲ ಎಂಬುದು ಜನರಿಗೆ ಗೊತ್ತಿತ್ತು.

5) ಲಿಂಚಿಂಗ್‌, ಗೋಹತ್ಯೆ ಗಲಭೆ ಹೆಚ್ಚುತ್ತಿದೆ. ಬುಲಂದ್‌ಶಹರ್‌ನಲ್ಲಿನ ಪ್ರಕರಣವೇ ತಾಜಾ ಉದಾಹರಣೆ.

ರಾಜ್ಯ ಸರ್ಕಾರ ಇಂಥ ಪ್ರಕರಣಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾ ಕೃತ್ಯಕ್ಕಿಳಿಯುವವರ ಬಗ್ಗೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕೆಂದು ಮೋದಿ ಅವರು ಈಗಾಗಲೇ ಹೇಳಿದ್ದಾರೆ. ಕೇಂದ್ರ ಸರ್ಕಾರವೇ ಕಠಿಣ ಕ್ರಮಕ್ಕೆ ಸಿದ್ಧವಿರುವಾಗ ರಾಜ ಸರ್ಕಾರ ಏಕೆ ಹಿಂಜರಿಯಬೇಕು? ಇಂಥ ಘಟನೆಗಳು ಸರ್ಕಾರದ ಘನತೆಗೆ ಧಕ್ಕೆಯುಂಟು ಮಾಡುತ್ತವೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ದೇಶದ ಘನತೆಯನ್ನು ಕುಗ್ಗಿಸುತ್ತವೆ.

6) ನೀವು 6 ಪ್ರಧಾನಿಗಳ ಜೊತೆಗೆ ಕೆಲಸ ಮಾಡಿದ್ದೀರಿ. ನರೇಂದ್ರ ಮೋದಿ ಹೊರತಾಗಿ ಯಾವ ಪ್ರಧಾನಿ ನಿಮ್ಮ ಫೇವರಿಟ್‌?

ನಾನು ವಿ.ಪಿ ಸಿಂಗ್‌ ಅವರನ್ನು ಆಯ್ಕೆ ಮಾಡುತ್ತೇನೆ. ಅವರು ಐಡಿಯಾಲಜಿ ಇದ್ದ ವ್ಯಕ್ತಿ. ಅವರು ಕೇವಲ 11ತಿಂಗಳು ಪ್ರಧಾನಿಯಾಗಿ ಪ್ರಧಾನಿ ಕಾರ್ಯಲಯದಲ್ಲಿದ್ದರೂ ಪರಿಶಿಷ್ಟಜಾತಿ ಮತ್ತು ಹಿಂದುಳಿದ ವರ್ಗಗಳಿಗೆ ಮತ್ತು ಅಲ್ಪಸಂಖ್ಯಾತರಿಗಾಗಿ ಸಾಕಷ್ಟುಕೆಲಸ ಮಾಡಿದ್ದಾರೆ. ಇನ್ನು 2ನೇ ಫೇವರಿಟ್‌ ಎಚ್‌.ಡಿ ದೇವೇಗೌಡ. ನಾನು ಕ್ಯಾಬಿನೆಟ್‌ ಸೇರುವುದಕ್ಕೂ ಮೊದಲು ಅವರೊಂದಿಗೆ ಅಷ್ಟೇನೂ ಹತ್ತಿರದ ಸಂಬಂಧ ಇರಲಿಲ್ಲ. ಇನ್‌ಫ್ಯಾಕ್ಟ್ ಅವರನ್ನು ಪ್ರಧಾನಿಯಾಗಿಸಿದ್ದರಲ್ಲಿ ನನ್ನ ಪಾತ್ರವೂ ಇರಲಿಲ್ಲ. ಆದರೆ ಅವರೊಂದಿಗೆ ಕಾರ್ಯ ನಿರ್ವಹಿಸುವಾಗ ಅವರು ನನ್ನ ಮೇಲಿಟ್ಟಿದ್ದ ನಂಬಿಕೆಗೆ ಯಾವುದೂ ಸಾಟಿ ಇಲ್ಲ. ಅದನ್ನು ನಾನು ಈಗಲೂ ಆಗಾಗ ನೆನೆಸಿಕೊಳ್ಳುತ್ತೇನೆ.

7) ಎನ್‌ಡಿಎಯಲ್ಲಿ ನೀವೂ ಪ್ರಮುಖರು. ಆದರೆ ಅಕ್ಟೋಬರ್‌ನಲ್ಲಿ ಅಮಿತ್‌ ಶಾ ಮತ್ತು ನಿತೀಶ್‌ಕುಮಾರ್‌ ಸಮ ಸಂಖ್ಯೆಯಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾಗ ನೀವಿರಲಿಲ್ಲ. ಯಾಕೆ?

ಆ ಘೋಷಣೆಗೂ ಮುನ್ನ ಅಮಿತ್‌ ಶಾ ಒಟ್ಟಿಗೆ ನಡೆದ ಸಭೆಯಲ್ಲಿ ಬಿಹಾರದಲ್ಲಿ ಎನ್‌ಡಿಎಯ ನಾಲ್ಕೂ ಪಕ್ಷಗಳು ಒಂದು ಪತ್ರಿಕಾಗೋಷ್ಠಿ ನಡೆಸಿ ಅಂತಿಮ ನಡೆಯ ಬಗ್ಗೆ ಘೋಷಿಸಬೇಕು ಎಂದು ನಿರ್ಣಯವಾಗಿತ್ತು. ಉಪೇಂದ್ರ ಕುಶ್ವಾಹಾ ಇದನ್ನು ಹೇಳಿದ್ದರು. ಅನಂತರದಲ್ಲಿ ಅಮಿತ ಶಾ ಮತ್ತು ನಿತೀಶ್‌ಕುಮಾರ್‌ ಕೇವಲ ತಮ್ಮ ಪಾಲಿಸಿ ಬಗ್ಗೆ ಮಾತ್ರ ಘೋಷಿಸಿದ್ದರೆÜ ಹೊರತು ಎಷ್ಟುಸೀಟುಗಳು ಎಂಬುದನ್ನು ಹೇಳಿಲ್ಲ. ಸೀಟಿನ ವಿಚಾರದ ಬಗ್ಗೆ ನನ್ನ ಮಗ ಚಿರಾಗ್‌ ಪಾಸ್ವಾನ್‌ ಮಾತನಾಡುವುದಾಗಿ ಬಿಜೆಪಿಗೆ ಹೇಳಿದ್ದೇನೆ. 5 ರಾಜ್ಯಗಳ ಚುನಾವಣಾ ಫಲಿತಾಂಶಕ್ಕೂ ಮೊದಲು ಸೀಟು ಹಂಚಿಕೆ ಬಗ್ಗೆ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ.

-ರಾಮ್ ವಿಲಾಸ್ ಪಾಸ್ವಾನ್, ಕೇಂದ್ರ ಸಚಿವ, ಎಲ್‌ಜೆಪಿ ಅಧ್ಯಕ್ಷ