ರಾಜ್ಯಸಭೆಗೆ ಚುನಾವಣೆ ನಡೆಯುವುದು ಅಧಿಕೃತವಾಗಿದ್ದು, ಕಣಕ್ಕಿಳಿದಿರುವ ಯಾವೊಬ್ಬ ಅಭ್ಯರ್ಥಿಯೂ ಉಮೇದುವಾರಿಕೆ ಹಿಂಪಡೆಯದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ನೇರ ಹಣಾಹಣಿ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ.

ಬೆಂಗಳೂರು : ರಾಜ್ಯಸಭೆಗೆ ಚುನಾವಣೆ ನಡೆಯುವುದು ಅಧಿಕೃತವಾಗಿದ್ದು, ಕಣಕ್ಕಿಳಿದಿರುವ ಯಾವೊಬ್ಬ ಅಭ್ಯರ್ಥಿಯೂ ಉಮೇದುವಾರಿಕೆ ಹಿಂಪಡೆಯದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ನೇರ ಹಣಾಹಣಿ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ.

ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಸಂಸದ ರಾಜೀವ್‌ ಚಂದ್ರಶೇಖರ್‌ ಸೇರಿದಂತೆ ಐವರು ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಗುರುವಾರ (ಮಾ.15) ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಆದರೆ, ಯಾವೊಬ್ಬ ಅಭ್ಯರ್ಥಿಯೂ ಉಮೇದುವಾರಿಕೆಯನ್ನು ಹಿಂಪಡೆದಿಲ್ಲ. ಹೀಗಾಗಿ ಚುನಾವಣೆ ನಡೆಯುವುದು ಖಚಿತವಾಗಿದೆ. ಈ ತಿಂಗಳ 23ರಂದು ಮತದಾನ ನಡೆಯಲಿದೆ.

ಬಿಜೆಪಿ ಅಭ್ಯರ್ಥಿ ರಾಜೀವ್‌ ಚಂದ್ರಶೇಖರ್‌, ಕಾಂಗ್ರೆಸ್‌ ಅಭ್ಯರ್ಥಿಗಳಾದ ಎಲ್‌.ಹನುಮಂತಯ್ಯ, ಸಯ್ಯದ್‌ ನಾಸಿರ್‌ ಹುಸೇನ್‌, ಜೆ.ಸಿ.ಚಂದ್ರಶೇಖರ್‌, ಜೆಡಿಎಸ್‌ನ ಬಿ.ಎಂ.ಫಾರೂಕ್‌ ಅವರು ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ. ಶಾಸಕರ ಸಂಖ್ಯಾಬಲ ಆಧಾರದ ಮೇಲೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ರಾಜೀವ್‌ ಚಂದ್ರಶೇಖರ್‌, ಕಾಂಗ್ರೆಸ್‌ನ ಮೊದಲೆರಡು ಹುರಿಯಾಳು ಎಲ್‌.ಹನುಮಂತಯ್ಯ ಹಾಗೂ ಸಯ್ಯದ್‌ ನಾಸಿರ್‌ ಹುಸೇನ್‌ ಅನಾಯಾಸವಾಗಿ ಮೇಲ್ಮನೆ ಪ್ರವೇಶಿಸಲಿದ್ದಾರೆ.

ಆದರೆ, ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿ ಜೆ.ಸಿ.ಚಂದ್ರಶೇಖರ್‌ ಮತ್ತು ಜೆಡಿಎಸ್‌ನ ಬಿ.ಎಂ.ಫಾರೂಕ್‌ ನಡುವೆ ನೇರ ಸ್ಪರ್ಧೆ ಏರ್ಪಡಲಿದ್ದು, ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಪ್ರತಿಷ್ಠೆಯ ಕಾಳಗವಾಗಿದೆ. ಕಾಂಗ್ರೆಸ್‌ ಶಾಸಕರ ಜತೆಗೆ ಜೆಡಿಎಸ್‌ನ ಬಂಡಾಯ ಶಾಸಕರೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆ ಇರುವ ಕಾರಣ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವು ಬಹುತೇಕ ಖಚಿತ ಎಂದು ಹೇಳಲಾಗಿದೆ.

ಸೋಲು-ಗೆಲುವಿನ ಲೆಕ್ಕಾಚಾರ:

ವಿಧಾನಸಭೆಯ ಒಟ್ಟು ಸದಸ್ಯರ ಬಲ 224 ಇದ್ದು, ಶಾಸಕರಾದ ಪುಟ್ಟಣ್ಣಯ್ಯ, ಖಮರುಲ್‌ ಇಸ್ಲಾಂ, ಚಿಕ್ಕಮಾದು ಅವರ ನಿಧನ ಹಾಗೂ ಆನಂದ್‌ ಸಿಂಗ್‌, ಮಾನಪ್ಪ ವಜ್ಜಲ್‌, ಶಿವರಾಜ್‌ ಪಾಟೀಲ್‌, ಹಾಲಾಡಿ ಶ್ರೀನಿವಾಸ ಶೆಟ್ಟಿಅವರ ರಾಜೀನಾಮೆಯಿಂದ ಒಟ್ಟು ಏಳು ಶಾಸಕರ ಸ್ಥಾನಗಳು ತೆರವಾಗಿವೆ. ಉಳಿದ 217 ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಪ್ರತಿಯೊಂದು ರಾಜ್ಯಸಭೆ ಸ್ಥಾನವನ್ನು ಗೆಲ್ಲಲು 44 ಶಾಸಕರ ಮತ ಅಗತ್ಯ ಇದೆ.

ವಿಧಾನಸಭೆಯಲ್ಲಿ ಕಾಂಗ್ರೆಸ್‌ 122, ಬಿಜೆಪಿ 43, ಜೆಡಿಎಸ್‌ 37 ಶಾಸಕರನ್ನು ಹೊಂದಿವೆ. ಬಿಜೆಪಿಗೆ 43 ಶಾಸಕರ ಜತೆಗೆ ಬಿಎಸ್‌ಆರ್‌ ಕಾಂಗ್ರೆಸ್‌ನ ಪಿ.ರಾಜೀವ್‌ ಹಾಗೂ ಸಮಾಜವಾದಿ ಪಕ್ಷದಿಂದ ಬಿಜೆಪಿಗೆ ಬಂದಿರುವ ಸಿ.ಪಿ.ಯೋಗೇಶ್ವರ್‌ ಅವರ ಮತವೂ ಸಿಗಲಿದೆ.

ಹೀಗಾಗಿ ಒಟ್ಟು 45 ಮತಗಳಾಗಲಿದ್ದು, ಬಿಜೆಪಿಯ ಅಭ್ಯರ್ಥಿ ರಾಜೀವ್‌ ಚಂದ್ರಶೇಖರ್‌ ಗೆಲುವಿಗೆ ಯಾವುದೇ ಸಮಸ್ಯೆ ಇಲ್ಲ. ಕಾಂಗ್ರೆಸ್‌ಗೆ ಒಟ್ಟು 122 ಶಾಸಕರ ಜತೆಗೆ ಏಳು ಮಂದಿ ಜೆಡಿಎಸ್‌ ಬಂಡಾಯ ಶಾಸಕರು, ಕೆಜೆಪಿಯಲ್ಲಿದ್ದು ಈಗ ಕಾಂಗ್ರೆಸ್‌ ಜತೆ ಗುರುತಿಸಿಕೊಂಡಿರುವ ಶಾಸಕ ಬಿ.ಆರ್‌.ಪಾಟೀಲ್‌, ಇತ್ತೀಚೆಗಷ್ಟೇ ಕಾಂಗ್ರೆಸ್‌ ಸೇರಿರುವ ಮಕ್ಕಳ ಪಕ್ಷದ ಶಾಸಕ ಅಶೋಕ್‌ ಖೇಣಿ ಮತ್ತು ಪಕ್ಷೇತರ ಶಾಸಕ ನಾಗೇಂದ್ರ ಸೇರಿ 132 ಶಾಸಕರ ಮತ ಸಿಗಲಿದೆ.

ಹೀಗಾಗಿ 3 ಸ್ಥಾನ ಗೆಲ್ಲಲು ಯಾವುದೇ ಅಡ್ಡಿಯಿಲ್ಲ. ಇದರ ಜೊತೆಗೆ, ಪಕ್ಷೇತರ ಶಾಸಕರಾಗಿರುವ ಮಂಕಾಳ ಸುಬ್ಬ ವೈದ್ಯ, ಸತೀಶ್‌ ಸೈಲ್‌ ಹಾಗೂ ವರ್ತೂರು ಪ್ರಕಾಶ್‌ ಕೂಡ ಕಾಂಗ್ರೆಸ್‌ನ ಸಹ ಸದಸ್ಯರಾಗಿದ್ದಾರೆ. ಇವರ ಬೆಂಬಲವೂ ಕಾಂಗ್ರೆಸ್‌ಗೆ ಸಿಕ್ಕರೆ 3 ಸ್ಥಾನ ಗೆದ್ದ ಮೇಲೂ 3 ಮತಗಳು ಕಾಂಗ್ರೆಸ್‌ನ ಬಳಿ ಉಳಿಯಲಿವೆ.

ಇನ್ನು, ಜೆಡಿಎಸ್‌ ಪಕ್ಷದ ಶಾಸಕರು ಒಟ್ಟು 37 ಇದ್ದು, ಈ ಪೈಕಿ ಏಳು ಶಾಸಕರು ಬಂಡಾಯ ಶಾಸಕರಾಗಿ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಜೆಡಿಎಸ್‌ಗೆ 14 ಮತಗಳು ಕಡಿಮೆ ಬೀಳುತ್ತವೆ. ಈ ಮತಗಳನ್ನು ಪಡೆಯಲು ಜೆಡಿಎಸ್‌ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.