ಬಿಸಿಲುನಾಡು ಕಲಬುರಗಿ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಜೋರಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಸೇತುವೆಗಳು ಮುಳುಗಡೆಯಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.

ಕಲಬುರ್ಗಿ(ಸೆ. 15): ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಮಳೆಯ ಆರ್ಭಟ ಜೋರಾಗಿದೆ. ಹಲವು ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ. ಸೇಡಂ ತಾಲೂಕಿನ ಮಳಖೇಡ್ ಸೇತುವೆ ಜಲಾವೃತವಾಗಿದೆ. ಕಾಗಿಣಾ ನದಿಗೆ ಅಡ್ಡಲಾಗಿ ಕಟ್ಚಿರುವ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಸೇಡಂ-ಕಲಬುರಗಿ ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಚಿತ್ತಾಪುರ ತಾಲೂಕಿನ ದಂಡೋತಿ ರಸ್ತೆ ಕೂಡ ಮುಳುಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಪರ್ಯಾಯ ಮಾರ್ಗವಾಗಿ ಸಂಚರಿಸುವಂತೆ ಪ್ರಯಾಣಿಕರಿಗೆ ಸಲಹೆ ನೀಡಲಾಗುತ್ತಿದೆ. ಇನ್ನು, ಚಿಂಚೋಳಿ ತಾಲೂಕಿನ ತಾಜಲಾಪುರ ಸೇತುವೆ ಕೂಡಾ ಮಳೆನೀರಿನಿಂದ ಜಲಾವೃತವಾಗಿದೆ. ಮುಲ್ಲಾಮಾರಿ ನದಿಗೆ ಕಟ್ಟಲಾಗಿರುವ ಸೇತುವೆ ಜಲಾವೃತಗೊಂಡು ತಾಜಲಾಪುರ, ಚಿಮ್ಮನಚೋಡ್, ಸಲಗರ ಬಸಂಪೂರ, ಹಸರಗುಂಡಗಿ ಗ್ರಾಮಗಳ ರಸ್ತೆ ಸಂಚಾರ ಕಡಿತಗೊಂಡಿದೆ.

ವರದಿ: ಶರಣಯ್ಯ ಹಿರೇಮಠ, ಸುವರ್ಣನ್ಯೂಸ್​