ಕಾಂಗ್ರೆಸ್‌ ಬೆಂಬಲ ಕೊಡದಿದ್ದರೂ ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನು ಹೂಡಲು ಜೆಡಿಎಸ್‌ ಸಜ್ಜಾಗಿದ್ದು, ಪಕ್ಷದ ಮುಖಂಡ ಬಿ.ಎಂ. ಫಾರೂಕ್‌ ಅವರನ್ನು ಪುನಃ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ.

ಬೆಂಗಳೂರು : ಕಾಂಗ್ರೆಸ್‌ ಬೆಂಬಲ ಕೊಡದಿದ್ದರೂ ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನು ಹೂಡಲು ಜೆಡಿಎಸ್‌ ಸಜ್ಜಾಗಿದ್ದು, ಪಕ್ಷದ ಮುಖಂಡ ಬಿ.ಎಂ. ಫಾರೂಕ್‌ ಅವರನ್ನು ಪುನಃ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ.

ಪಕ್ಷದ ಕಚೇರಿಯಲ್ಲಿ ಬುಧವಾರ ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಂಸದೀಯ ಮಂಡಳಿಯ ಸಭೆಯಲ್ಲಿ ಬಿ.ಎಂ.ಫಾರೂಕ್‌ ಅವರನ್ನು ರಾಜ್ಯಸಭೆ ಚುನಾವಣೆಗೆ ಇಳಿಸಲು ನಿರ್ಣಯ ಕೈಗೊಳ್ಳಲಾಗಿದೆ. ಕಳೆದ ರಾಜ್ಯಸಭೆ ಚುನಾವಣೆಯಲ್ಲೂ ಫಾರೂಕ್‌ ಸ್ಪರ್ಧಿಸಿ ಪರಾಭವಗೊಂಡಿದ್ದರು.

ವಿಧಾನಸಭೆಯಿಂದ ರಾಜ್ಯಸಭೆಗೆ ಇದೇ ತಿಂಗಳ 23ರಂದು ನಡೆಯುವ ಚುನಾವಣೆಗೆ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬೆಂಬಲ ನೀಡುವಂತೆ ಕಾಂಗ್ರೆಸ್‌ಗೆ ಬೆಂಬಲ ಕೋರಲಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್‌ಗೆ ಬೆಂಬಲ ನೀಡುವ ಬದಲು ತಮ್ಮದೇ ಪಕ್ಷದ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಲು ಮುಂದಾಗಿದ್ದಾರೆ. ಹೀಗಾಗಿ ಏನೇ ಆದರೂ ಕಣದಿಂದ ಹಿಂದೆ ಸರಿಯಬಾರದು ಎಂಬ ಉದ್ದೇಶದಿಂದ ಜೆಡಿಎಸ್‌ ತಮ್ಮ ಅಭ್ಯರ್ಥಿಯನ್ನು ಚುನಾವಣೆಗೆ ಇಳಿಸುವ ತೀರ್ಮಾನ ಕೈಗೊಂಡಿದೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ದೇವೇಗೌಡ ಅವರು, ರಾಜ್ಯಸಭೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಣಯ ಕೈಗೊಳ್ಳಲಾಗಿದೆ. ಕಾಂಗ್ರೆಸ್‌ ಬೆಂಬಲ ನೀಡದ ಕಾರಣ ನಮಗೆ ಒಂದಷ್ಟುಸಂಖ್ಯೆ ಕಡಿಮೆಯಾಗಲಿದೆ. ಆದರೂ ಅಭ್ಯರ್ಥಿಯನ್ನು ಇಳಿಸಲಾಗುವುದು. ಈ ಬಾರಿ ಬಿ.ಎಂ. ಫಾರೂಕ್‌ ಅವರಿಗೆ ಅವಕಾಶ ನೀಡಲಿದ್ದು, ಮುಂದಿನ ಬಾರಿ ಪಕ್ಷದ ಮುಖಂಡ ಡ್ಯಾನಿಷ್‌ ಅಲಿ ಅವರಿಗೆ ಅವಕಾಶ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಅಲ್ಪಸಂಖ್ಯಾತರ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ ಪಕ್ಷದ ಅಲ್ಪಸಂಖ್ಯಾತ ಅಭ್ಯರ್ಥಿಗೆ ಯಾಕೆ ಬೆಂಬಲ ಕೊಡುವುದಿಲ್ಲ. ಕಾಂಗ್ರೆಸ್‌ ನಡೆ ಗಮನಿಸಿದರೆ ಅಲ್ಪಸಂಖ್ಯಾತರಿಗೆ ಎಲ್ಲಿ ರಕ್ಷಣೆ ನೀಡುತ್ತಿದೆ. ಕೇವಲ ಮಾತಿನಲ್ಲಿ ಹೇಳಿದರೆ ಸಾಲದು ಎಂದು ಗೌಡರು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.