ಸಿಎಂ ಒ. ಪನ್ನೀರಸೆಲ್ವಂಗೂ ಶಶಿಕಲಾಗೂ ಉತ್ತಮ ಬಾಂಧವ್ಯ ಇಲ್ಲ. ಇದನ್ನೇ ಬಳಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪನ್ನೀರಸೆಲ್ವಂ ಅವರನ್ನು ಬುಟ್ಟಿಗೆ ಹಾಕಿಕೊಳ್ಳಲು ಯತ್ನಿಸಿದ್ದು, ಸೆಲ್ವಂ ಅವರ ಬೇಡಿಕೆಗಳಿಗೆಲ್ಲ ಒಪ್ಪಿಕೊಳ್ಳುತ್ತಿದ್ದಾರೆ. ಮೇಲಾಗಿ ಶಶಿಕಲಾ ಅವರನ್ನು ನಿರ್ಲಕ್ಷಿಸಿದ್ದಾರೆ. ಇದು ಶಶಿಕಲಾ ಅವರಲ್ಲಿ ಕಳವಳ ಮೂಡಿಸಿದೆ ಎನ್ನಲಾಗಿದೆ.

ಚೆನ್ನೈ(ಫೆ.04): ಶಶಿಕಲಾ ಅವರು ದಿಢೀರನೇ ಮುಖ್ಯಮಂತ್ರಿ ಆಗಲು ಯೋಚಿಸಿತ್ತಿರುವುದೇಕೆ ಎಂಬ ಬಗ್ಗೆ ಕುತೂಹಲಕರ ಉತ್ತರಗಳು ದೊರಕಿವೆ. ಜಯಲಲಿತಾ ನಿಧನದ ಬಳಿಕ, ರಾಜ್ಯದಲ್ಲಿ ತನ್ನ ಬಲ ವೃದ್ಧಿಸಿಕೊಳ್ಳಲು ಬಿಜೆಪಿ, ಡಿಎಂಕೆ ನಾನಾ ಕಾರ್ಯತಂತ್ರ ರೂಪಿಸಿವೆ.

ಮುಖ್ಯವಾಗಿ ನಟ ರಜನೀಕಾಂತ್ ಅವರ ರಾಜಕೀಯ ಪ್ರವೇಶದ ಗುಸುಗುಸು, ಅವರನ್ನು ತನ್ನತ್ತ ಸೆಳೆಯಲು ಬಿಜೆಪಿ ನಡೆಸಿರುವ ಯತ್ನ ಹಾಗೂ ಪನ್ನೀರಸೆಲ್ವಂ ಅವರತ್ತ ಬಿಜೆಪಿಯ ಆಪ್ತತೆ ಶಶಿಕಲಾ ಅವರ ಈ ದಿಢೀರ್ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.

ಸಿಎಂ ಒ. ಪನ್ನೀರಸೆಲ್ವಂಗೂ ಶಶಿಕಲಾಗೂ ಉತ್ತಮ ಬಾಂಧವ್ಯ ಇಲ್ಲ. ಇದನ್ನೇ ಬಳಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪನ್ನೀರಸೆಲ್ವಂ ಅವರನ್ನು ಬುಟ್ಟಿಗೆ ಹಾಕಿಕೊಳ್ಳಲು ಯತ್ನಿಸಿದ್ದು, ಸೆಲ್ವಂ ಅವರ ಬೇಡಿಕೆಗಳಿಗೆಲ್ಲ ಒಪ್ಪಿಕೊಳ್ಳುತ್ತಿದ್ದಾರೆ. ಮೇಲಾಗಿ ಶಶಿಕಲಾ ಅವರನ್ನು ನಿರ್ಲಕ್ಷಿಸಿದ್ದಾರೆ. ಇದು ಶಶಿಕಲಾ ಅವರಲ್ಲಿ ಕಳವಳ ಮೂಡಿಸಿದೆ ಎನ್ನಲಾಗಿದೆ.

ಜಲ್ಲಿಕಟ್ಟು ಸುಗ್ರೀವಾಜ್ಞೆಗೆ ಕೇಂದ್ರ ಸರ್ಕಾರ ಒಂದೇ ದಿನದಲ್ಲಿ ಅನುಮತಿ ನೀಡಿದ್ದು ಮತ್ತು ಪನ್ನೀರಸೆಲ್ವಂ ಜತೆ ಭೇಟಿಗೆ ಮೋದಿ ಪದೇ ಪದೇ ಅವಕಾಶ ನೀಡಿದ್ದರ ಹಿಂದೆ ಬಿಜೆಪಿಯು ತಮಿಳುನಾಡಿನಲ್ಲಿ ಸೆಲ್ವಂ ಅವರನ್ನು ಬಳಸಿಕೊಂಡು ಬೇರೂರಲು ಯತ್ನಿಸುತ್ತಿರುವ ತಂತ್ರ ಅಡಗಿದೆ ಎನ್ನಲಾಗಿದೆ. ಜಲ್ಲಿಕಟ್ಟು ಸುಗ್ರೀವಾಜ್ಞೆಯ ಬೆನ್ನಲ್ಲೇ ಸೆಲ್ವಂ ಅವರ ಜನಪ್ರಿಯತೆ ಉತ್ತುಂಗಕ್ಕೇರಿದೆ. ಇದು ಕೂಡ ಶಶಿಕಲಾರ ಇನ್ನೊಂದು ಆತಂಕಕ್ಕೆ ಕಾರಣ.

ಇದೇ ವೇಳೆ ಜಲ್ಲಿಕಟ್ಟು ಸಕ್ರಮಗೊಳಿಸಲು ಹಾಗೂ ಎಂಜಿಆರ್ ಜನ್ಮಶತಮಾನೋತ್ಸವದ ನಾಣ್ಯ ಹಾಗೂ ಅಂಚೆಚೀಟಿ ಬಿಡುಗಡೆಗೆ ಶಶಿಕಲಾ ಮಾಡಿದ ಮನವಿಯ ಬಗ್ಗೆ ಪ್ರಧಾನಿಯವರು ಉತ್ತರ ನೀಡುವ ಗೋಜಿಗೆ ಹೋಗಿಲ್ಲ. ಹೀಗಾಗಿ ಶಶಿಕಲಾ ಅವರಲ್ಲಿ ಮೋದಿ-ಸೆಲ್ವಂ ಸಾಮೀಪ್ಯ ಹಾಗೂ ಸೆಲ್ವಂ ಜನಪ್ರಿಯತೆ ಬಗ್ಗೆ ಆತಂಕ ಕಾಡಲಾರಂಭಿಸಿದ್ದು, ಈಗಲೇ ಸಿಎಂ ಆಗಲು ಹವಣಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇಲ್ಲಿ ಮೃದು ಸ್ವಭಾವದ ಸೆಲ್ವಂ ಏನಾದರೂ ಶಶಿಕಲಾ ವಿರುದ್ಧ ಸಿಡಿದು ನಿಂತರೆ ಆಗ ಪರಿಸ್ಥಿತಿ ಏನಾಗಲಿದೆ? ಸೆಲ್ವಂ ಬೆನ್ನಿಗೆ ಎಷ್ಟು ಶಾಸಕರು ನಿಲ್ಲಲಿದ್ದಾರೆ ಎಂಬುದರ ಮೇಲೆ ಮುಂದಿನ ವಿದ್ಯಮಾನ ನಿರ್ಧಾರವಾಗಲಿದೆ.