ಬೆಂಗಳೂರು(ಮಾ.14): ಕೇಂದ್ರ ಪರಿಸರ ಇಲಾಖೆ ಅನುಮತಿ ಪಡೆಯದ ಕಾರಣ ಸ್ಟೀಲ್‌ ಬ್ರಿಡ್ಜ್‌ ಯೋಜನೆ ಅಕ್ರಮ ಎನ್ನುವುದನ್ನು ನ್ಯಾಯಪೀಠ ತನ್ನ ಈ ಆದೇಶದ ಮೂಲಕ ಎತ್ತಿ ಹಿಡಿದಿದೆ. ಇದನ್ನು ನಾನು ಆರಂಭದಿಂದಲೂ ಹೇಳುತ್ತಿದ್ದೆ. ಆದರೂ ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವರು ಬೆಂಗಳೂರಿನ ಎಲ್ಲಾ ನಾಗರಿಕ ವಿರೋಧದ ನಡುವೆಯೂ ಯೋಜನೆ ಯನ್ನು ಬಲವಂತವಾಗಿ ಅನುಷ್ಠಾನಗೊಳಿಸಲು ಮುಂದಾಗಿದ್ದರು ಎಂದು ರಾಜೀವ್ ಚಂದ್ರಶೇಖರ್ ಆಗ್ರಹಿಸಿದ್ದಾರೆ.
ನ್ಯಾಯಾಧೀಕರಣದ ಈ ಆದೇಶದ ನಂತರ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ. ಏಕೆಂದರೆ, ಮುಖ್ಯ ಮಂತ್ರಿ ಸಿದ್ದರಾಮಯ್ಯ, ಸಚಿವ ಜಾರ್ಜ್ ವ್ಯಾಪಕ ವಿರೋಧದ ನಡುವೆಯೂ ವಿವಾದಿತ ಯೋಜನೆಯನ್ನು ಬಲವಂತದಿಂದ ಆರಂಭಿಸಲು ನಿರ್ಧರಿಸಿದ್ದರು. ಆದ್ದರಿಂದ ಸರ್ಕಾರದ ಈ ಪ್ರಯತ್ನಕ್ಕೆ ಸಂಬಂಧಿಸಿದಂತೆ ಕೆಲವು ಗಂಭೀರ ಪ್ರಶ್ನೆಗಳಿಗೆ ಎದ್ದಿದ್ದು, ಅವುಗಳಿಗೆ ಸರ್ಕಾರವೇ ಗಂಭೀರವಾಗಿ ಉತ್ತರ ನೀಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಕರಣದಲ್ಲಿ ನ್ಯಾಯಪೀಠ ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆಳೆದು ಜನತೆಗೆ ನ್ಯಾಯ ದೊರಕಿಸಿದೆ. ಇದೇ ರೀತಿ ನಾವು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಬೇಕಿದ್ದು, ಮುಂದೇ ಇದೇರೀತಿ ಅಕ್ರಮಗಳು ನಡೆದರೆ ತೆರಿಗೆದಾರರ ಹಣ ದುರ್ಬಳಕೆಯಾಗದಂತೆ ಒಂದಾಗಿ ದನಿ ಎತ್ತಬೇಕಾಗುತ್ತದೆ ಎಂದು ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.
ವಿವಾದಿತ ಸ್ಟೀಲ್‌ ಬ್ರಿಡ್ಜ್‌ ಯೋಜನೆಗೆ (ಎನ್ವಿರಾನ್‌ಮೆಂಟ್‌ ಕ್ಲಿಯರೆನ್ಸ್‌ ) ರಾಜ್ಯಮಟ್ಟದ ಪರಿಸರ ಆಘಾತ ಅಂದಾಜೀಕರಣ ಸಮಿತಿ ಅನುಮತಿ ಕಡ್ಡಾಯ ಎಂದು ಎನ್‌ಜಿಟಿ (ರಾಷ್ಟ್ರೀಯ ಹಸಿರು ನ್ಯಾಯಪೀಠ) ಹೇಳಿದೆ.
ಸ್ಟೀಲ್‌ ಬ್ರಿಡ್ಜ್‌ ಕುರಿತು ವಿಚಾರಣೆ ನಡೆಸುತ್ತಿದ್ದ ಎನ್‌ಜಿಟಿ ಸೋಮವಾರ ಯೋಜನೆಗೆ ಸಂಬಂಧಿಸಿದಂತೆ ಅಂತಿಮ ಆದೇಶ ಹೊರಡಿಸಿದ್ದು, ಉದ್ದೇಶಿತ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ಬಿಡಿಎ ಕಾನೂನು ಪರಿಸರ ಕುರಿತ ನಿಯಮಗಳನ್ನು ಗಾಳಿಗೆ ತೂರಿದೆ. ಪರಿಸರ ಅಂದಾಜೀಕರಣ ಮಾಡದೆ ಈ ಯೋಜನೆ ಮುನ್ನಡೆಸಲು ಸಾಧ್ಯವಿಲ್ಲ ಎಂದು ಹೇಳಿದೆ. ಇದರೊಂದಿಗೆ ಸ್ಟೀಲ್‌ ಬ್ರಿಡ್ಜ್‌ ಯೋಜನೆ ಕಾನೂನು ಬದ್ಧವಾಗಿ ರೂಪಿಸಿಲ್ಲ. ಯೋಜನೆಗೆ ಸಂಬಂಧಿಸಿದಂತೆ ಪರಿಸರ ಹಾನಿ ಅಂದಾಜು ಮಾಡಿಲ್ಲ ಎಂದು ಸಿಟಿಜನ್‌ ಆ್ಯಕ್ಷನ್‌ ಫೋರಂ ಮತ್ತು ಹಿರಿಯ ಐಎಎಸ್‌ ಅಧಿಕಾರಿ ವಿ.ಬಾಲಸುಬ್ರಮಣಿಯನ್‌ ಅವರು ನಡೆಸುತ್ತಿದ್ದ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದಂತಾಗಿದೆ.
ಹಾಗೆಯೇ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅವರು, ಸರ್ಕಾರ ಈ ಯೋಜನೆಯಲ್ಲಿ ಎನ್ವಿರಾನ್‌ಮೆಂಟ್‌ ಕ್ಲಿಯರೆನ್ಸ್‌ ಪಡೆದಿಲ್ಲ ಎಂದು ಆರೋಪಿಸಿದ್ದು ಸಾಬೀತಾಗಿದೆ. ಹೀಗಾಗಿ ಸರ್ಕಾರ ಯೋಜನೆ ಕೈಬಿಟ್ಟಿರುವುದಾಗಿ ಹೇಳಿದ್ದರೂ ಯೋಜನೆಗೆ ಸಂಬಂಧಿಸಿದ ಆರೋಪಗಳಿಂದ ಸುಲಭವಾಗಿ ಮುಕ್ತವಾಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.