ಬೆಂಗಳೂರು(ಮಾ. 03): ಸ್ಟೀಲ್‌ ಬ್ರಿಡ್ಜ್‌ ವಿರುದ್ಧದ ಹೋರಾಟ ಜನಾಂದೋಲನವಾಗಿ ರೂಪುಗೊಳ್ಳಲು ಸಂಸದ ರಾಜೀವ್‌ ಚಂದ್ರಶೇಖರ್‌ ಮೊಟ್ಟಮೊದಲಿಗೆ ನಾಂದಿ ಹಾಡಿದ್ದರು. ಸ್ಟೀಲ್‌ ಬ್ರಿಡ್ಜ್‌ ಅವೈಜ್ಞಾನಿಕ, ಪರಿಸರಕ್ಕೆ ಮಾರಕ ಹಾಗೂ ಈ ಯೋಜನೆ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಪಡೆಯಲಾಗಿಲ್ಲ ಎಂದು ಆರೋಪಿಸಿ ಮುಖ್ಯಮಂತ್ರಿಯವರಿಗೆ ಪತ್ರವೊಂದನ್ನು ಬರೆಯುವ ಮೂಲಕ ಈ ಯೋಜನೆ ವಿಚಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ನಾಡಿನ ಗಮನಕ್ಕೆ ತಂದರು.

ಸ್ಟೀಲ್‌ ಬ್ರಿಡ್ಜ್‌ ಕುರಿತಾಗಿ ಕಳೆದ ವರ್ಷದ ಜೂನ್‌ನಲ್ಲಿ ರಾಜ್ಯ ಸರ್ಕಾರ ಪ್ರಕಟಿಸಿದ ಬೆನ್ನಲ್ಲೇ ಇದೊಂದು ಅತ್ಯಂತ ಅವೈಜ್ಞಾನಿಕ ವಾದ ಮಾತ್ರವಲ್ಲ ಪರಿಸರದ ಜತೆಗೆ ನಗರದ ಅಂದಗೆಡಿಸುವ ಯೋಜನೆಯೆಂಬುದನ್ನು ಅರಿತುಕೊಂಡು ಯೋಜನೆಯಲ್ಲಿ ಪಾರದರ್ಶ ಕತೆ ಇಲ್ಲದೇ ಇರುವುದನ್ನೂ ಸಂಸದರು ಪತ್ತೆ ಮಾಡಿದ್ದರು.ಯೋಜನೆಯ ಸಂಪೂರ್ಣ ವಿವರಣೆ ಜತೆಗೆ ಸ್ಪಷ್ಟನೆ ಕೇಳಿ ಮುಖ್ಯಮಂತ್ರಿ ಮತ್ತು ಅಂದಿನ ಬಿಡಿಎ ಆಯುಕ್ತರಾಗಿದ್ದ ರಾಜ್‌ಕುಮಾರ್‌ ಖತ್ರಿಗೆ ಪತ್ರ ಬರೆದರು. ಆದರೆ ರಾಜೀವ್‌ ಅವರೇ ಹೇಳುವಂತೆ ಅವರ ಅನೇಕ ಪತ್ರಗಳಿಗೆ ಸಿಎಂ ಉತ್ತರಿಸದಂತೆ ಈ ಪತ್ರಕ್ಕೂ ಉತ್ತರ ನೀಡಿರಲಿಲ್ಲ. 

ಕೊನೆಗೆ ಸಂಸದ ರಾಜೀವ್‌ ರಾಜ್ಯದ ಹೈಕೋರ್ಟ್‌ ಮೆಟ್ಟಿಲೇರಿದರು. ಖುದ್ದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಯೋಜನೆ ಕಾಮಗಾರಿ ನಡೆಸದಂತೆ ಹೈಕೋರ್ಟ್‌ ನಿರ್ದೇಶನ ನೀಡುವಂತೆ ಮಾಡುವಲ್ಲಿ ಯಶಸ್ವಿಯಾದರು. ನ್ಯಾಯಾಲ ಯದ ಜತೆಗೆ ಹಸಿರು ನ್ಯಾಯಾಧಿಕರಣದಲ್ಲಿ ಇದೀಗ ಪ್ರಕರಣ ಮುಂದುವರೆದಿದೆ. 

ಸಂಸದ ರಾಜೀವ್‌ ಚಂದ್ರಶೇಖರ್‌ ಆರಂಭಿಸಿದ್ದ ಹೋರಾಟ ಕ್ರಮೇಣ ಬೆಂಗಳೂರು ನಗರದ ಬೃಹತ್‌ ಯೋಜನೆಯೊಂದರ ಬೃಹತ್‌ ಜನಾಂದೋಲನವಾಗಿ ಹೊರ ಹೊಮ್ಮಿತು. ಬೆಂಗಳೂರಿನ ಮೂಲೆ ಮೂಲೆ ಗಳಿಂದಲೂ ಸಾವಿರಾರು ಜನರು ಸಂಘಟಿತ ರಾಗಿ ಎಂಟು ಕಿಮೀ ಉದ್ದದ ಬೃಹತ್‌ ಮಾನವ ಸರಪಳಿಯನ್ನೂ ಮಾಡಿ ಸರ್ಕಾರಕ್ಕೆ ಎಚ್ಚರಿಕೆಯ ಕರೆಗಂಟೆ ಬಾರಿಸಿದರು. ಪ್ರತಿಭಟನೆಗಳು, ಪ್ರದರ್ಶನಗಳೂ ಸೇರಿದಂತೆ ‘ಸ್ಟೀಲ್‌ ಬ್ರಿಡ್ಜ್‌ ಬೇಡ' ಹ್ಯಾಷ್‌ಟ್ಯಾಗ್‌ನಲ್ಲಿ ಸಾಮಾಜಿಕ ಜಾಲತಾಣಗಳಲ್ಲೂ ಲಕ್ಷಾಂತರ ಜನರು ಯೋಜನೆಗೆ ಬೆಂಬಲ ವ್ಯಕ್ತ ಮಾಡಿದರು.

ಬೆಂಗಳೂರು ನಗರ ಜನತೆಗೆ ಸಿಕ್ಕ ಗೆಲುವು
ಬೆಂಗಳೂರು: ಸ್ಟೀಲ್‌ ಬ್ರಿಡ್ಜ್‌ ಯೋಜನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿರುವುದು ಬೆಂಗಳೂರು ನಗರದ ಜನತೆಗೆ ಸಿಕ್ಕ ಗೆಲುವಾಗಿದೆ ಎಂದು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ. ಯೋಜನೆ ಕೈಬಿಟ್ಟಿರುವ ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದೆ. ಯೋಜನೆಯಲ್ಲಿ ಭ್ರಷ್ಟತೆ ನಡೆದಿರುವ ಬಗ್ಗೆ ಈ ಹಿಂದೆ ಮಾಡಿದ ಪ್ರಸ್ತಾಪವು ಸರ್ಕಾರದ ನಡೆಯಿಂದಾಗಿ ದೃಢಪಟ್ಟಿದೆ. ಯೋಜನೆ ವಿರುದ್ಧ ನಡೆದ ಹೋರಾಟವು ಬೆಂಗಳೂರು ಜನರಿಗೆ ಸಿಕ್ಕ ಗೆಲುವಾಗಿದೆ. ಮಾತ್ರವಲ್ಲ, ಕಾನೂನು ಹೋರಾಟದಲ್ಲಿಯೂ ಜಯ ಸಿಕ್ಕಿದೆ. ವಿಚಾರಣೆ ನಡೆಸುತ್ತಿದ್ದ ರಾಷ್ಟ್ರೀಯ ಹಸಿರು ಪೀಠ ಮತ್ತು ಹೈಕೋರ್ಟ್‌ನ ನಡೆಯು ಪ್ರಶಂಸಾರ್ಹ ವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಹೋರಾಟದಲ್ಲಿ ಜನರ ಪಾತ್ರದ ಜತೆಗೆ ಮಾಧ್ಯಮಗಳ ಪಾತ್ರವು ಬಹಳ ಮುಖ್ಯವಾಗಿದೆ.ನಮ್ಮ ಬೆಂಗಳೂರು ಪ್ರತಿಷ್ಠಾನ ಸೇರಿ ಹಲವು ಸಂಘಟನೆಗಳು ಹೋರಾಟ ದಲ್ಲಿ ಕೈಜೋಡಿಸುವ ಮೂಲಕ ಗೆಲುವಿಗೆ ಕಾರಣರಾ ಗಿದ್ದಾರೆ. ಜನಪ್ರತಿನಿಧಿಗಳು ನಗರದ ಸೌಂದರ್ಯ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು ಎಂದಿದ್ದಾರೆ.

ನಗರದ ಸ್ಟೀಲ್‌ ಬ್ರಿಡ್ಜ್‌ ಯೋಜನೆ ರದ್ದಾಗಿರುವ ಹೆಗ್ಗಳಿಕೆ ಈ ರಾಜ್ಯದ ಜನತೆಗೆ, ಬೆಂಗಳೂರಿನ ನಾಗರಿಕರಿಗೆ, ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಹಾಗೂ ಮಾಧ್ಯಮಗಳಿಗೆ ಸಲ್ಲಬೇಕೇ ಹೊರತು ನನಗಲ್ಲ
- ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಕನ್ನಡಪ್ರಭ ವಾರ್ತೆ
epaper.kannadaprabha.in