ಕರ್ನಾಟಕದಲ್ಲಿ ಪತ್ರಕರ್ತೆ ಗೌರಿ ಲಂಕೇಶ್, ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರಾದ ರುದ್ರೇಶ್, ಕುಟ್ಟಪ್ಪ, ಪರೇಶ್ ಮೇಸ್ತ ಅನೇಕರ ಹತ್ಯೆ ನಡೆದಿದ್ದು, ಈ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಕೊಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹರಿಹಾಯ್ದಿದ್ದಾರೆ.
ಬೆಂಗಳೂರು (ಡಿ.18): ಕರ್ನಾಟಕದಲ್ಲಿ ಪತ್ರಕರ್ತೆ ಗೌರಿ ಲಂಕೇಶ್, ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರಾದ ರುದ್ರೇಶ್, ಕುಟ್ಟಪ್ಪ, ಪರೇಶ್ ಮೇಸ್ತ ಮೊದಲಾದ ಅನೇಕರ ಹತ್ಯೆ ನಡೆದಿದ್ದು, ಈ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಕೊಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹರಿಹಾಯ್ದಿದ್ದಾರೆ. ನಗರದ ಮುರುಗೇಶಪಾಳ್ಯದಲ್ಲಿ ರಾಜ್ಯ ಬಿಜೆಪಿ ಭಾನುವಾರ ಆಯೋಜಿಸಿದ್ದ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಅವರು ಮಾತನಾಡಿದರು.
ಮುಂಬರುವ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ, ಈ ಎಲ್ಲ ಪ್ರಕರಣಗಳನ್ನು ನಿಷ್ಪಕ್ಷಪಾತವಾಗಿ ಮರು ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವುದಾಗಿ ಅವರು ತಿಳಿಸಿದರು. ಕಾಂಗ್ರೆಸ್ ಪಕ್ಷ ದೇಶದಲ್ಲಿ ಜಾತಿಗಳ ನಡುವೆ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವರಾದ ರಾಜನಾಥ್ ಸಿಂಗ್ ಹೇಳಿದ್ದಾರೆ.
ಆದರೆ, ಬಿಜೆಪಿ ಜಾತಿಗಳನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದೆ. ಮತ ಬ್ಯಾಂಕ್’ಗಾಗಿ ಮುಸ್ಲಿಂ ಸಮುದಾಯದ ಓಲೈಕೆಯಲ್ಲಿ ತೊಡಗಿರುವ ಕಾಂಗ್ರೆಸ್, ಸಂವಿಧಾನದಲ್ಲಿ ಅವಕಾಶ ಇಲ್ಲದಿದ್ದರೂ ಮೀಸಲಾತಿ ಕಲ್ಪಿಸುವ ಸುಳ್ಳು ಭರವಸೆ ನೀಡುತ್ತಿದೆ. ಈ ಮೂಲಕ ಜನರ ಕಣ್ಣಿಗೆ ಮಣ್ಣೆರಚುತ್ತಿದೆ. ಇದು ಅಕ್ಷಮ್ಯ ಅಪರಾಧ ಎಂದು ಕಿಡಿಕಾರಿದರು. ಕರ್ನಾಟಕ ಸರ್ಕಾರ ಟಿಪ್ಪು ಜಯಂತಿ ಆಚರಿಸುವ ಮೂಲಕ ವಿವಾದ ಸೃಷ್ಟಿಸಿದೆ.ರಾಜಕೀಯ ಉದ್ದೇಶಕ್ಕಾಗಿ ಸಮಾಜ ಒಡೆಯುವ ಕೆಲಸ ಮಾಡಬಾರದು. ಕಿತ್ತೂರು ರಾಣಿ ಚನ್ನಮ್ಮ, ನಾಡಪ್ರಭು ಕೆಂಪೇಗೌಡ, ಸರ್. ಎಂ.ವಿಶ್ವೇಶ್ವರಯ್ಯ ಮೊದಲಾದವರ ಜಯಂತಿ ಆಚರಣೆಗೆ ಅವಕಾಶವಿದೆ. ಆದರೆ, ಮತ ಬ್ಯಾಂಕ್’ಗಾಗಿ ವಿವಾದಿತ ವ್ಯಕ್ತಿಗಳ ಜಯಂತಿ ಆಚರಿಸುವ ಮುಖಾಂತರ ಜಾತಿಗಳ ಹಾಗೂ ಧರ್ಮಗಳ ನಡುವೆ ದ್ವೇಷ ಹರಡಬಾರದು ಎಂದರು.
