ಕೆರೆಗಳು ನಾಶವಾಗುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ : ರಾಜೀವ್ ಚಂದ್ರಶೇಖರ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 26, Jul 2018, 8:08 AM IST
Rajeev Chandrasekhar Slams Karnataka Govt
Highlights

ಕರ್ನಾಟಕ ಸರ್ಕಾರದ ಅನೇಕ ಯೋಜನೆಗಳು ಪರಿಸರ ನಿಯಮವನ್ನು ಉಲ್ಲಂಘಿಸುತ್ತಿವೆ. ಈ ಬಗ್ಗೆ ಪ್ರಶ್ನೆ ಮಾಡಲು ಸದ್ಯ ಹಸಿರು ನ್ಯಾಯಾಧಿಕ ರಣ ಮಾತ್ರವಿದ್ದು ಅಲ್ಲಿ ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಪ್ರಕರಣಗಳು ದಾಖಲಾಗಿವೆ. ಆದ್ದರಿಂದ ರಾಜ್ಯಮಟ್ಟ ದಲ್ಲಿ ಪರಿಸರ ನಿಯಂತ್ರಕರ ಅಗತ್ಯವಿದ್ದು ಕೇಂದ್ರ ಈ ಬಗ್ಗೆ ಗಮನ ಹರಿಸಬೇಕು ಎಂದು ರಾಜೀವ್ ಚಂದ್ರಶೇಖರ್ ಸಲಹೆ ನೀಡಿದರು.

ಬೆಂಗಳೂರು :  ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಪರಿಸರ ಕಾನೂನುಗಳನ್ನು ಗಾಳಿಗೆ ತೂರಲಾಗುತ್ತಿದೆ. ಇಲ್ಲಿನ ಕೆರೆಗಳು ಸಾಯುತ್ತಿದ್ದರೂ ರಾಜ್ಯ ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ತಾಳಿದೆ ಎಂದು ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಬುಧವಾರದಂದು ರಾಜ್ಯಸಭೆಯ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು ಭವಿಷ್ಯದ ಜನಾಂಗಕ್ಕಾಗಿ ಪರಿಸರವನ್ನು ಕಾಪಾಡುವುದು ನಮ್ಮ ಹೊಣೆಯಾಗಿದ್ದು ಈ ನಿಟ್ಟಿನಲ್ಲಿ ಸರ್ಕಾರ ಕೆಲವು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆಯಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಸರ್ಕಾರದ ಅನೇಕ ಯೋಜನೆಗಳು ಪರಿಸರ ನಿಯಮವನ್ನು ಉಲ್ಲಂಘಿಸುತ್ತಿವೆ. ಈ ಬಗ್ಗೆ ಪ್ರಶ್ನೆ ಮಾಡಲು ಸದ್ಯ ಹಸಿರು ನ್ಯಾಯಾಧಿಕ ರಣ ಮಾತ್ರವಿದ್ದು ಅಲ್ಲಿ ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಪ್ರಕರಣಗಳು ದಾಖಲಾಗಿವೆ. ಆದ್ದರಿಂದ ರಾಜ್ಯಮಟ್ಟ ದಲ್ಲಿ ಪರಿಸರ ನಿಯಂತ್ರಕರ ಅಗತ್ಯವಿದ್ದು ಕೇಂದ್ರ ಈ ಬಗ್ಗೆ ಗಮನ ಹರಿಸಬೇಕು ಎಂದು ರಾಜೀವ್ ಚಂದ್ರಶೇಖರ್ ಸಲಹೆ ನೀಡಿದರು. ರಾಜ್ಯಮಟ್ಟದ ರಾಜ್ಯ ಪರಿಸರ ಪರಿಣಾಮ ಅಧ್ಯಯನ ಪ್ರಾಧಿಕಾರವು ಪರಿಸರ ಹಾನಿಯನ್ನು ನಿಯಂತ್ರಿಸುವ ಬದಲು ತಾನೇ ಪರಿಸರ ಕಾನೂನುಗಳನ್ನು ಮುರಿಯುತ್ತಿದೆ.  

ಬೆಂಗಳೂರಿನ ವಿವಾದಿತ ಸ್ಟೀಲ್ ಫ್ಲೈ ಓವರ್, ಪೆರಿಫೆರಲ್ ವರ್ತುಲ ರಸ್ತೆ ಯೋಜನೆಗಳಲ್ಲಿ ಪರಿಸರ ರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದವರ ವಿರುದ್ಧ ಯಾವುದೇ ಕ್ರಮವನ್ನು ಪ್ರಾಧಿಕಾರ ಕೈಗೊಂಡಿಲ್ಲ. ಅಷ್ಟು ಮಾತ್ರವಲ್ಲದೆ ತನ್ನ ಮಿತಿಯನ್ನು ದಾಟಿ ಯೋಜನೆಯನ್ನು ಜಾರಿಗೆ ತರಲು ಪರಿಸರ ಅನುಮತಿ ಕೇಳಬೇಕೇ, ಬೇಡವೇ ಎಂಬ ಅಭಿಪ್ರಾಯವನ್ನು ಕೂಡ ನೀಡಿದೆ. ಬಿಡಿಎ ಮತ್ತು ಪ್ರಾಧಿಕಾರದ ನಡುವೆ ನಡೆದ ಪತ್ರ ವ್ಯವಹಾರಗಳಲ್ಲಿ ಮರ ಕಡಿಯುವುದರಿಂದ ಆಗುವ ಪರಿಸರ ಪರಿಣಾಮದ ಉಲ್ಲೇಖವೇ ಇರಲಿಲ್ಲ. 

ಹಸಿರು ನ್ಯಾಯಾಧಿಕರಣದ ಮಧ್ಯೆ ಪ್ರವೇಶದ ಬಳಿಕವೇ ಸ್ಟೀಲ್ ಫ್ಲೈ ಓವರ್ ಕಾನೂನು ಬಾಹಿರ ಎಂಬ ತೀರ್ಮಾನಕ್ಕೆ ಬರಲಾಯಿತು. ಇದು ರಾಜ್ಯಮಟ್ಟದಲ್ಲಿ ಪ್ರಾಧಿಕಾರವು ತನ್ನ ಕಾರ್ಯ ನಿರ್ವಹಣೆಯಲ್ಲಿ ಸೋತಿರುವುದಕ್ಕೆ ಉದಾಹರಣೆಯಾಗಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದರು. 

ಕೆರೆಗಳಿಗೆ ಹಾನಿ: ಬೆಂಗಳೂರಿನ ಕೆರೆಗಳು ಸಾಯುತ್ತಿವೆ. ಆದರೆ ಕರ್ನಾಟಕ ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ತಾಳಿದೆ. ಕೆರೆಗಳ ಬಫರ್ ವಲಯದಲ್ಲಿನ ಕಾನೂನು ಬಾಹಿರ ಚಟುವಟಿಕೆಗಳು ಮತ್ತು ದೊಡ್ಡ ಪ್ರಮಾಣದಲ್ಲಿನ ಅಕ್ರಮ ನಿರ್ಮಾಣಗಳು ನಿರ್ದಯವಾಗಿ ಕೆರೆಗಳನ್ನು ಕೊಲ್ಲುತ್ತಿವೆ.  ಬೆಂಗಳೂರಿನ ಕೆರೆಗಳು ಸಂಕೀರ್ಣವಾದ ಅಂತರ್ ಸಂಪರ್ಕ ಹೊಂದಿದ್ದು ಇವುಗಳನ್ನು ಅತಿಕ್ರಮಿಗಳು ಮತ್ತು ಮಲಿನಕಾರರಿಂದ ಸ್ವಾಧೀನ ಪಡಿಸಿಕೊಂಡು ರಕ್ಷಿಸಬೇಕಿದೆ. ಇದು ನಗರದ ಜಲ ಭದ್ರತೆ ಮತ್ತು ಪರಿಸರ ಸುಸ್ಥಿರತೆಯ ಕಾರಣದಿಂದ ಪ್ರಾಮುಖ್ಯತೆ ಪಡೆದಿದೆ ಎಂದು ರಾಜೀವ್ ಚಂದ್ರಶೇಖರ್ ವಿವರಿಸಿದರು.

ಕೇಂದ್ರ ಮಧ್ಯಪ್ರವೇಶಿಸಲಿ: ಆದರೆ ಪರಿಸರ ದೃಷ್ಟಿಯಿಂದ  ಪ್ರಮುಖವಾಗಿರುವ ಕೆರೆ ತೀರ, ಕೆರೆಯ ಅಚ್ಚುಕಟ್ಟು ಪ್ರದೇಶ ಮುಂತಾದವುಗಳನ್ನು ರಕ್ಷಿಸಲು ಹಸಿರು ನ್ಯಾಯಾಧಿಕರಣ ನಿರ್ದೇಶನ ನೀಡಿದರೂ ರಾಜ್ಯಸರ್ಕಾರ ಗಟ್ಟಿ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಕೇಂದ್ರ ಪರಿಸರ ಸಚಿವಾಲಯ ಮಧ್ಯೆ ಪ್ರವೇಶಿಸಬೇಕು ಎಂದು ರಾಜೀವ್ ಚಂದ್ರಶೇಖರ್ ಮನವಿ ಮಾಡಿದ್ದಾರೆ.

ಕರ್ನಾಟಕ ಸರ್ಕಾರವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಮತ್ತು ಪಶ್ಚಿಮ ಘಟ್ಟದಂತಹ ಪರಿಸರ ಸೂಕ್ಷ್ಮವಲಯಗಳಲ್ಲಿ ಕೈಗೊಂಡಿರುವ ಅನೇಕ ಯೋಜನೆಗಳು ಪರಿಸರಕ್ಕೆ ಭಾರಿ ಹಾನಿ ತರಲಿವೆ ಎಂಬ ವರದಿಗಳಿವೆ. ಕರ್ನಾಟಕ ಸರ್ಕಾರವು ನ್ಯಾಯಾಲಯದ ನಿರ್ದೇಶನ ಮತ್ತು ಪರಿಸರ ಕಾನೂನುಗಳ ನಿರಂತರ ಉಲ್ಲಂಘನೆ ಮಾಡುತ್ತಿದ್ದು ಇದನ್ನು ತಡೆಯಲು ಪ್ರಾಧಿಕಾರ ವಿಫಲವಾಗಿದೆ ಎಂದು ರಾಜೀವ್ ಚಂದ್ರಶೇಖರ್ ರಾಜ್ಯ ಸಭೆಯ ಗಮನಕ್ಕೆ ತಂದರು. 

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಗಣಿಗಾರಿಕೆ ನಡೆಯುತ್ತಿದೆ. ಇದೀಗ ಕರ್ನಾಟಕ ಸರ್ಕಾರ ಪರಿಸರ ಸೂಕ್ಷ್ಮ ಪ್ರದೇಶದ ಗಾತ್ರವನ್ನು ಕಡಿಮೆ ಮಾಡಲು 2016 ರ ಜೂನ್‌ನಲ್ಲಿ ಅರಣ್ಯ ಮತ್ತು ಪರಿಸರ ಸಚಿವಾಲಯ ಹೊರಡಿಸಿದ್ದ ಅಧಿಸೂಚನೆಯ ನಿಯಮವನ್ನು ಸಡಿಲಗೊಳಿಸುವ ಪ್ರಯತ್ನ ನಡೆಸುತ್ತಿದೆ. ರಾಜ್ಯ ಸರ್ಕಾರದ ಇಂತಹ ಕ್ರಮಕ್ಕೆ ಭಾರತ ಸರ್ಕಾರವು ಅವಕಾಶ ಮಾಡಿಕೊಡಬಾರದು ಎಂದು ರಾಜೀವ್ ಚಂದ್ರಶೇಖರ್ ಕೋರಿದ್ದಾರೆ.

loader