ನವದೆಹಲಿ [ಜೂ.18] : ದೇಶದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, 17 ಲೋಕಸಭಾ ಮೊದಲ ಅಧಿವೇಶನ ಆರಂಭವಾಗಿದೆ.  ಇದೇ ವೇಳೆ ಲೋಕಸಭೆಗೆ ನೂತನ ಸ್ಪೀಕರ್ ಆಯ್ಕೆ ಪ್ರಕ್ರಿಯೆ ಜೋರಾಗಿದೆ. 

ರಾಜಸ್ಥಾನದ ಕೋಟಾ ಕ್ಷೇತ್ರದ ಬಿಜೆಪಿ ಸಂಸದ ಓಂ ಬಿರ್ಲಾ ಅವರನ್ನು 17 ನೇ ಲೋಕಸಭಾ ಸ್ಪೀಕರ್ ಅಭ್ಯರ್ಥಿಯಾಗಿ ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಸ್ಪೀಕರ್ ಆಗಿ ಬಿರ್ಲಾ ಆಯ್ಕೆ ಬಹುತೇಕ ಖಚಿತವಾಗಿದೆ. 

ಈ ಬಗ್ಗೆ ಬಿರ್ಲಾ ಪತ್ನಿ ಮೀನಾ ಬಿರ್ಲಾ ಅವರು ಪ್ರತಿಕ್ರಿಯಿಸಿದ್ದು,  ತಮ್ಮ ಕುಟುಂಬಕ್ಕೆ ಇದೊಂದು ಹೆಮ್ಮೆ ತರುವಂತಹ ವಿಚಾರ.  ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಅವರನ್ನು ಬಿಜೆಪಿಯಿಂದ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದಕ್ಕೆ ನಾಯಕರಿಗೆ ಧನ್ಯವಾದ ಎಂದು ಹೇಳಿದ್ದಾರೆ. 

ಇನ್ನು ಓಂ ಬಿರ್ಲಾ ಲೋಕಸಭಾ ಸ್ಪೀಕರ್ ಆಗಿ ಆಯ್ಕೆ ಮಾಡಲು ಹಲವು ಪಕ್ಷಗಳು ಕೂಡ ಬೆಂಬಲ ಸೂಚಿಸಿವೆ. JDU, AIADMK, BJD, ಅಪ್ನಾ ದಳ್ ಸೇರಿದಂತೆ ವಿವಿಧ ಪಕ್ಷಗಳಿಂದ ಬೆಂಬಲ ದೊರಕಿದೆ. 

57 ವರ್ಷದ ಬಿರ್ಲಾ ರಾಜಸ್ತಾನ ವಿಧಾನಸಭೆಯಲ್ಲಿ ಮೂರು ಬಾರಿ ಶಾಸಕರಾಗಿದ್ದರು. 17 ನೇ ಲೋಕಸಭೆಗೆ ಅವರು ಎರಡನೇ ಬಾರಿಗೆ ಕೋಟ ಕ್ಷೇತ್ರದಿಂದ ಆಯ್ಕೆ ಆಗಿದ್ದಾರೆ.  ಬಿರ್ಲಾ ಅವರ ಪತ್ನಿ ಡಾ. ಅಮಿತಾ ಬಿರ್ಲಾ. ಇಬ್ಬರು ಹೆಣ್ಣು ಮಕ್ಕಳು. ಆಕಾಂಕ್ಷ ಚಾರ್ಟರ್ಡ ಅಕೌಂಟೆಂಟ್. ಅಂಜಲಿ ರಾಮಾಜಾಸ್ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದ ವಿದ್ಯಾರ್ಥಿ.

2019ರ ಲೋಕಸಭಾ ಚುನಾವಣೆಗೆ ಕೋಟಾ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸಿನ ರಾಮನಾರಾಯಣ ಅವರನ್ನು  2.5 ಲಕ್ಷ ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.  ಓಂ ಪ್ರಕಾಶ್  ಒಟ್ಟು ಮೂರು ಬಾರಿ ಶಾಸಕರಾಗಿದ್ದು, ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.