Asianet Suvarna News Asianet Suvarna News

ಶೀಘ್ರವೇ ಬರಲಿದೆ ರಜನೀಕಾಂತ್‌ ಹೊಸ ಟೀವಿ ಚಾನಲ್

 ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ನಿಲುವನ್ನು ವ್ಯಕ್ತಪಡಿಸಲು ಪ್ರತ್ಯೇಕ ಟೀವಿ ಚಾನೆಲ್‌ ಹೊಂದಿರುವಂತೆ ರಜನಿ ಕೂಡಾ ತಮ್ಮ ಸ್ಥಾಪನೆಯ ನಿಟ್ಟಿನಲ್ಲಿ ಟೀವಿ ಚಾನೆಲ್‌ಗೆ ಮೊರೆ ಹೋಗಿದ್ದಾರೆ.

Rajinikanth To Launch Television Channel Soon
Author
Bengaluru, First Published Dec 22, 2018, 8:14 AM IST

ಚೆನ್ನೈ: ರಾಜಕೀಯ ಪಕ್ಷ ಸ್ಥಾಪನೆಯ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಖ್ಯಾತ ನಟ ರಜನೀಕಾಂತ್‌, ಇದೀಗ ಟೀವಿ ಚಾನೆಲ್‌ ಆರಂಭಿಸಲು ನಿರ್ಧರಿಸಿದ್ದಾರೆ. ಇದರೊಂದಿಗೆ ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ನಿಲುವನ್ನು ವ್ಯಕ್ತಪಡಿಸಲು ಪ್ರತ್ಯೇಕ ಟೀವಿ ಚಾನೆಲ್‌ ಹೊಂದಿರುವಂತೆ ರಜನಿ ಕೂಡಾ ಟೀವಿ ಚಾನೆಲ್‌ಗೆ ಮೊರೆ ಹೋಗಿದ್ದಾರೆ.

ರಜನಿ ಅವರ ಪಕ್ಷದ ಮುಖವಾಣಿಯಂತೆ ಕಾರ್ಯನಿರ್ವಹಿಸುತ್ತಿರುವ ರಜನಿ ಮಕ್ಕಳ್‌ ಮಂಡರಮ್‌ ಸಂಘಟನೆಯು ರಜನಿ ಹೆಸರಲ್ಲಿ ಮೂರು ಟ್ರೇಡ್‌ಮಾರ್ಕ್ ನೋಂದಣಿಗೆ ಅರ್ಜಿ ಸಲ್ಲಿಸಿದೆ. ಈ ಸಂಘಟನೆಯು ತಮ್ಮ ಹೆಸರು, ಭಾವಚಿತ್ರ ಮತ್ತು ತಮ್ಮ ಸಂಘಟನೆಯ ಲಾಂಛನವನ್ನು ಬಳಸಿಕೊಳ್ಳಲು ಯಾವುದೇ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿ ರಜನೀಕಾಂತ್‌ ಅವರು ಟ್ರೆಡ್‌ಮಾರ್ಕ್ ರಿಜಿಸ್ಟ್ರಾರ್‌ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಈ ಮೂಲಕ ರಜನಿ ಟೀವಿ ಕ್ಷೇತ್ರಕ್ಕೆ ಕಾಲಿಡುತ್ತಿರುವುದು ಬಹಿರಂಗವಾಗಿದೆ.

ರಜನಿ ಅವರ ಸಂಘಟನೆಯ ‘ಸೂಪರ್‌ಸ್ಟಾರ್‌ ಟೀವಿ’, ‘ರಜನಿ ಟೀವಿ’, ಮತ್ತು ‘ತಲೈವಾರ್‌ ಟೀವಿ’ ಹೆಸರಿನಲ್ಲಿ ಟ್ರೇಡ್‌ಮಾರ್ಕ್ಗೆ ಅರ್ಜಿ ಸಲ್ಲಿಸಿದೆ. ಈ ಮೂರೂ ಹೆಸರುಗಳನ್ನು ಅಭಿಮಾನಿಗಳು,ರಜನಿಯನ್ನು ಆರಾಧಿಸಿ ಕರೆಯಲು ಬಳಸುತ್ತಾರೆ. ಈ ಪೈಕಿ ಯಾವ ಹೆಸರನ್ನು ರಜನಿ ತಮ್ಮ ಚಾನೆಲ್‌ಗೆ ಅಂತಿಮಗೊಳಿಸುತ್ತಾರೆ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ.

ತಮಿಳುನಾಡಿನ ಜಯಾ ಟೀವಿ, ಜಯಲಲಿತಾ ಬದುಕಿರುವವರೆಗೂ ಎಐಎಡಿಎಂಕೆ ಪಕ್ಷದ ಮುಖವಾಣಿಯಾಗಿತ್ತು. ಜಯಾ ನಿಧನದ ಬಳಿಕ ಅದು ಪಕ್ಷದ ಬಂಡಾಯ ನಾಯಕ ಟಿಟಿವಿ ದಿನಕರನ್‌ ಮುಖವಾಣಿಯಾಯ್ತು. ಈ ಹಿನ್ನೆಲೆಯಲ್ಲಿ ಎಐಎಡಿಎಂಕೆ ಇತ್ತೀಚೆಗೆ ನ್ಯೂಸ್‌ ಜೆ ಎಂಬ ಚಾನೆಲ್‌ ಆರಂಭಿಸಿತ್ತು. ಇನ್ನು ಸನ್‌ಗ್ರೂಪ್‌ ಡಿಎಂಕೆ ಮುಖವಾಣಿ ಎಂದೇ ಬಿಂಬಿತವಾಗಿದೆ.

2917ರ ಡಿಸೆಂಬರ್‌ನಲ್ಲೇ ರಾಜಕೀಯ ಪ್ರವೇಶದ ಬಗ್ಗೆ ರಜನಿ ಬಹಿರಂಗ ಘೋಷಣೆ ಮಾಡಿದ್ದರಾದರೂ, ಪಕ್ಷದ ಹೆಸರನ್ನು ಇದುವರೆಗೆ ಪ್ರಕಟಿಸಿಲ್ಲ. ಆದರೆ 2021ರ ತಮಿಳುನಾಡು ವಿಧಾನಸಭಾ ಚುನಾವಣೆ ವೇಳೆ ಎಲ್ಲಾ 234 ಕ್ಷೇತ್ರಗಳಲ್ಲೂ ಸ್ಪರ್ಧಿಸುವುದಾಗಿ ಅವರು ಈಗಾಗಲೇ ಘೋಷಿಸಿದ್ದಾರೆ.

Follow Us:
Download App:
  • android
  • ios