ಪೈಲಟ್ ನೆರವಿಗೆ ಧಾವಿಸಿದ ಯುವಕರಿಗೆ ಆರ್‌ಸಿ ಅಭಿನಂದನೆ
ಪೈಲಟ್ ನೆರವಿಗೆ ಧಾವಿಸಿದ ಯುವಕರಿಗೆ ಆರ್‌ಸಿ ಅಭಿನಂದನೆ | ಗಾಯಗೊಂಡು ಬಿದ್ದ ಪೈಲಟ್‌ಗಳನ್ನು ರಕ್ಷಿಸಿದ್ದ ಕನ್ನಡಿಗ ಯುವಕರು | ಪ್ರತ್ಯೇಕ ಪತ್ರ ಬರೆದು ಅಭಿನಂದನೆ ಸಲ್ಲಿಸಿದ ಸಂಸದ ರಾಜೀವ್ ಚಂದ್ರಶೇಖರ್
ಬೆಂಗಳೂರು (ಫೆ. 21): ಏರೋ ಇಂಡಿಯಾದ ಪ್ರದರ್ಶನ ಆರಂಭಕ್ಕೂ ಮುನ್ನ ನಡೆದ ತಾಲೀಮು ವೇಳೆ ನಡೆದ ದುರಂತ ಸಂದರ್ಭದಲ್ಲಿ ಸಮಯ ಪ್ರಜ್ಞೆಯಿಂದ ಯೋಧರ ರಕ್ಷಣೆಗೆ ಮುಂದಾದ ನಾಗರಿಕರಿಗೆ ಸಂಸದ ರಾಜೀವ್ ಚಂದ್ರಶೇಖರ್ ಅಭಿನಂದನೆ ಸಲ್ಲಿಸಿದ್ದಾರೆ.
ನಗರದ ಉದಯ್‌ಕುಮಾರ್, ಬಿ.ಎಂ.ಚೇತನ್‌ಕುಮಾರ್, ಎಚ್.ಕೆ.ಪ್ರಜ್ವಲ್ ಮತ್ತು ಬೀದರ್ ಜಿಲ್ಲೆ ಹುಮಾನಾಬಾದ್‌ನ ಸುಧಾಕರ್ ರೆಡ್ಡಿ ಅವರಿಗೆ ಬುಧವಾರ ಪ್ರತ್ಯೇಕ ಅಭಿನಂದನಾ ಪತ್ರಗಳನ್ನು ಬರೆದು ಅವರ ಸೇವೆಯನ್ನು ಶ್ಲಾಘಿಸಿದ್ದಾರೆ.
ವಾಯುಸೇನಾ ಯೋಧರಾದ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಅವರನ್ನು ಕಳೆದುಕೊಂಡು ಶೋಕತಪ್ತರಾದ ವೇಳೆ ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ವಾಯುಸೇನಾ ಯೋಧರಾದ ವಿಂಗ್ ಕಮಾಂಡರ್ ವಿಜಯ್ ಶಳ್ಕೆ ಮತ್ತು ಸ್ಕಾ$್ವಡ್ರನ್ ಲೀಡರ್ ತೇಜೇಶ್ವರ್ ಸಿಂಗ್ ಅವರನ್ನು ಸಮಯಪ್ರಜ್ಞೆಯೊಂದಿಗೆ ರಕ್ಷಿಸಲು ಮುಂದಾಗಿದ್ದಕ್ಕೆ ಸಮಸ್ತ ಭಾರತೀಯರ, ಕನ್ನಡಿಗರ ಮತ್ತು ಬೆಂಗಳೂರಿಗರ ಪರವಾಗಿ ಅಭಿನಂದಿಸುತ್ತಿದ್ದೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ನಿವೃತ್ತ ವಾಯುಸೇನಾ ಯೋಧರ ಪುತ್ರನಾಗಿ, ಭಾರತೀಯ ವಾಯು ಸೇನೆಯ ಪರಿವಾರದವನಾಗಿ, ಸೂರ್ಯಕಿರಣ್ ಪರಿವಾರದ ಪರವಾಗಿ ಮತ್ತು ಗಾಯಗೊಂಡಿರುವ ಪೈಲಟ್‌ಗಳ ಕುಟುಂಬಗಳ ಪರವಾಗಿ ಯೋಧರಿಗೆ ಆತ್ಮಸ್ಥೈರ್ಯ ತುಂಬಿ ನೆರವಾಗಿದ್ದಕ್ಕೆ ನಿಮಗೆ ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ದೇಶ ಕಾಯುವ ಸೈನಿಕರಿಗೆ ನೆರವಾಗುವ ಮೂಲಕ ತಾವು ತಮ್ಮ ಸ್ನೇಹಿತರು ನಿಜವಾದ ಕನ್ನಡಿಗರ, ಬೆಂಗಳೂರಿಗರ ಮತ್ತು ಭಾರತೀಯರ ಸ್ಫೂರ್ತಿ ಮತ್ತು ದೇಶಪ್ರೇಮವನ್ನು ಪ್ರತಿನಿಧಿಸಿದ್ದೀರಿ. ನಮ್ಮ ರಕ್ಷಣೆಗೆ ಸದಾ ಎದೆಯೊಡ್ಡಿ ನಿಲ್ಲುವ ಯೋಧರನ್ನು ರಕ್ಷಿಸುವುದರ ಮೂಲಕ ಮಾನವೀಯತೆ ಮತ್ತು ಕರ್ತವ್ಯ ಪ್ರಜ್ಞೆ ಮೆರೆದಿದ್ದೀರಿ ಎಂದು ರಾಜೀವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾವು ಮತ್ತು ತಮ್ಮ ಸಹೃದಯಿ ಮತ್ತು ನಿಸ್ವಾರ್ಥ ಮನೋಭಾವವುಳ್ಳ ಸ್ನೇಹಿತರು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡುತ್ತೀರಿ ಎಂಬ ಸಂಪೂರ್ಣ ವಿಶ್ವಾಸ ನನಗಿದೆ ಎಂದಿದ್ದಾರೆ.