ದೇಶದ ಗಡಿ ಇತಿಹಾಸ ರಚನೆಗೆ ಕೇಂದ್ರ ಸರ್ಕಾರದ ಹಸಿರು ನಿಶಾನೆ|  ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಸ್ತು 

ನವದೆಹಲಿ[ಸೆ.19]: ದೇಶದ ಗಡಿಭಾಗಗಳ ಇತಿಹಾಸವನ್ನು ದಾಖಲಿಸಿಡುವ ಮಹತ್ವದ ಯೋಜನೆಯೊಂದಕ್ಕೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಸ್ತು ಎಂದಿದ್ದಾರೆ. ಇದೇ ಮೊದಲ ಬಾರಿಗೆ ಇಂಥದ್ದೊಂದು ವಿನೂತನ ಯೋಜನೆಯನ್ನು ರಾಜನಾಥ್‌ ಸಿಂಗ್‌ ಅವರು ಕೈಗೆತ್ತಿಕೊಂಡಿದ್ದಾರೆ.

ಭಾರತದ ಗಡಿಗೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತಾದ ಇತಿಹಾಸಗಳು ಯೋಜನೆಯಲ್ಲಿ ಒಳಗೊಂಡಿರಲಿವೆ. ಅದರಲ್ಲಿ ಗಡಿ ಗುರುತಿಸುವಿಕೆ, ಗಡಿ ರಚನೆ, ಗಡಿ ಬದಲು, ಭದ್ರತಾ ಪಡೆಯ ಪಾತ್ರ, ಗಡಿಭಾಗದ ನಿವಾಸಿಗಳು, ಸಂಸ್ಕೃತಿ ಮತ್ತು ಸಾಮಾಜಿ-ಆರ್ಥಿಕ ವಿಚಾರಗಳೂ ಈ ಯೋಜನೆಯನ್ನೊಳಗೊಂಡಿವೆ. ಇನ್ನೆರಡು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಗಡಿಗೆ ಸಂಬಂಧಿಸಿದ ಇತಿಹಾಸವನ್ನು ಬರಹ ರೂಪದಲ್ಲಿ ದಾಖಲಿಸಿಡುವ ಬಗ್ಗೆ ರಾಜನಾಥ್‌ ಸಿಂಗ್‌ ವಿಶೇಷ ಕಾಳಜಿ ಹೊಂದಿದ್ದಾರೆ. ಅಲ್ಲದೆ, ವಿಷಯ ತಜ್ಞರಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳುವ ಬಗ್ಗೆಯೂ ಸಲಹೆ ನೀಡಿದ್ದಾರೆ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಯೋಜನೆಗೆ ಎಂದು ಚಾಲನೆ ಸಿಗಲಿದೆ ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲವಾದರೂ, ಯೋಜನೆಯನ್ನು ಒಟ್ಟಾರೆ 2 ವರ್ಷದಲ್ಲಿ ಪೂರ್ಣಗೊಳಿಸುವ ಇರಾದೆ ಸರ್ಕಾರದ್ದು ಎನ್ನಲಾಗಿದೆ.

ಮಂಗಳವಾರ ಈ ಸಂಬಂಧ ರಕ್ಷಣಾ ಸಚಿವರು, ಭಾರತೀಯ ಇತಿಹಾಸ ಅಧ್ಯಯನ ಪರಿಷತ್‌, ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ, ಗೃಹ ಸಚಿವಾಲಯ, ರಕ್ಷಣಾ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಬಗ್ಗೆ ಚರ್ಚಿಸಿದ್ದರು.