ಜೈಪುರ[ಮೇ.15]: ರಾಜಸ್ಥಾನದಲ್ಲಿ ಈ ಹಿಂದಿನ ವಸುಂಧರಾ ರಾಜೆ ನೇತೃತ್ವದ ಸರ್ಕಾರ ಶಾಲಾ ಪಠ್ಯದಲ್ಲಿ ಸೇರಿಸಿದ್ದ ಹಿಂದುತ್ವವನ್ನು ವೈಭವೀಕರಿಸುವ ಅಂಶಗಳಿಗೆ ಕಾಂಗ್ರೆಸ್‌ ಸರ್ಕಾರ ಕತ್ತರಿ ಹಾಕಲು ಮುಂದಾಗಿದೆ.

10ನೇ ತರಗತಿಯ ಇತಿಹಾಸ ಪಠ್ಯದಲ್ಲಿನ ಭಾರತದ ಸ್ವಾತಂತ್ರ್ಯ ಹೋರಾಟ ಎಂಬ ಅಧ್ಯಾಯದಲ್ಲಿ ಆರ್‌ಎಸ್‌ಎಸ್‌ ಮುಖಂಡ ವಿನಾಯಕ್‌ ಸಾವರ್ಕರ್‌ ಅವರನ್ನು ‘ವೀರ ಕ್ರಾಂತಿಕಾರಿ’ ಎಂದು ಬಣ್ಣಿಸಲಾಗಿತ್ತು. ಸಾವರ್ಕರ್‌ ಅವರನ್ನು ‘2 ಬಾರಿ ಜೀವಾವಧಿ ಶಿಕ್ಷೆಗೆ ಗುರಿಯಾದ ಏಕೈಕ ವೀರ ಕ್ರಾಂತಿಕಾರಿ ಎಂದು ಬಣ್ಣಿಸಲಾಗಿತ್ತು. ಆದರೆ ಇದೀಗ ಪ್ರೌಢ ಶಿಕ್ಷಣ ಮಂಡಳಿಯು ಹೊಸ ಪಠ್ಯ ಕ್ರಮದಲ್ಲಿ ಸಾವರ್ಕರ್‌ ಅವರನ್ನು ಹೊಗಳುವ ವಿವರಣೆ ತೆಗೆದುಹಾಕಿ, ಸಾವರ್ಕರ್‌ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ನೀಡಿದ ಅಂಶಗಳನ್ನು ಸೇರ್ಪಡೆ ಮಾಡಲು ನಿರ್ಧರಿಸಿದೆ.

ಈ ನಡುವೆ ಸರ್ಕಾರದ ನಿರ್ಧಾರವನ್ನು ಬಿಜೆಪಿ ಕಟುವಾಗಿ ಟೀಕಿಸಿದೆ. ಇದು ಹಿಂದುತ್ವ ವಿರೋಧಿ ಧೋರಣೆ ಎಂದು ಮಾಜಿ ಶಿಕ್ಷಣ ಸಚಿವ ವಾಸುದೇವ್‌ ದೇವಾನಿ ಕಿಡಿಕಾರಿದ್ದಾರೆ.