ಕೋಟಾ[ಮೇ.23]: ಗಾಢ ನಿದ್ರೆಯಲ್ಲಿದ್ದ ಮಹಿಳೆ ದಿಢೀರನೆ ನಿದ್ದೆಯಿಂದ ಎದ್ದು ತನ್ನ ಆರು ತಿಂಗಳ ಮಗುವನ್ನು ನೀರಿನ ಟ್ಯಾಂಕ್‌ಗೆ ಬಿಸಾಡಿ ಮತ್ತೆ ಮಲಗಿರುವ ಪ್ರಸಂಗ ರಾಜಸ್ಥಾನದ ಕೋಟಾ ಪಟ್ಟಣದ ಸರಸ್ವತಿ ಕಾಲೋನಿಯಲ್ಲಿ ನಡೆದಿದೆ. ದೀಪಿಕಾ ಗುಜ್ಜರ್‌ ಎಂಬಾಕೆಯೇ ಈ ಅಪರಾಧವೆಸಗಿರುವ ಮಹಿಳೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸಿರುವ ಪೊಲೀಸರ ಮುಂದೆ ತಾನೇಕೆ ಹಾಗೆ ಮಾಡಿದ್ದೇನೆ ಎನ್ನುವುದು ನನಗೆ ಗೊತ್ತಿಲ್ಲ ಎಂದೇ ಮಹಿಳೆ ಹೇಳಿಕೊಂಡಿದ್ದಾಳೆ. ಸದ್ಯ ಪೊಲೀಸರು ಮಹಿಳೆಯನ್ನು ಬಂಧನದಲ್ಲಿರಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಪೊಲೀಸರು ತಿಳಿಸಿರುವ ಮಾಹಿತಿಯಂತೆ ಮೂರು ಅಂತಸ್ತಿನ ಕಟ್ಟಡ ಇದಾಗಿದ್ದು, ಆಕೆ ಒಂದನೇ ಅಂತಸ್ತಿನಿಂದ ಶಿವಾ ಹೆಸರಿನ ಮಗುವನ್ನು ಎರಡನೇ ಅಂತಸ್ತಿಗೆ ತಂದು ನೀರಿನ ಟ್ಯಾಂಕ್‌ಗೆ ಹಾಕಿ ಮತ್ತೆ ಒಂದನೇ ಅಂತಸ್ತಿಗೆ ಬಂದು ಮಲಗಿದ್ದಾಳೆ. ಕೆಲ ಹೊತ್ತಿನಲ್ಲಿ ಪತಿ ಎದ್ದು ನೋಡಿದಾಗ ಮಗು ಇಲ್ಲದಿರುವುದು ಗೊತ್ತಾಗಿದ್ದು, ಹುಡುಕಿದಾಗ ಟ್ಯಾಂಕ್‌ನಲ್ಲಿರುವುದು ಗೊತ್ತಾಗಿದೆ. ಆದರೆ ಮಗು ಬದುಕಿರಲಿಲ್ಲ. ಪ್ರಾಥಮಿಕ ತನಿಖೆ ವೇಳೆ ಮಹಿಳೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವುದು ಕಂಡುಬಂದಿದೆ.