ಪ್ರಕರಣದಲ್ಲಿ ಕಾಗವಾಡ ಪೊಲೀಸ್ ಠಾಣೆಯಲ್ಲಿ 13 ಮಂದಿ ವಿರುದ್ಧ ದೂರು ದಾಖಲಾಗಿದ್ದರೂ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿ ಇಂದು ಅಥಣಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಬೆಳಗಾವಿ(ಜ. 19): ಕಾಂಗ್ರೆಸ್ ಕಾರ್ಯಕರ್ತ ವಿವೇಕ್ ಶೆಟ್ಟಿ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಬಿಜೆಪಿ ಶಾಸಕ ರಾಜು ಕಾಗೆ ಸೇರಿದಂತೆ ಮೂವರಿಗೆ ನ್ಯಾಯಾಂಗ ಬಂಧನವಾಗಿದೆ. ರಾಜು ಕಾಗೆ, ಅವರ ಪುತ್ರಿ ತೃಪ್ತಿ, ಹಾಗೂ ಸೋದರನ ಪತ್ನಿಯನ್ನು ಜನವರಿ 23ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿ ಅಥಣಿ ಕೋರ್ಟ್ ಆದೇಶ ಹೊರಡಿಸಿದೆ.

ಪ್ರಕರಣದಲ್ಲಿ ಕಾಗವಾಡ ಪೊಲೀಸ್ ಠಾಣೆಯಲ್ಲಿ 13 ಮಂದಿ ವಿರುದ್ಧ ದೂರು ದಾಖಲಾಗಿದ್ದರೂ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿ ಇಂದು ಅಥಣಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಏನಿದು ಪ್ರಕರಣ?
ಅಥಣಿ ತಾಲೂಕಿನ ಉಗಾರ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ವಿವೇಕ್ ಶೆಟ್ಟಿ ಮೇಲೆ ರಾಜು ಕಾಗೆ ಕುಟುಂಬದವರು ಹಲ್ಲೆ ನಡೆಸಿದ ಪ್ರಕರಣ ಇದಾಗಿದೆ. ಜನವರಿ 1ರಂದೇ ಘಟನೆ ನಡೆದಿದ್ದರೂ 10 ದಿನಗಳ ಹಿಂದಷ್ಟೇ ತಡವಾಗಿ ಪ್ರಕರಣ ಬೆಳಕಿಗೆ ಬಂದಿತ್ತು. ರಾಜು ಕಾಗೆ ಬಗ್ಗೆ ಫೇಸ್ಬುಕ್'ನಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಿದ್ದು, ರಾಜು ಕಾಗೆ ಪುತ್ರಿಗೆ ವಾಟ್ಸಾಪ್'ನಲ್ಲಿ ಕೆಟ್ಟ ಸಂದೇಶ ಕಳುಹಿಸಿದನೆಂದು ವಿವೇಕ್ ಶೆಟ್ಟಿ ಮೇಲೆ ಶಾಸಕರ ಕುಟುಂಬದವರು ಹಲ್ಲೆ ಎಸಗಿದ್ದರು. ಶೆಟ್ಟಿ ಮನೆಗೆ ನುಗ್ಗಿ ಆತನನ್ನು ಮೆಟ್ಟಿಲಿನಿಂದಲೇ ದರದರನೇ ಹೊರಗೆ ಎಳೆದೊಯ್ಯುತ್ತಿರುವ ಸಿಸಿಟಿವಿ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದವು. ಈ ಮೂಲಕ ಪ್ರಕರಣ ಬಹಿರಂಗಗೊಳ್ಳಲು ಸಾಧ್ಯವಾಯಿತು.

ವಿವೇಕ್ ಶೆಟ್ಟಿ ಮನೆಗೆ ಸುಮಾರು 13 ಜನರು ನುಗ್ಗಿದ್ದು ಸಿಸಿಟಿವಿ ದೃಶ್ಯಗಳಿಂದ ತಿಳಿದುಬಂದಿತ್ತು. ಪೊಲೀಸರು ಆ ಎಲ್ಲಾ 13 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇವರ ಪೈಕಿ ಆರು ಮಂದಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಥಣಿ ಕೋರ್ಟ್ ಇದೀಗ ಮೂವರನ್ನು ಜ.23ರವರೆಗೆ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದೆ.